“ಚಿ.ತು.ಸಂಘ…! ಅರೇ, ಈ ಡೈಲಾಗನ್ನು ಎಲ್ಲೋ ಕೇಳಿದ್ದೇವಲ್ಲಾ ಎಂಬ ಪ್ರಶ್ನೆ ಎದುರಾಗೋದು ಗ್ಯಾರಂಟಿ. ಅದಕ್ಕೆ ಉತ್ತರ ಶರಣ್ ಮತ್ತು ಚಿಕ್ಕಣ್ಣ ಅಭಿನಯದ “ಅಧ್ಯಕ್ಷ’ ಚಿತ್ರ. ಹೌದು. ಈ ಚಿತ್ರದಲ್ಲಿ ಬರುವ ಡೈಲಾಗ್ ಇದು. ಅಂದಹಾಗೆ, “ಚಿ.ತು.ಸಂಘ’ವನ್ನು ವಿಸ್ತರಿಸಿ ಹೇಳುವುದಾದರೆ, “ಚಿಂತೆ ಇಲ್ಲದ ತುಂಡೈಕ್ಳ ಸಂಘ…’ ಎಂಬರ್ಥವನ್ನು ಹಾಸ್ಯ ನಟ ಚಿಕ್ಕಣ್ಣ ಹೇಳುವುದು ಗೊತ್ತೇ ಇದೆ. ಅಷ್ಟಕ್ಕೂ ಈಗ “ಚಿ.ತು.ಸಂಘ’ ಕುರಿತ ಮಾತೇಕೆ ಎಂಬ ಪ್ರಶ್ನೆ ಕಾಡಬಹುದು.
ಅದಕ್ಕೆ ಉತ್ತರ. “ಚಿ.ತು.ಸಂಘ’ ಎಂಬ ಹೆಸರಿನ ಹೊಸಬರ ಚಿತ್ರ. ಹೌದು. ಹೊಸಬರು ಸೇರಿ ಈ ಚಿತ್ರ ಮಾಡಿದ್ದಾರೆ. ಅದಕ್ಕೆ “ಚಿ.ತು.ಸಂಘ’ ಎಂದು ನಾಮಕರಣ ಮಾಡಿ, ಇನ್ನೇನು ರಿಲೀಸ್‌ಗೆ ಅಣಿಯಾಗುತ್ತಿದ್ದಾರೆ. ಚಿತ್ರಕ್ಕೆ “ಸುಳ್ಳೇ ನಮ್ಮನೆ ದೇವ್ರು’ ಎಂಬ ಅಡಿಬರಹವೂ ಇದೆ. ಅಲ್ಲಿಗೆ ಇದೊಂದು ಹಾಸ್ಯ ಪ್ರಧಾನ ಚಿತ್ರ ಎನ್ನಲು ಅಡ್ಡಿಯಿಲ್ಲ.
ಚೇತನ್‌ಕುಮಾರ್ ಈ ಚಿತ್ರದ ಮೂಲಕ ನಿರ್ದೇಶಕರಾಗುವುದರ ಜೊತೆಗೆ ನಾಯಕರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಶಿವಣ್ಣ ನಂದಿಹಳ್ಳಿ ಮತ್ತು ಜಿ.ಕೆ.ಲಕ್ಷ್ಮೀಕಾಂತಯ್ಯ ಚಿತ್ರವನ್ನು ನಿರ್ಮಿಸಿದ್ದಾರೆ. ಅವರಿಗೆ ಗುರುಮೂರ್ತಿ, ನವೀನ್ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಶೀರ್ಷಿಕೆಯೇ ಹೇಳುವಂತೆ, ಇದು ಹಳ್ಳಿಯ ಹಿನ್ನೆಲೆಯಲ್ಲಿ ಸಾಗುವ ಕಥೆ.
ನಾಯಕ ಮತ್ತು ಅವನ ಗೆಳೆಯರದು ಆ ಊರಲ್ಲಿ ಆಡಿದ್ದೇ ಆಟ, ಮಾಡಿದ್ದೇ ಕೆಲಸ. ನಾಯಕ ಮಹಾ ಸುಳ್ಳುಗಾರ. ಅದರಲ್ಲೂ ನಾಯಕಿಯನ್ನು ಪ್ರೀತಿಸಿ, ತನ್ನತ್ತ ಸೆಳೆದುಕೊಳ್ಳಬೇಕೆಂಬ ಉದ್ದೇಶದಿಂದ ಸುಳ್ಳಿನ ಕಂತುಗಳಲ್ಲೇ ಬದುಕುತ್ತಿರುತ್ತಾನೆ. ಒಂದು ಹಂತದಲ್ಲಿ ನಾಯಕ ಇಲ್ಲಿಯವರೆಗೆ ಹೇಳಿದ್ದು, ಮಾಡಿದ್ದೆಲ್ಲವೂ ಸುಳ್ಳು ಅಂತ ಗೊತ್ತಾದ ಬಳಿಕ ಏನೆಲ್ಲಾ ನಡೆಯುತ್ತದೆ ಎಂಬುದು ಕಥೆ.
ಚಿತ್ರವನ್ನು ಕೊಟ್ಟೂರು, ಶಿವಗಂಗೆ, ಚಿಕ್ಕನಾಯಕನಹಳ್ಳಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಚೇತನ್‌ಕುಮಾರ್‌ಗೆ ನಾಯಕಿಯಾಗಿ ರೂಪ ನಟಿಸಿದರೆ, ಗೆಳೆಯರಾಗಿ ಪೃಥ್ವಿ, ರಾಘವ್ ಮತ್ತು ಪೋಷಕ ನಟರಾಗಿ ವೆಂಕಟೇಶ್, ಬಬಿತಾ, ದೇವರಾಜು, ಗೌತಮ್‌ರಾಜು, ಸತೀಶ್ (ಚಿಂತಾಮಣಿ) ಇತರರು ಅಭಿನಯಿಸಿದ್ದಾರೆ.