ಕ್ರೈಸ್ಟ್‌ಚರ್ಚ್: ಆತಿಥೇಯ ನ್ಯೂಜಿಲ್ಯಾಂಡ್‌ಗೆ ಆಘಾತವಿಕ್ಕಿದ ಪಾಕಿಸ್ಥಾನ ಟಿ20 ತ್ರಿಕೋನ ಸರಣಿ ಚಾಂಪಿಯನ್ ಆಗಿ ಮೂಡಿಬಂದಿದೆ.
ಶುಕ್ರವಾರದ ಫೈನಲ್‌ನಲ್ಲಿ ಬಾಬರ್ ಪಡೆ 5 ವಿಕೆಟ್‌ಗಳ ಅಧಿಕಾರಯುತ ಗೆಲುವು ಸಾಧಿಸಿತು.ನ್ಯೂಜಿಲ್ಯಾಂಡ್ 7 ವಿಕೆಟಿಗೆ 163 ರನ್ ಗಳಿಸಿ ಸವಾಲೊಡ್ಡಿದರೆ, ಪಾಕಿಸ್ಥಾನ 19.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಬಾರಿಸಿತು. ಇದರೊಂದಿಗೆ ಟಿ20 ವಿಶ್ವಕಪ್‌ಗೆ ಹೊಸ ಹುರುಪಿನಿಂದ ಸಜ್ಜಾಯಿತು.
ಪಾಕಿಸ್ಥಾನದ ಜಯಕ್ಕೆ ಅಂತಿಮ ಓವರ್‌ನಲ್ಲಿ ಕೇವಲ 4 ರನ್ ಅಗತ್ಯವಿತ್ತು. 3ನೇ ಎಸೆತವನ್ನು ಸಿಕ್ಸರ್‌ಗೆ ರವಾನಿಸಿದ ಇಫ್ತಿಕಾರ್ ಅಹ್ಮದ್ ತಂಡದ ಜಯಭೇರಿ ಮೊಳಗಿಸಿದರು.
ಪಾಕ್ ಸರದಿಯಲ್ಲಿ ಸರ್ವಾಧಿಕ 38 ರನ್ ಮಾಡಿದ ನವಾಜ್ (22 ಎಸೆತ, 2 ಬೌಂಡರಿ, 3 ಸಿಕ್ಸರ್), ಒಂದು ವಿಕೆಟ್ ಕೂಡ ಕಿತ್ತು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಸರಣಿಶ್ರೇಷ್ಠ ಪ್ರಶಸ್ತಿ ನ್ಯೂಜಿಲ್ಯಾಂಡ್‌ನ ಮೈಕಲ್ ಬ್ರೇಸ್‌ವೆಲ್ ಪಾಲಾಯಿತು.
ಇನ್‌ಫಾರ್ಮ್ ಓಪನರ್ ಮೊಹಮ್ಮದ್ ರಿಜ್ವಾನ್ 34, ನಾಯಕ ಬಾಬರ್ ಆಜಂ 15, ಶಾನ್ ಮಸೂದ್ 19, ಹೈದರ್ ಅಲಿ 31, ಇಫ್ತಿಕಾರ್ ಅಹ್ಮದ್ ಅಜೇಯ 25 ರನ್ ಹೊಡೆದರು. ನವಾಜ್-ಇಫ್ತಿಕಾರ್ ಮುರಿಯದ 6ನೇ ವಿಕೆಟಿಗೆ 36 ರನ್ ಬಾರಿಸಿ ನ್ಯೂಜಿಲ್ಯಾಂಡ್ ಗೆಲುವಿಗೆ ಅಡ್ಡಿಯಾದರು.
ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಈ ಪಂದ್ಯದ ಏಕೈಕ ಅರ್ಧ ಶತಕ ದಾಖಲಿಸಿದರು. ಕೇನ್ ಗಳಿಕೆ 38 ಎಸೆತಗಳಿಂದ 59 ರನ್ (4 ಬೌಂಡರಿ, 2 ಸಿಕ್ಸರ್). ಗ್ಲೆನ್ ಫಿಲಿಪ್ಸ್ 29, ಚಾಪ್‌ಮನ್ 25 ರನ್ ಮಾಡಿದರು.
ಕೂಟದ ಇನ್ನೊಂದು ತಂಡವಾದ ಬಾಂಗ್ಲಾದೇಶ ಒಂದೂ ಪಂದ್ಯ ಗೆಲ್ಲದೆ ಹೊರಬಿದ್ದಿತ್ತು.