ವಾಡಿ (ಚಿತ್ತಾಪುರ): ಅಮ್ಮ ಹಸಿವಾಗಿದೆ ಊಟ ಕೊಡು ಎಂದಿತು ಮಗು. ಊಟ ಬೇಕಾ ನಿನಗೆ ಕೊಡ್ತೀನಿ ಬಾ ಎಂದು ಹತ್ತಿರ ಕರೆದ ಮಲತಾಯಿ, ಅನ್ನದ ತಟ್ಟೆ ಕೈಗಿಡುವ ಬದಲು ಕೆಂಡದಿಂದ ಕಾದ ಸಲಾಕೆಯಿಂದ ಬೆರಳಿಗೆ ಬರೆಯಿಟ್ಟಳು ಹೆಮ್ಮಾರಿ. ಸುಟ್ಟ ಗಾಯದಿ ಸಂಕಟಪಟ್ಟ ಮಗು ಪಕ್ಕದ ಮನೆಯವರಲ್ಲಿ ಆಸರೆ ಪಡೆದು ಅಡಗಿಕೊಂಡು ರೋಧಿಸಿತು ಹಸುಗೂಸು.
ಅತ್ತೂ ಅತ್ತು ಕಣ್ಣೀರಾದರೂ ಕನಿಕರ ಪಡದೆ ಬೆನ್ನಟ್ಟಿ ಬಂದ ಮಲತಾಯಿ ಎಂಬ ಮಾಯೆ ಮನೆಗೆ ತಂದು ಮತ್ತಷ್ಟು ಕ್ರೌರ್ಯ ಮೆರೆದಳು. ಹೆತ್ತಮ್ಮ ಮಸಣದ ಮನೆಯಲ್ಲಿದ್ದರೆ, ಹೆತ್ತಪ್ಪ ದುಡಿಯಲು ಮಹಾರಾಷ್ಟ್ರ ಸೇರಿಕೊಂಡಿದ್ದಾನೆ. ಇತ್ತ ಮುತ್ತಿಟ್ಟು ತುತ್ತಿಡಬೇಕಾದ ಮಲತಾಯಿ ಮಸಣ ಸೇರುವಷ್ಟು ಹೊಡೆದು ಮಗುವಿಗೆ ಚಿತ್ರಹಿಂಸೆ ನೀಡಿದ್ದಾಳೆ. ಸದ್ಯ ಮಗು ಬೀದಿಗೆ ಬಿದ್ದು ಆಸರೆಗಾಗಿ ಮುಗಿಲು ನೋಡುತ್ತಿದೆ!
ಚಿತ್ತಾಪುರ ತಾಲೂಕಿನ ವಾಡಿ ನಗರ ಸಮೀಪದ ನಾಲವಾರ ಸ್ಟೇಷನ್ ಬಡಾವಣೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಹೃದಯವೇ ತಲ್ಲಣಿಸುವ ಈ ಘಟನೆಗೆ ಜನರು ಮರುಗುತ್ತಿದ್ದಾರೆ. ಬಡಾವಣೆಯ ನಿವಾಸಿ ತಿಪ್ಪಣ್ಣ ಎಂಬುವರು ಹೆಂಡತಿ ಇಲ್ಲದ ಕಾರಣಕ್ಕೆ ಮರೆಮ್ಮ ಎಂಬ ಯುವತಿಯೊಂದಿಗೆ ಮತ್ತೊಂದು ಮದುವೆಯಾಗಿದ್ದ. ಮೊದಲ ಹೆಃಡತಿಗೆ ನಾಲ್ಕು ವರ್ಷದ ಸೋನಾಲಿಕಾ ಎಂಬ ಮಗುವಿದೆ. ಕರುಳ ಕುಡಿಯನ್ನು ಮಲತಾಯಿಯ ಮಡಲಿಗಿಟ್ಟು ದುಡಿಯಲು ಮಹಾರಾಷ್ಟ್ರಕ್ಕೆ ಹೋಗಿದ್ದಾನೆ ಎನ್ನಲಾಗಿದೆ.
ನಾಲ್ಕು ವರ್ಷದ ಮಗು ಸೋನಾಲಿಕಾ ಊಟಕ್ಕಾಗಿ ಮರುಗುತ್ತಿದೆ. ಮಲತಾಯಿಯ ಬಳಿ ಹೋಗಿ ಊಟ ಕೇಳಿದರೆ ಹೊಡೆಯುವುದು ಬಡಿಯುವುದು ಮಾಡುತ್ತಾಳೆ. ಇದು ದಿನನಿತ್ಯದ ಸಮಸ್ಯೆಯಾಗಿ ಹಸುಳೆ ಕಂದಮ್ಮ ಜಗತ್ತು ಅರೆಯುವ ಮೊದಲೇ ದೌರ್ಜನ್ಯ ಅನುಭವಿಸುತ್ತಿದ್ದು, ಬಡಾವಣೆಯ ಜನರು ಮಹಿಳೆಯ ವಿರುದ್ಧ ಸಿಡಿದೆದ್ದಿದ್ದಾರೆ.
ಸೋಮವಾರ ಮತ್ತೆ ಮಗುವಿನ ಕೈಗೆ ಬರೆ ಬಿದ್ದು ಅಳುತ್ತು ಬೀದಿಗೆ ಬಂದಾಗ ಜನರು ಒಗ್ಗಟ್ಟಾಗಿದ್ದಾರೆ. ಮನೆಗೆ ಹೋಗಿ ಮಲತಾಯಿ ಮರೆಮ್ಮಳ ಜತೆ ವಾಗ್ವಾದ ನಡೆಸಿದ್ದಾರೆ. ನೀನೇನು ಮನುಷ್ಯಳಾ ಪಿಶಾಚಿನಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲೇ ಬಿಟ್ಟರೆ ಮಗುವನ್ನು ಈಕೆ ಸಾಯಿಸುತ್ತಾಳೆ ಎಂದು ನಿರ್ಧರಿಸಿ ವಾಡಿ ಠಾಣೆಯ ಪೊಲೀಸರಿಗೆ ಹಾಗೂ ಚೈಲ್ಡ್ ಲೈನ್ ಸಹಾಯವಾಣಿಗೆ ದೂರು ಕೊಟ್ಟಿದ್ದಾರೆ. ಮಗು ಸದ್ಯ ಚೈಲ್ಡ್ ಲೈನ್ ಸಂಸ್ಥೆಯ ವಶದಲ್ಲಿದ್ದು ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ವಾಡಿ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದಾರೆ.