ಬೆಂಗಳೂರು: 2018ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿದ್ದು, ಮೊದಲ ಭಾಗವಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌ಯಡಿಯೂರಪ್ಪ ಅವರು ಪಕ್ಷದ ಜಿಲ್ಲಾ ಪದಾಧಿಕಾರಿಗಳು ಮತ್ತು ಪ್ರಮುಖರ ಸಭೆಗೆ ಚಾಲನೆ ನೀಡಿದ್ದಾರೆ.
ರಾಜ್ಯದ ಎಲ್ಲಾ 36 ಬಿಜೆಪಿ ಜಿಲ್ಲಾ ಘಟಕಗಳ ಪದಾಧಿಕಾರಿಗಳು ಮತ್ತು ಮುಖಂಡರ ಸಭೆಯನ್ನು ಈ ತಿಂಗಳಲ್ಲಿ ಪೂರ್ಣಗೊಳಿಸಲಿರುವ ಅವರು, ಚುನಾವಣಾ ಸಿದ್ಧತೆ, ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಜೊತೆಗೆ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸುವ ಬಗ್ಗೆಯೂ ಚರ್ಚಿಸಲಿದ್ದಾರೆ.
ಅತೃಪ್ತರ ಸಭೆ ರದ್ದು: ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಬದಲಾವಣೆ ವಿಳಂಬ ಮತ್ತು ಶಿಸ್ತು ಕ್ರಮಕ್ಕೆ ಒಳಗಾಗಿರುವ ಪಕ್ಷದ ಮುಖಂಡರ ವಿರುದ್ಧದ ಶಿಸ್ತು ಕ್ರಮ ಕೈಬಿಡಬೇಕು ಎಂಬ ಬೇಡಿಕೆ ಮುಂದಿಟ್ಟಿರುವ “ಅಸಮಾಧಾನಿತ ಗುಂಪು’ ಜತೆಗೆ ಮಂಗಳವಾರ ನಿಗದಿಯಾಗಿದ್ದ ಸಭೆ ದಿಡೀರ್ ರದ್ದಾಗಿದೆ.
ಈ ಹಿಂದೆ ತಮಗೆ ಪತ್ರ ಬರೆದಾಗಲೇ ಅಸಮಾಧಾನಿತರ ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮಾತುಕತೆಗೆ ಮುಂದಾಗಿದ್ದರು. ಆದರೆ, ಪದಾಧಿಕಾರಿಗಳ ಪಟ್ಟಿ ಬದಲಾವಣೆ ಮತ್ತು ಶಿಸ್ತು ಕ್ರಮ ಕೈಬಿಡುವ ಕುರಿತ ತಮ್ಮ ಬೇಡಿಕೆ ಈಡೇರುವವರೆಗೆ ಮಾತುಕತೆಗೆ ಬರುವುದಿಲ್ಲ ಎಂದು ಅಸಮಾಧಾನಿತರು ಸಭೆಗೆ ಹೋಗಿರಲಿಲ್ಲ.
ಈ ಮಧ್ಯೆ ಮತ್ತೆ ಅವರನ್ನು ಕರೆಸಿ ಮಾತುಕತೆ ನಡೆಸಲು ನಿರ್ಧರಿಸಿದ್ದ ಯಡಿಯೂರಪ್ಪ ಅವರು ಅದಕ್ಕಾಗಿ ಮಂಗಳವಾರದ ದಿನಾಂಕ ನಿಗದಿಪಡಿಸಿದ್ದರು. ಆದರೆ, ಮತ್ತೆ ಸಭೆ ರದ್ದಾಗಿದೆ ಎಂದು ತಿಳಿದುಬಂದಿದೆ.