Advertisement

ನ್ಯೂಜಿಲ್ಯಾಂಡ್‌ ಟೆಸ್ಟ್‌ ತಂಡ : ಕಾನ್ವೆ ಬದಲು ಡ್ಯಾರಿಲ್‌ ಮಿಚೆಲ್‌

01:22 AM Nov 15, 2021 | Team Udayavani |

ವೆಲ್ಲಿಂಗ್ಟನ್‌ : ಭಾರತದೆದುರಿನ ಟೆಸ್ಟ್‌ ಸರಣಿಗಾಗಿ ನ್ಯೂಜಿಲ್ಯಾಂಡ್‌ ತಂಡದಲ್ಲಿ ಒಂದು ಬದಲಾವಣೆ ಸಂಭವಿಸಿದೆ. ಗಾಯಾಳು ಆಟಗಾರ ಡೇವನ್‌ ಕಾನ್ವೆ ಬದಲು ಬ್ಯಾಟಿಂಗ್‌ ಆಲ್‌ರೌಂಡರ್‌ ಡ್ಯಾರಿಲ್‌ ಮಿಚೆಲ್‌ ಅವರನ್ನು ಸೇರಿಸಿಕೊಳ್ಳಲಾಗಿದೆ.

Advertisement

ಇಂಗ್ಲೆಂಡ್‌ ಎದುರಿನ ಸೆಮಿಫೈನಲ್‌ ಪಂದ್ಯದಲ್ಲಿ ಔಟಾಗಿ ಹೋಗುವಾಗ ಸಿಟ್ಟಿನಿಂದ ಬ್ಯಾಟಿಗೆ ಬಡಿದ ಪರಿಣಾಮ ಕಾನ್ವೆ ಅವರ ಬಲಗೈ ಮೂಳೆಯಲ್ಲಿ ಬಿರುಕು ಮೂಡಿತ್ತು. ಹೀಗಾಗಿ ಅವರು ರವಿವಾರದ ಫೈನಲ್‌ ಹಾಗೂ ಭಾರತದೆದುರಿನ ಟಿ20 ಸರಣಿಯಿಂದಲೂ ಹೊರಗುಳಿಯಬೇಕಾಯಿತು.

ಡ್ಯಾರಿಲ್‌ ಮಿಚೆಲ್‌ ಭಾರತದೆದುರಿನ ಟಿ20 ತಂಡದ ಸದಸ್ಯರಾಗಿದ್ದಾರೆ. ಹೀಗಾಗಿ ಅವರನ್ನೇ ಟೆಸ್ಟ್‌ ತಂಡದಲ್ಲಿ ಮುಂದುವರಿಸಲು ನಿರ್ಧರಿಸಲಾಯಿತು. ಈವರೆಗೆ 5 ಟೆಸ್ಟ್‌ ಆಡಿರುವ ಮಿಚೆಲ್‌ ಒಂದು ಶತಕ, ಒಂದು ಅರ್ಧ ಶತಕ ಸೇರಿದಂತೆ 232 ರನ್‌ ಹೊಡೆದಿದ್ದಾರೆ.

“ಮಿಚೆಲ್‌ ಯಾವುದೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಈಗಂತೂ ತುಂಬು ಆತ್ಮವಿಶ್ವಾಸದಲ್ಲಿದ್ದಾರೆ. ಅವರು ತಮ್ಮ ಟೆಸ್ಟ್‌ ಸಾಮರ್ಥ್ಯವನ್ನು ಮತ್ತೆ ಸಾಬೀತುಪಡಿಸುವುದರಲ್ಲಿ ಅನುಮಾನವಿಲ್ಲ’ ಎಂಬುದಾಗಿ ನ್ಯೂಜಿಲ್ಯಾಂಡ್‌ ತಂಡದ ಕೋಚ್‌ ಗ್ಯಾರಿ ಸ್ಟೆಡ್‌ ಹೇಳಿದ್ದಾರೆ.

ನ. 17ರಿಂದ 3 ಪಂದ್ಯಗಳ ಟಿ20 ಸರಣಿಯನ್ನಾಡಲಿರುವ ನ್ಯೂಜಿಲ್ಯಾಂಡ್‌, ಬಳಿಕ ನ. 25ರಿಂದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

Advertisement

ಕಿವೀಸ್‌ ಅಭ್ಯಾಸ ಆರಂಭ
ಭಾರತಕ್ಕೆ ಆಗಮಿಸಿದ ನ್ಯೂಜಿಲ್ಯಾಂಡಿನ ಕೆಲವು ಕ್ರಿಕೆಟಿಗರು ಜೈಪುರದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಇವರೆಲ್ಲ ಟೆಸ್ಟ್‌ ತಂಡದ ಸದಸ್ಯರೆಂಬುದು ಉಲ್ಲೇಖನೀಯ. ರಾಸ್‌ ಟೇಲರ್‌, ಟಾಮ್‌ ಲ್ಯಾಥಂ, ನೀಲ್‌ ವ್ಯಾಗ್ನರ್‌, ವಿಲ್‌ ಸೋಮರ್‌ವಿಲ್ಲೆ, ಅಜಾಜ್‌ ಪಟೇಲ್‌, ರಚಿನ್‌ ರವೀಂದ್ರ, ಹೆನ್ರಿ ನಿಕೋಲ್ಸ್‌, ಟಾಮ್‌ ಬ್ಲಿಂಡೆಲ್‌ ಮತ್ತು ವಿಲಿಯಂ ಯಂಗ್‌ ಅಭ್ಯಾಸ ನಡೆಸಿದರು.

ಭಾರತ ತಂಡ ಆಗಮನ
ಇದೇ ವೇಳೆ ಭಾರತದ ಟಿ20 ತಂಡ ಕೂಡ ಜೈಪುರಕ್ಕೆ ಆಗಮಿಸಿದೆ. ಎಲ್ಲರೂ ಕ್ವಾರಂಟೈನ್‌ನಲ್ಲಿದ್ದಾರೆ.
ಆದರೆ ತಂಡದ ನೂತನ ಸಹಾಯಕ ಸಿಬಂದಿ ಯಾರೆಂಬುದನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಮೂಲಗಳ ಪ್ರಕಾರ ವಿಕ್ರಮ್‌ ರಾಠೊಡ್‌ ಮತ್ತೆ ಬ್ಯಾಟಿಂಗ್‌ ಕೋಚ್‌ ಆಗಿ ಮುಂದುವರಿಯುವುದು ಬಹುತೇಕ ಖಚಿತ. ಟಿ. ದಿಲೀಪ್‌ ಮತ್ತು ಪರಸ್‌ ಮ್ಹಾಂಬ್ರೆ ಕ್ರಮವಾಗಿ ಫೀಲ್ಡಿಂಗ್‌ ಹಾಗೂ ಬೌಲಿಂಗ್‌ ಕೋಚ್‌ ಆಗುವ ಸಾಧ್ಯತೆ ಇದೆ.

ಮುಂಬಯಿ ಟೆಸ್ಟ್‌ಗೆ ಸ್ಟೇಡಿಯಂ ಫ‌ುಲ್‌
ಮುಂಬಯಿ: ಪ್ರವಾಸಿ ನ್ಯೂಜಿಲ್ಯಾಂಡ್‌ ಎದುರಿನ ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. ನೂರರಷ್ಟು ವೀಕ್ಷಕರಿಗೆ ಪ್ರವೇಶ ಲಭಿಸಲಿದೆ. ರಾಜ್ಯ ಸರಕಾರದ ಅನುಮತಿ ಮೇರೆಗೆ ಮಹಾರಾಷ್ಟ್ರ ಕ್ರಿಕೆಟ್‌ ಮಂಡಳಿ (ಎಂಸಿಎ) ಈ ನಿರ್ಧಾರಕ್ಕೆ ಬಂದಿದೆ.

“ಮಹಾರಾಷ್ಟ್ರ ಸರಕಾರ ವಾಂಖೇಡೆ ಟೆಸ್ಟ್‌ ಪಂದ್ಯಕ್ಕೆ ನೂರು ಪ್ರತಿಶತ ವೀಕ್ಷಕರ ಪ್ರವೇಶಕ್ಕೆ ಅನುಮತಿ ನೀಡಿದೆ. ಹಾಗೆಯೇ ಸೋಮವಾರದಿಂದಲೇ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಸಿದ್ಧತಾ ಶಿಬಿರವನ್ನು ಆಯೋಜಿಸಲಿದ್ದೇವೆ’ ಎಂದು ಎಂಸಿಎ ಮೂಲಗಳು ಹೇಳಿವೆ.
ಡಿ. 3ರಂದು ಆರಂಭವಾಗಲಿರುವ ಈ ಟೆಸ್ಟ್‌ ಪಂದ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ವೀಕ್ಷಕರ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಕೋರಿ ಎಂಸಿಎ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next