ಸುಮಾರು ನಾಲ್ಕು ವರ್ಷಗಳ ಹಿಂದೆ ಜೋಗಿ ಪ್ರೇಮ್ ನಾಯಕನಾಗಿ ಅಭಿನಯಿಸಿದ್ದ “ಡಿಕೆ’ ಎಂಬ ಹೆಸರಿನ ಚಿತ್ರ ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು. ಈಗ ಸ್ವಲ್ಪ ಮಟ್ಟಿಗೆ ಅದೇ ಟೈಟಲ್ ಅನ್ನು ಹೋಲುವ ‘ಡಿಕೆ ಬೋಸ್’ ಎನ್ನುವ ಚಿತ್ರ ತರೆಗೆ ಬರಲು ತಯಾರಾಗಿದೆ. ಹೌದು, ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಡಿಕೆ ಬೋಸ್’ ಮಾ. 15 ರಂದು ಬಿಡುಗಡೆಯಾಗಲಿದೆ.
ಅಂದಹಾಗೆ, ಈ ಚಿತ್ರದ ಹೆಸರು ‘ಡಿಕೆ ಬೋಸ್’ ಅಂತಿದ್ದರೂ, ಇದು ಈ ಹಿಂದೆ ತೆರೆಗೆ ಬಂದ “ಡಿಕೆ’ ಚಿತ್ರದ ಮುಂದುವರಿದ ಭಾಗವಂತೂ ಅಲ್ಲ. ಆ ಚಿತ್ರಕ್ಕೂ, ಇದಕ್ಕೂ ಯಾವುದೇ ಸಂಬಂಧವಿಲ್ಲ. ಆಡು ಭಾಷೆಯಲ್ಲಿ ಸಾಮಾನ್ಯವಾಗಿ ಅನೇಕರ್ ಬೋಸ್ ಅಂತ ಉಚ್ಛಾರಣೆ ಮಾಡುತ್ತಾರೆ. ಈ ಪದ ಆಕರ್ಷಣೀಯವಾಗಿದೆ. ಜೊತೆಗೆ ಚಿತ್ರದ ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ಈ “ಡಿಕೆ ಬೋಸ್’ ಎಂಬ ಟೈಟಲ್ ಅನ್ನು ತಮ್ಮ ಚಿತ್ರಕ್ಕೆ ಇಟ್ಟುಕೊಂಡಿದೆ.
ಎಲ್ಲಾ ಸರಿ, ಈ ಡಿಕೆ ಬೋಸ್ ಕಥೆ ? ಇಬ್ಬರು ಅನಾಥ ಗೆಳಯರು ವಂಚಿಸಿ ಬದುಕು ಸಾಗಿಸುತ್ತಿರುತ್ತಾರೆ. ಒಂದು ಡೀಲ್‌ಗೋಸ್ಕರ ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಾರೆ. ಆ ಸಂದರ್ಭದಲ್ಲಿ ಅಲ್ಲಿ ಏನೇನು ಅವಾಂತರಗಳು ನಡೆಯುತ್ತವೆ, ಅಲ್ಲಿ ತಾವು ಡೀಲ್ ಕುದುರಿಸುತ್ತಾರಾ? ಎನ್ನುವುದೇ “ಡಿಕೆ ಬೋಸ್’ ಚಿತ್ರದ ಕಥೆಯ ಸಾರಾಂಶ. ಇನ್ನು ಚಿತ್ರ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸಲಾಗಿದೆ.
ಚಿತ್ರದುದ್ದಕ್ಕೂ ಕರಾವಳಿ ನೇಟಿವಿಟಿಯನ್ನು ಹೆಚ್ಚಾಗಿ ಬಳಸಲಾಗಿದೆ. ಸಂದೀಪ್ ಮಹಾಂತೇಶ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಕನ್ನಡ, ತುಳು ಚಿತ್ರಗಳಲ್ಲಿ ಅಭಿನಯಿಸಿರುವ ಕಾಸರಗೋಡಿನ ಪೃಥ್ವಿ ಅಂಬರ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ರಂಗಭೂಮಿ ಪ್ರತಿಭೆ ನಿಶಾ ನಿಜಗುಣ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಭೋಜರಾಜ ವಾಮಂಜೂರ್, ಶೋಭರಾಜ್ ಪಾವೂರ್, ರಘು ಪಾಂಡೇಶ್ವರ್, ಬಸವರಾಜಕಟ್ಟಿ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಹಾಡುಗಳಿಗೆ ಡಾಲ್ವಿನ್ ಕೊಲಗಿರಿ ಸಂಗೀತ ಸಂಯೋಜಿಸಿದ್ದು, ಗುರುಕಿರಣ್, ಉದಿತ್ ಹರಿದಾಸ್, ಸಂಚಿತ್ ಹೆಗ್ಡೆ ಇತರರು ಹಾಡಿದ್ದಾರೆ. ಉದಯ್ ಬಲ್ಲಾಳ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನವಿದೆ. ಸಂತೋಷ್ ಮಹಾಂತೇಶ್ ಹಾಗು ನರಸಿಂಹಮೂರ್ತಿ ಮತ್ತು ಮಿಥುನ್ ಕುಮಾರ್ ಮಗಜಿ ನಿರ್ಮಾಪಕರು. ವಿತರಕ ಬಿ.ಕೆ ಗಂಗಾಧರ್ ಚಿತ್ರದ ವಿತರಣೆ ಮಾಡುತ್ತಿದ್ದು, ಸುಮಾರು 60ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.