ಕೋಲಾರ: ಜಿಲ್ಲಾ ಸಂಕೀರ್ಣ ಕಟ್ಟಡದ ಕಚೇರಿಯೊಂದರಿಂದ ನವಜಾತ ಹೆಣ್ಣು ಶಿಶುವನ್ನು ಚೀಲದಲ್ಲಿ ಸುತ್ತಿ ಕಿಟಕಿಯ ಮೂಲಕ ಕೆಳಗೆಸೆದಿರುವ ಅಮಾನವೀಯ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಜಿಲ್ಲಾ ಸಂಕೀರ್ಣದ ಈಶಾನ್ಯ ಭಾಗದ ಎರಡನೇ ಮಹಡಿ ಕಿಟಕಿಯಿಂದ ಎಸೆದ ಪರಿಣಾಮ ಮಗು ಕೆಳಗೆ ಬಿದ್ದು ಸಾವಿಗೀಡಾಗಿದೆ. ಕೆಳಗೆಸೆದ ರಭಸಕ್ಕೆ ರಕ್ತದ ಕಲೆಗಳು ಕಟ್ಟಡ ಗೋಡೆಗಳ ಮೇಲೆ ಕಂಡು ಬಂದಿದೆ.
ಶನಿವಾರ ಬೆಳಗ್ಗೆ ಕಚೇರಿ ಆರಂಭವಾದ ಮೇಲೆ ಕೆಲವರು ಈಶಾನ್ಯ ಭಾಗದಲ್ಲಿ ಮಗುವೊಂದು ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ಈ ಕುರಿತು ಮಾಹಿತಿ ಸಿಕ್ಕ ತಕ್ಷಣವೇ ಕಚೇರಿಯ ಅಧಿಕಾರಿಗಳು ಕಾರ್ಯ ಪ್ರವೃತ್ತ ರಾದರು. ಜಿಲ್ಲಾಧಿಕಾರಿಗಳ ಕಚೇರಿಯ ಎರಡನೇ ಮಹಡಿಯಲ್ಲಿರುವ ಕೆಜಿಐಡಿ ಕಚೇರಿಯ ಶೌಚಾಲಯದಿಂದ ಈ ಕೃತ್ಯವೆಸಗಿದ್ದು ಗೋಚರಿಸಿತು. ಕಿಟಕಿಯಿಂದ ಚೀಲದಲ್ಲಿ ಸುತ್ತಿ ಮಗುವನ್ನು ಎಸೆದಿದ್ದು,ಚೀಲ ಮೊದಲನೇ ಮಹಡಿಯ ಸಜ್ಜಾ ಮೇಲೆ ಬಿದ್ದಿದ್ದು, ಮಗು ಮಾತ್ರ ನೆಲಕ್ಕೆ ಜಾರಿ ಬಿದ್ದಿದೆ.
ತನಿಖೆಗೆ ಡೀಸಿ ಸೂಚನೆ: ಮಾಹಿತಿ ತಿಳಿಯುತ್ತಿದ್ದಂತೆಯೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಾಜೇಶ್ ಮತ್ತು ಚೈತನ್ಯ ಸ್ಥಳಕ್ಕೆ ಬಂದು ಮಗುವನ್ನು ಪರಿಶೀಲಿಸಿದರು. ಡೀಸಿ ಜೆ.ಮಂಜುನಾಥ್ ಆಗಮಿಸಿ ಮಗುವನ್ನು ಪರಿಶೀಲಿಸಿ ಈ ಕುರಿತು ಕೂಲಂಕಶವಾಗಿ ತನಿಖೆ ನಡೆಸುವಂತೆ ಗ್ರಾಮಾಂತರ ಠಾಣೆ ಪೊಲೀಸರಿಗೆ ಸೂಚಿಸಿದರು.
ಪೊಲೀಸರು ಮಗುವನ್ನು ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ಮಾಡಿಸಲು ಅಗತ್ಯ ಕ್ರಮ ಕೈಗೊಂಡರು. ಈ ಕುರಿತು ಅನೇಕ ಸಂಶಯಗಳು ವ್ಯಕ್ತವಾಗಿದ್ದು, ಗ್ರಾಮಾಂತರ ಠಾಣೆ ಪೊಲೀಸರು ಜಿಲ್ಲಾ ಸಂಕೀರ್ಣದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಕೃತ್ಯವೆಸಗಿದವರನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.