ಕನ್ನಡದಲ್ಲಿ ಮಾಸ್ ಚಿತ್ರಗಳಿಗೇನು ಬರವಿಲ್ಲ. ಅದರಲ್ಲೂ ಈಗ ಹೊಸಬರು ಸಹ ಪ್ರಯೋಗಾತ್ಮಕ ಚಿತ್ರಗಳ ಜೊತೆಯಲ್ಲಿ ಮಾಸ್ ಚಿತ್ರಗಳತ್ತವೂ ತಮ್ಮ ಚಿತ್ತ ಹರಿಸಿದ್ದಾರೆ. ಆ ಸಾಲಿಗೆ ಇಲ್ಲೊಂದು ಹೊಸಬರ ತಂಡ ಪಕ್ಕಾ ಮಾಸ್ ಚಿತ್ರದ ಹಿಂದೆ ಹೊರಟಿದೆ. ಹೌದು, ಅವರು ತಮ ಚಿತ್ರಕ್ಕೆ ಇಟ್ಟುಕೊಂಡ ಹೆಸರು “ಚೋಟ ಬಾಂಬೆ’.
ಈ ಶೀರ್ಷಿಕೆ ಕೇಳಿದೊಡನೆ ಪಕ್ಕಾ ಮಾಸ್ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳುವಂತಿಲ್ಲ ಬಿಡಿ. ಅಂದಹಾಗೆ, “ಚೋಟ ಬಾಂಬೆ’ ಈಗಾಗಲೇ ಸದ್ದಿಲ್ಲದೆಯೇ ಶೇ.35 ರಷ್ಟು ಚಿತ್ರೀಕರಣಗೊಂಡಿದೆ. ಈ ಸಿನಿಮಾಗೆ ಸೂರಜ್ ಸಾಸನೂರು ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ “ಗವಿಪುರ’ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದ ಸೂರಜ್ ಸಾಸನೂರು, ಈ ಚಿತ್ರದ ಮೂಲಕ ಪಕ್ಕಾ ಮಾಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇನ್ನು, ಯುಸೂಫ್ ಖಾನ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ. ಚಿತ್ರದಲ್ಲಿ ಅಭಿಷೇಕ್ ಎಂಬ ಮತ್ತೂಬ್ಬ ನಟ ಕೂಡ ನಟಿಸುತ್ತಿದ್ದು, ಚಿತ್ರಕ್ಕೆ ಶನಾಯ ಹಾಗು ಯಶಸ್ವಿನಿ ನಾಯಕಿಯರಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಸರಿ, ಈ “ಚೋಟ ಬಾಂಬೆ’ಯ ಕಥೆ ಏನು? ಇದಕ್ಕೆ ಉತ್ತರಿಸುವ ನಾಯಕ ಸೂರಜ್ ಸಾಸನೂರು,
“ಎಲ್ಲರಿಗೂ ಹುಬ್ಬಳ್ಳಿಯನ್ನು “ಚೋಟ ಬಾಂಬೆ’ ಅಂತಾನೇ ಕರೆಯುತ್ತಾರೆ. ಈ ಹಿಂದೆ ಹುಬ್ಬಳ್ಳಿಗೆ “ಹೂ ಬಳ್ಳಿ’ ಎಂದು ಹೆಸರಿತ್ತು. ಕಾಲಕ್ರಮೇಣ ಹುಬ್ಬಳ್ಳಿಯನ್ನು ಎಲ್ಲರೂ ಚೋಟ ಬಾಂಬೆ ಇದ್ದಂತೆ ಎಂದು ಭಾವಿಸಿದರು. ಹಾಗಾಗಿ ಇಡೀ ಚಿತ್ರ ನಡೆಯುವುದೇ ಹುಬ್ಬಳ್ಳಿಯಲ್ಲಿ. ಕಥೆ ಬಗ್ಗೆ ಹೇಳುವುದಾದರೆ, ಇದೊಂದು ಗ್ಯಾಂಗ್‌ವಾರ್ ಕಥೆ.
ಕನ್ನಡದಲ್ಲಿ ಈಗಾಗಲೇ ಗ್ಯಾಂಗ್‌ವಾರ್ ಸಬ್ಜೆಕ್ಟ್ ಬಂದಿದ್ದರೂ, ಇಲ್ಲಿ ನೈಜತೆಗೆ ಹೆಚ್ಚು ಒತ್ತು ಕೊಡಲಾಗಿದೆ. ಒಟ್ಟಾರೆ, ಗ್ಯಾಂಗ್‌ವಾರ್ ಬೇಸ್ ಇಲ್ಲಿದ್ದರೂ, ನವಿರಾದ ಪ್ರೇಮಕಥೆ ಚಿತ್ರದ ಮತ್ತೊಂದು ಹೈಲೈಟ್’ ಎಂದು ವಿವರ ಕೊಡುತ್ತಾರೆ ಸೂರಜ್ ಸಾಸನೂರು.
ಚಿತ್ರಕ್ಕೆ ಶಿವು ಬೇರಿಗಿ ಸಂಗೀತವಿದ್ದು, ಐದು ಹಾಡುಗಳು ಚಿತ್ರದಲ್ಲಿರಲಿವೆ. ಗೌರಿ ವೆಂಕಟೇಶ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಕೌರವ ವೆಂಕಟೇಶ್ ಅವರ ಸಾಹಸ ಚಿತ್ರಕ್ಕಿದೆ. ಪ್ರಭುದೇವ ಅವರ ಶಿಷ್ಯ ಸುರೇಶ್ ಚಿತ್ರದ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಬಹುತೇಕ ಹೊಸ ಕಲಾವಿದರ ಬಳಗವೇ ಇದೆ.