Advertisement

ತ್ರಿಕೋನ ಟಿ20 ಸರಣಿ: ನ್ಯೂಜಿಲೆಂಡಿಗೆ ಭರ್ಜರಿ ಗೆಲುವು

10:14 PM Oct 11, 2022 | Team Udayavani |

ಕ್ರೈಸ್ಟ್‌ಚರ್ಚ್‌: ಫಿನ್‌ ಅಲೆನ್‌ ಮತ್ತು ಡೆವೋನ್‌ ಕಾನ್ವೆ ಅವರ ಉತ್ತಮ ಆಟದಿಂದಾಗಿ ನ್ಯೂಜಿಲೆಂಡ್‌ ತಂಡವು ತ್ರಿಕೋನ ಟಿ20 ಸರಣಿಯ ಪಂದ್ಯದಲ್ಲಿ ಪಾಕಿಸ್ತಾನವನ್ನು 9 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ.

Advertisement

ಅಲೆನ್‌ ಮತ್ತು ಕಾನ್ವೆ ಮೊದಲ ವಿಕೆಟಿಗೆ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡು ತಂಡಕ್ಕೆ ಸುಲಭ ಜಯ ತಂದುಕೊಟ್ಟರು. ಕೇವಲ 16.1 ಓವರ್‌ಗಳಲ್ಲಿ ಕೇವಲ 1 ವಿಕೆಟಿಗೆ 131 ರನ್‌ ಪೇರಿಸಿದ ಆತಿಥೇಯ ತಂಡ ಜಯಭೇರಿ ಬಾರಿಸಿತು.

ಈ ಮೊದಲು ಪಾಕಿಸ್ತಾನ 7 ವಿಕೆಟಿಗೆ 130 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. ಮೈಕಲ್‌ ಬ್ರೇಸ್‌ವೆಲ್‌ ದಾಳಿಗೆ ಪಾಕಿಸ್ತಾನದ ಅಗ್ರ ಕ್ರಮಾಂಕ ತತ್ತರಿಸಿ ಹೋಗಿತ್ತು. ಅವರು ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 11 ರನ್‌ ನೀಡಿ ಎರಡು ವಿಕೆಟ್‌ ಹಾರಿಸಿದ್ದರು.

ಅಲೆನ್‌ ಮತ್ತು ಕಾನ್ವೆ ಈ ಸರಣಿಯಲ್ಲಿ ಅಮೋಘವಾಗಿ ಆಡುತ್ತಿದ್ದಾರೆ. 32 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದ್ದ ಅಲೆನ್‌ 62 ರನ್‌ ಗಳಿಸಿ ಔಟಾಗಿದ್ದರು. ಒಂದು ಬೌಂಡರಿ ಮತ್ತು 6 ಸಿಕ್ಸರ್‌ ಬಾರಿಸಿದ್ದರು. ಬಾಂಗ್ಲಾ ವಿರುದ್ಧ 70 ರನ್‌ ಸಿಡಿಸಿದ್ದ ಕಾನ್ವೆ ಇಲ್ಲಿ ಅಜೇಯ 49 ರನ್‌ ಬಾರಿಸಿ ತಂಡದ ಗೆಲುವನ್ನು ಸಾರಿದರು.

ಎರಡೂ ಪಂದ್ಯಗಳಲ್ಲಿ ಅಜೇಯ ಸಾಧನೆಗೈದ ಕಾನ್ವೆ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ತನ್ನ ಸಾಮರ್ಥ್ಯವನ್ನು ಬಹಿರಂಗಪಡಿಸಿದ್ದಾರೆ.

Advertisement

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ಈ ಸರಣಿಯಲ್ಲಿ ತಲಾ ಮೂರು ಪಂದ್ಯಗಳನ್ನಾಡಿದ್ದು ತಲಾ ಎರಡರಲ್ಲಿ ಜಯ ಸಾಧಿಸಿ ಸಮಬಲದಲ್ಲಿದೆ. ಸರಣಿಯಲ್ಲಿರುವ ಇನ್ನೊಂದು ತಂಡವಾದ ಬಾಂಗ್ಲಾ ಇನ್ನೂ ಗೆಲುವು ಕಂಡಿಲ್ಲ. ಮುಂದಿನ ಪಂದ್ಯ ಗುರುವಾರ ನ್ಯೂಜಿಲೆಂಡ್‌ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿದೆ.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ 7 ವಿಕೆಟಿಗೆ 130 (ಇಫ್ತಿಕಾರ್‌ ಅಹ್ಮದ್‌ 27, ಆಸಿಫ್ ಅಲಿ 25 ಔಟಾಗದೆ, ಸೌದಿ 31ಕ್ಕೆ 2, ಸ್ಯಾಂಟ್ನರ್‌ 27ಕ್ಕೆ 2, ಬ್ರೇಸ್‌ವೆಲ್‌ 11ಕ್ಕೆ 2); ನ್ಯೂಜಿಲೆಂಡ್‌ 16.1 ಓವರ್‌ಗಳಲ್ಲಿ 1 ವಿಕೆಟಿಗೆ 131 (ಫಿನ್‌ ಅಲೆನ್‌ 62, ಡೆವೋನ್‌ ಕಾನ್ವೆ 49 ಔಟಾಗದೆ).

 

Advertisement

Udayavani is now on Telegram. Click here to join our channel and stay updated with the latest news.

Next