Advertisement

ಮೊದಲ ಟೆಸ್ಟ್‌ಗೆ ಟಿಮ್‌ ಸೌಥಿ ಇಲ್ಲ

06:20 AM Nov 30, 2017 | |

ವೆಲ್ಲಿಂಗ್ಟನ್‌: ಪ್ರವಾಸಿ ವೆಸ್ಟ್‌ಇಂಡೀಸ್‌ ವಿರುದ್ಧ ಶುಕ್ರವಾರದಿಂದ ಆರಂಭವಾಗುವ ಮೊದಲ ಟೆಸ್ಟ್‌ ಪಂದ್ಯಕ್ಕೆ ನ್ಯೂಜಿಲ್ಯಾಂಡ್‌ ತಂಡದಿಂದ ಟಿಮ್‌ ಸೌಥಿ ಹೊರಗುಳಿಯಲಿದ್ದಾರೆ. ಅವರ ಬದಲಿಗೆ ಬ್ಯಾಟ್ಸ್‌ಮನ್‌ ಜಾರ್ಜ್‌ ವರ್ಕರ್‌ ಮತ್ತು ವೇಗಿ ಲಾಕೀ ಫೆರ್ಗ್ಯುಸನ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Advertisement

ಸೌಥಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಕುಟುಂಬದ ಜತೆ ಇರುವುದು ಪ್ರಾಮುಖ್ಯವೆಂದು ಭಾವಿಸಿದ್ದೇವೆ. ಕ್ರಿಕೆಟ್‌ಗಿಂತ ಹೆಚ್ಚು  ಮುಖ್ಯ ಅದುವೇ ಆಗಿದೆ. ಹಾಗಾಗಿ ಟಿಮ್‌ ಅವರ ನಿರ್ಧಾರವನ್ನು ಬೆಂಬಲಿಸುತ್ತೇವೆ ಎಂದು ಆಯ್ಕೆಗಾರ ಗ್ಯಾವಿನ್‌ ಲಾರ್ಸೆನ್‌ ಹೇಳಿದ್ದಾರೆ. ಅವರ ಬದಲಿಗೆ ಜಾರ್ಜ್‌ ವರ್ಕರ್‌ ಟೆಸ್ಟ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸೌಥಿ ಅವರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಮಂಗಳವಾರವೇ ಫೆರ್ಗ್ಯುಸನ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.

ಕಳೆದ ಕೆಲವು ಋತುಗಳಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವರ್ಕರ್‌ ಅವರ ಪ್ರಚಂಡ ಫಾರ್ಮ್ ಅನ್ನು ಗಮನಿಸಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಈ ವರ್ಷ ಆಡಿದ 9 ಪ್ರಥಮ ದರ್ಜೆ ಪಂದ್ಯಗಳಲ್ಲಿ ವರ್ಕರ್‌ 49.13 ಸರಾಸರಿಯಂತೆ 737 ರನ್‌ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ ಅವರಿನ್ನೂ ನ್ಯೂಜಿಲ್ಯಾಂಡ್‌ ತಂಡವನ್ನು ಪ್ರತಿನಿಧಿಸಿಲ್ಲ. ಆದರೆ ಆರು ಏಕದಿನ ಪಂದ್ಯಗಳನ್ನಾಡಿದ್ದಾರೆ. 2015ರಲ್ಲಿ ಜಿಂಬಾಬ್ವೆ ವಿರುದ್ದ ಟ್ವೆಂಟಿ20 ಪಂದ್ಯಕ್ಕೆ ಪಾದಾರ್ಪಣೆಗೈದಿದ್ದರು.

ಬಿಜೆ ವಾಟಿಗ್‌ ಬದಲಿಗೆ ತಂಡಕ್ಕೆ ಆಯ್ಕೆಯಾಗಿರುವ ವಿಕೆಟ್‌ಕೀಪರ್‌ ಟಾಮ್‌ ಬ್ಲಿಂಡೆಲ್‌ ಕೂಡ ಟೆಸ್ಟ್‌ಗೆ ಪಾದಾರ್ಪಣೆಗೈಯುವ ನಿರೀಕ್ಷೆಯಲ್ಲಿದ್ದಾರೆ.

ಗೆಲುವಿನ ನಿರೀಕ್ಷೆಯಲ್ಲಿ ವಿಂಡೀಸ್‌
ಕಳೆದ 22 ವರ್ಷಗಳ ಬಳಿಕ ನ್ಯೂಜಿಲ್ಯಾಂಡ್‌ ನೆಲದಲ್ಲಿ ಮೊದಲ ಗೆಲುವು ದಾಖಲಿಸುವ ನಿರೀಕ್ಷೆಯನ್ನು ವೆಸ್ಟ್‌ಇಂಡೀಸ್‌ ಇಟ್ಟುಕೊಂಡಿದೆ. ಟಿಮ್‌ ಸೌಥಿ ಮತ್ತು ವಾಟಿÉಂಗ್‌ ತಂಡದಲ್ಲಿ ಇಲ್ಲದಿರುವುದು ವಿಂಡೀಸ್‌ನ ಗೆಲುವಿನ ನಿರೀಕ್ಷೆಗೆ ಕಾರಣವಾಗಿದೆ. ಕೇನ್‌ ವಿಲಿಯಮ್ಸನ್‌ ಮತ್ತು ರಾಸ್‌ ಟಯ್ಲರ್‌ ಅವರನ್ನು ಬೇಗನೇ ಉರುಳಿಸಿದರೆ ನಾವು ಯಶಸ್ಸು ಸಾಧಿಸಬಹುದು ಎಂದು ವೆಸ್ಟ್‌ಇಂಡೀಸ್‌ ನಾಯಕ ಜಾಸನ್‌ ಹೋಲ್ಡರ್‌ ಹೇಳಿದ್ದಾರೆ.

Advertisement

ಎಂಟು ತಿಂಗಳ ಬ್ರೇಕ್‌ ಬಳಿಕ ನ್ಯೂಜಿಲ್ಯಾಂಡ್‌ ಟೆಸ್ಟ್‌ ಪಂದ್ಯಕ್ಕೆ ಮರಳುತ್ತಿದೆ. ಇದೇ ವೇಳೆ ಇಂಗ್ಲೆಂಡ್‌ ವಿರುದ್ಧ 2-1 ಅಂತರದ ಸರಣಿ ಸೋಲು ಮತ್ತು ಜಿಂಬಾಬ್ವೆ ವಿರುದ್ಧ 1-0 ಗೆಲುವಿನ ಬಳಿಕ ವೆಸ್ಟ್‌ಇಂಡೀಸ್‌ ಇಲ್ಲಿಗೆ ಆಗಮಿಸಿದ್ದು ಗೆಲುವಿನ ಉತ್ಸಾಹದಲ್ಲಿದೆ.

1995ರ ಫೆಬ್ರವರಿ ಬಳಿಕ ನ್ಯೂಜಿಲ್ಯಾಂಡ್‌ ವಿರುದ್ಧ ವೆಸ್ಟ್‌ಇಂಡೀಸ್‌ ಗೆಲುವು ದಾಖಲಿಸಿಲ್ಲ. 1995ರಲ್ಲಿ ವೆಸ್ಟ್‌ಇಂಡೀಸ್‌ ಬಾಸಿನ್‌ ರಿಸರ್ವ್‌ನಲ್ಲಿ ನಡೆದ ಪಂದ್ಯದಲ್ಲಿ ಇನ್ನಿಂಗ್ಸ್‌ ಮತ್ತು 322 ರನ್ನುಗಳಿಂದ ನ್ಯೂಜಿಲ್ಯಾಂಡ್‌ ತಂಡವನ್ನು ಸೋಲಿಸಿತ್ತು. ಬ್ರ್ಯಾನ್‌ ಲಾರಾ (147) ಮತ್ತು  ಜಿಮ್ಮಿ ಆ್ಯಡಮ್ಸ್‌ (151) ಅವರ ಸೊಗಸಾದ ಶತಕದಿಂದಾಗಿ ವೆಸ್ಟ್‌ಇಂಡೀಸ್‌ 5 ವಿಕೆಟಿಗೆ 660 ರನ್‌ ಪೇರಿಸಿ ಮೊದ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next