ವಿಜಯಪುರ : ಸಾರಿಗೆ ಸಂಸ್ಥೆಯ ಬಸ್ ಹಾಗೂ ಎರಡು ಕಾರುಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ವಿಜಯಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಕೊಲ್ಹಾರದ ಕುಪಕಡ್ಡಿ ಬಳಿ ನಡೆದಿದೆ.
ವಿಘ್ನವಿನಾಶಕನ ಹಬ್ಬದ ದಿನವಾದ ಬುಧವಾರ ಸಂಜೆ ಈ ದುರಂತ ಸಂಭವಿಸಿದ್ದು, ಮೂರು ತಿಂಗಳ ಮಗು ಸೇರಿದ ಅಪಘಾತದಲ್ಲಿ ಕಲಬುರಗಿ ಮೂಲದ ಒಂದೇ ಕುಟುಂಬದ ಮೂವರೂ ಜೀವ ತೆತ್ತಿದ್ದಾರೆ.
ಕೊಲ್ಹಾರ ತಾಲೂಕಿನ ಕುಪಕಡ್ಡಿ ಬಳಿ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ದುರಂತದ ಮೃತರನ್ನು ಕಲಬುರ್ಗಿ ಮೂಲದ ಸುನಂದಾ ಮಲ್ಲಿಕಾರ್ಜುನ ಕಲಶಟ್ಟಿ 25, ಮಗಳು ಸುಮನ ಮಲ್ಲಿಕಾರ್ಜುನ ಕಲಶಟ್ಟಿ 3 ತಿಂಗಳು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರೆ, ಅದೇ ಕುಟುಂಬ ಶರಣಮ್ಮ ಬಸವರಾಜ ಕಲಶಟ್ಟಿ 55 ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಉಮೇಶ ಕಲಶಟ್ಟಿ, ಸುರೇಖಾ ಕಲಶಟ್ಟಿ ಇವರನ್ನು ತುರ್ತು ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಕೊಲ್ಹಾರ ಪಿಎಸ್ಐ ಪ್ರೀತಮ್ ನಾಯಕ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.