ಶಶಿಕುಮಾರ್, ಶೃತಿ, ಶಿವರಾಮ್, ಪ್ರೊ. ದೊಡ್ಡರಂಗೇಗೌಡ, ಗಣೇಶ್ ರಾವ್ ಕೇಸರ್‌ರ್ಕರ್, ಕಿಲ್ಲರ್ ವೆಂಕಟೇಶ್, ಅವಿನಾಶ್ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ “ಆರ್ಟಿಕಲ್ (ವಿಧಿ) 370′ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.
ಈಗಾಗಲೇ ಭರದಿಂದ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ನವೆಂಬರ್ 25ಕ್ಕೆ “ಆರ್ಟಿಕಲ್ 370′ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.
“ಲೈರಾ ಎಂಟರ್‌ಟೈನರ್’ ಬ್ಯಾನರ್‌ನಲ್ಲಿ ಭರತ್ ಗೌಡ ಮತ್ತು ಸಿ. ರಮೇಶ್ ನಿರ್ಮಿಸಿರುವ “ಆರ್ಟಿಕಲ್ 370′ ಚಿತ್ರಕ್ಕೆ ಕೆ. ಶಂಕರ್ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ವಿನು ಮನಸು ಸಂಗೀತ ಸಂಯೋಜಿಸಿದ್ದು, ಸುಬ್ರಮಣಿ ಮತ್ತು ಸೌಮ್ಯ ಭಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ರವಿ ಚಂದ್ರು ಸೊಂಡೆಕೊಪ್ಪ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ವೇಲು ಸಾಹಸವಿದೆ.
“ಆರ್ಟಿಕಲ್ 370′ ಸಿನಿಮಾದ ಬಿಡುಗಡೆಯ ಬಗ್ಗೆ ಮಾತನಾಡುವ ನಿರ್ದೇಶಕ ಕೆ. ಶಂಕರ್, “ಕಳೆದ ಎರಡು ತಿಂಗಳಿನಿಂದ “ಆರ್ಟಿಕಲ್ 370′ ಸಿನಿಮಾದ ಪ್ರಚಾರ ಕಾರ್ಯಗಳು ನಡೆಯುತ್ತಿದೆ. ಈಗಾಗಲೇ ಬಿಡುಗಡೆಯಾಗಿ ರುವ ನಮ್ಮ ಸಿನಿಮಾದ ಮೋಶನ್ ಪೋಸ್ಟರ್‌ಗೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸಿನಿಮಾದ ಆಡಿಯೋ ರೈಟ್ಸ್ ಕೂಡ ಒಳ್ಳೆಯ ಮೊತ್ತಕ್ಕೆ ಸೇಲ್ ಆಗಿದೆ.
ತಮಿಳು, ತೆಲುಗಿನಿಂದಲೂ ಸಿನಿಮಾದ ಡಬ್ಬಿಂಗ್ ರೈಟ್ಸ್‌ಗೆ ಬೇಡಿಕೆ ಬರುತ್ತಿದೆ. ಇದೇ ನ. 25ಕ್ಕೆ ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಸಿನಿಮಾ ಬಿಡುಗಡೆಗೆ ತಯಾರಿ ಮಾಡಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.
ಸದ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ (ಆರ್ಟಿಕಲ್ 370) ವನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರ ಅದನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದೆ. “ಆರ್ಟಿಕಲ್ 370′ ರದ್ದಾದ ನಂತರ ಜಮ್ಮು ಮತ್ತು ಕಾಶ್ಮೀರ ಈಗ ಹೇಗಿದೆ ಎಂಬುದನ್ನು ಈಗ “ಆರ್ಟಿಕಲ್ 370′ ಸಿನಿಮಾದ ಮೂಲಕ ತೆರೆಮೇಲೆ ಹೇಳುತ್ತಿದೆ ಚಿತ್ರತಂಡ.
ಸುಮಾರು 100 ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರ, ಶ್ರೀನಗರ, ಪೆಹಲ್‌ಗಾಂ, ಗುಲ್‌ವುರ್ಗ್, ನಾಡಿಮರ್ಗ್, ಮಡಿಕೇರಿ, ಚಿಕ್ಕಮಗಳೂರು, ಶ್ರವಣಬೆಳಗೊಳ, ರಾಮನಗರ ಸೇರಿದಂತೆ ಅನೇಕ ಕಡೆಗಳಲ್ಲಿ “ಆರ್ಟಿಕಲ್ 370′ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ನೈಜ ಘಟನೆಗಳನ್ನು ಆಧರಿಸಿ ತೆರೆಗೆ ಬರುತ್ತಿರುವ “ಆರ್ಟಿಕಲ್ 360′ ಸಿನಿಮಾವನ್ನು ಸೈನಿಕರಿಗೆ, ಕಾಶ್ಮೀರಿ ಪಂಡಿತರಿಗೆ ಅರ್ಪಣೆ ಮಾಡುತ್ತಿದ್ದೇವೆ ಎಂಬುದು ಚಿತ್ರತಂಡದ ಮಾತು.