Advertisement

ಜಾರಿಗೆ ಬಾರದ ಹೊಸ ವಲಯಗಳು

12:15 PM Mar 25, 2019 | Team Udayavani |

ಬೆಂಗಳೂರು: ಆಡಳಿತ ವಿಕೇಂದ್ರೀಕರಣಗೊಳಿಸುವ ಉದ್ದೇಶದಿಂದ ಸರ್ಕಾರ ಬಿಬಿಎಂಪಿಯ ಎಂಟು ವಲಯಗಳನ್ನು ಹತ್ತು ವಲಯಗಳಾಗಿ ಮರುವಿಂಗಡಿಸಿದೆ. ಆದರೆ, ಸರ್ಕಾರ ಆದೇಶ ಹೊರಡಿಸಿ ಹಲವು ತಿಂಗಳುಗಳು ಕಳೆದರೂ ಈವರೆಗೆ ಹೊಸ ವಲಯಗಳು ಕಾರ್ಯಾರಂಭಿಸಿಲ್ಲ.

Advertisement

ನಗರಾಭಿವೃದ್ಧಿ ಇಲಾಖೆಯು ಪಾಲಿಕೆಯ ಎಂಟು ವಲಯಗಳನ್ನು ಹತ್ತು ವಲಯಗಳಾಗಿ ಮರುವಿಂಗಡಿಸಿ, ವಲಯಗಳಿಗೆ ಜಂಟಿ ಆಯುಕ್ತರು ಹಾಗೂ ಸಿಬ್ಬಂದಿಯನ್ನು ನಿಯೋಜಿಸುವಂತೆ ಆದೇಶ ಹೊರಡಿಸಿತ್ತು. ಆದರೆ, ಪಾಲಿಕೆಯಿಂದ ಈವರೆಗೆ ಹೊಸ ವಲಯಗಳಿಗೆ ಕಟ್ಟಡಗಳನ್ನು ಸಹ ಹುಡುಕಲು ಸಾಧ್ಯವಾಗಿಲ್ಲ.

ಬಿಬಿಎಂಪಿಯ ವ್ಯಾಪ್ತಿಗೆ 2008ರಲ್ಲಿ 110 ಹಳ್ಳಿಗಳು, 7ನಗರಸಭೆ ಹಾಗೂ ಒಂದು ಪುರಸಭೆ ಸೇರಿಸಲಾಗಿತ್ತು. ಇದರಿಂದಾಗಿ ಕೆಲವು ವಾರ್ಡ್‌ಗಳ ಅಭಿವೃದ್ಧಿಗೆ ಸಮಾನ ಅವಕಾಶ ಕಲ್ಪಿಸುತ್ತಿಲ್ಲವೆಂಬ ಆರೋಪಗಳು ನಿರಂತರವಾಗಿ ಕೇಳಿಬಂದಿದ್ದವು. ಜತೆಗೆ ಒಂದೇ ವಲಯದಲ್ಲಿ 40ಕ್ಕೂ ಹೆಚ್ಚು ವಾರ್ಡ್‌ಗಳಿದ್ದರಿಂದ ಪಾಲಿಕೆ ಸಿಬ್ಬಂದಿಯ ಮೇಲೆ ಒತ್ತಡ ಹೆಚ್ಚಾಗಿತ್ತು.

ಬಿಬಿಎಂಪಿ ವಲಯಗಳ ಮರುವಿಂಗಡಣೆ ಪ್ರಸ್ತಾವಕ್ಕೆ 2016ರ ಮೇ 12ರಂದು ನಡೆದಿದ್ದ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ ಪಡೆದು, ನಗರಾಭಿವೃದ್ಧಿ ಇಲಾಖೆಗೆ ಅನುಮೋದನೆಗಾಗಿ ಕುಳುಹಿಸಲಾಗಿತ್ತು. ಇದರ ನಡುವೆಯೇ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌.ಪಾಟೀಲ ನೇತೃತ್ವದ ಬಿಬಿಎಂಪಿ ಪುನರ್‌ ರಚನೆ ಸಮಿತಿ ವಲಯಗಳ ಮರುವಿಂಗಡಣೆಗೆ ಶಿಫಾರಸ್ಸು ಮಾಡಿತ್ತು. ಆ ಹಿನ್ನೆಲೆಯಲ್ಲಿ ಸರ್ಕಾರ ಪಾಲಿಕೆಯ ವಲಯಗಳನ್ನು 10ಕ್ಕೇರಿಸಿ ಆದೇಶಿಸಿತ್ತು.

ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಆರಂಭದಲ್ಲಿ ಬಿಬಿಎಂಪಿ ಆಡಳಿತವು ಹೊಸ ಎರಡು ವಲಯಗಳ ಕಚೇರಿಯನ್ನು ಬಾಡಿಗೆ ಕಟ್ಟಡದಲ್ಲಿ ಆರಂಭಿಸಿ, ಜಂಟಿ ಆಯುಕ್ತರು ಹಾಗೂ ಅಗತ್ಯ ಸಿಬ್ಬಂದಿ ನಿಯೋಜಿಸಲು ಚಿಂತನೆ ನಡೆಸಿತ್ತು. ಆದರೆ, ಹಲವು ತಿಂಗಳುಗಳು ಕಳೆದರೂ ವಲಯಗಳು ರಚನೆಯಾಗದ ಹಿನ್ನೆಲೆಯಲ್ಲಿ ಪಾಲಿಕೆಯ ಆಡಳಿತ ಯಂತ್ರದ ವೇಗ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.

Advertisement

ಆಡಳಿತ ವಿಕೇಂದ್ರೀಕರಣ: ವಾರ್ಡ್‌ ಎಷ್ಟು ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ, ಅದರ ಜನಸಂಖ್ಯೆ ಎಷ್ಟು ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ ಎಂಬ ಇನ್ನಿತರ ಅಂಶಗಳನ್ನು ಪರಿಗಣಿಸಿ ಮರುವಿಂಗಡಣೆಗೆ ಸಮಿತಿ ಶಿಫಾರಸು ಮಾಡಿತ್ತು. ವಲಯಗಳ ಮರುವಿಂಗಡಣೆಯಿಂಂದ ಆಡಳಿತ ವಿಕೇಂದ್ರೀಕರಣವಾಗಲಿದ್ದು, ಸಾರ್ವಜನಿಕರಿಗೆ ಪಾಲಿಕೆಯಿಂದ ದೊರೆಯುವ ಸೇವೆಗಳನ್ನು ಶೀಘ್ರ ತಲುಪಿಸಲು ಸಾಧ್ಯವಾಗುತ್ತದೆ ಎಂದು ತಜ್ಞರ ಸಮಿತಿಯ ಅಭಿಪ್ರಾಯವಾಗಿತ್ತು.

ಹೊಸ ವಲಯಗಳ ವಿವರ: ಬಿಬಿಎಂಪಿಯಲ್ಲಿ ಹಿಂದೆ 8 ವಲಯಗಳಿದ್ದವು. ಐದು ವಲಯಗಳು ಆಯಾ ವಿಧಾನಸಭಾ ಕ್ಷೇತ್ರಗಳ ಹೆಸರಿನಲ್ಲಿದ್ದರೆ, ಉಳಿದ ವಲಯಗಳನ್ನು ಪಶ್ಚಿಮ, ದಕ್ಷಿಣ ಹಾಗೂ ಪೂರ್ವ ಎಂದು ಹೆಸರಿಡಲಾಗಿತ್ತು. ಆದರೆ, ಮರುವಿಂಗಡಣೆ ವೇಳೆ ಆ ಮೂರು ವಲಯಗಳ ವ್ಯಾಪ್ತಿಯಲ್ಲಿರುವ ವಿಧಾನಸಭಾ ಕ್ಷೇತ್ರವೊಂದರ ಹೆಸರಿಡಲಾಗಿದೆ. ಅದರಂತೆ ಮಲ್ಲೇಶ್ವರ, ಗಾಂಧಿನಗರ, ಜಯನಗರ, ವಿಜಯನಗರ, ಸರ್ವಜ್ಞನಗರ ವಲಯಗಳು ಸೇರ್ಪಡೆಗೊಂಡಿದ್ದವು.

ಹೊಸ ವಲಯಗಳ ರಚನೆಗೆ ಅಗತ್ಯ ಕಟ್ಟಡ ಗುರುತಿಸುವಂತೆ ಹಾಗೂ ಸಿಬ್ಬಂದಿ ನಿಯೋಜನೆಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಲೋಕಸಭಾ ಚುನಾವಣೆ ಮುಗಿದ ಬಳಿಕ ವಲಯಗಳ ರಚನೆ ಸ್ಥಿತಿಗತಿ ಕುರಿತು ಪರಿಶೀಲಿಸಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next