Advertisement

ಪಂದ್ಯವೊಂದು, ಮೂರು ಶತಕಟಯ್ಲರ್‌ ಸೂಪರ್‌ ಶೋ; ಕಿವೀಸ್‌ ಪರಾಕ್ರಮ

06:35 AM Mar 08, 2018 | |

ಡ್ಯುನೆಡಿನ್‌: ಬೃಹತ್‌ ಮೊತ್ತದ ಮೇಲಾಟದಲ್ಲಿ ಸೂಪರ್‌ ಬ್ಯಾಟಿಂಗ್‌ ಪ್ರದರ್ಶನವಿತ್ತ ರಾಸ್‌ ಟಯ್ಲರ್‌ ಪ್ರವಾಸಿ ಇಂಗ್ಲೆಂಡ್‌ ಎದುರಿನ 4ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡನ್ನು ಗೆಲುವಿನ ಪೀಠದಲ್ಲಿ ಕೂರಿಸಿದ್ದಾರೆ. ಇದೊಂದಿಗೆ ಸತತ 2 ಪಂದ್ಯಗಳನ್ನು ಸೋತಿದ್ದ ಕಿವೀಸ್‌ ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ.

Advertisement

ಬುಧವಾರ ಡ್ಯುನೆಡಿನ್‌ನಲ್ಲಿ ನಡೆದ ಮೇಲಾಟ ಒಟ್ಟು 3 ಶತಕಗಳಿಗೆ ಸಾಕ್ಷಿಯಾಯಿತು. ಇಂಗ್ಲೆಂಡ್‌ ಪರ ಆರಂಭಕಾರ ಜಾನಿ ಬೇರ್‌ಸ್ಟೊ 138 ರನ್‌, ವನ್‌ಡೌನ್‌ ಬ್ಯಾಟ್ಸ್‌ಮನ್‌ ಜೋ ರೂಟ್‌ 102 ರನ್‌ ಬಾರಿಸಿದರು. ಇವರ ಸಾಹಸದಿಂದ ತಂಡ 9 ವಿಕೆಟಿಗೆ 335 ರನ್‌ ಪೇರಿಸಿ ಸವಾಲೊಡ್ಡಿತು.

ನ್ಯೂಜಿಲ್ಯಾಂಡಿನ ಆರಂಭ ಅತ್ಯಂತ ಆಘಾತಕಾರಿಯಾಗಿತ್ತು. ಆರಂಭಿಕರಾದ ಮಾರ್ಟಿನ್‌ ಗಪ್ಟಿಲ್‌ ಮತ್ತು ಕಾಲಿನ್‌ ಮುನ್ರೊ ಖಾತೆಯನ್ನೇ ತೆರೆಯದೆ ನಿರ್ಗಮಿಸಿದರು. ಮುನ್ನೂರಕ್ಕೂ ಹೆಚ್ಚಿನ ಟಾರ್ಗೆಟ್‌ ಮುಂದಿರುವಾಗ ಬಿಗ್‌ ಹಿಟ್ಟಿಂಗ್‌ ಓಪನರ್ ಇಬ್ಬರೂ ಸೊನ್ನೆ ಸುತ್ತಿದಾಗ ಎಂಥ ತಂಡವೂ ಅಸಹಾಯಕ ಸ್ಥಿತಿ ಎದುರಿಸುವುದು, ಆಸೆ ಕೈಬಿಡುವುದು ಮಾಮೂಲು. ಆದರೆ ರಾಸ್‌ ಟಯ್ಲರ್‌ ಇದಕ್ಕೆ ಅವಾಕಶ ನೀಡಲಿಲ್ಲ. ಇಂಥ ತೀವ್ರ ಒತ್ತಡದ ಸನ್ನಿವೇಶದಲ್ಲಿ ಇನ್ನಿಂಗ್ಸಿಗೆ ಹೆಗಲು ಕೊಟ್ಟು, ಅಜೇಯ 181 ರನ್‌ ಬಾರಿಸಿ ನ್ಯೂಜಿಲ್ಯಾಂಡಿಗೆ 5 ವಿಕೆಟ್‌ಗಳ ಸ್ಮರಣೀಯ ಗೆಲುವೊಂದನ್ನು ತಂದಿತ್ತರು. ಅವರಿಗೆ ನಾಯಕ ಕೇನ್‌ ವಿಲಿಯಮ್ಸನ್‌ (45), ಕೀಪರ್‌ ಟಾಮ್‌ ಲ್ಯಾಥಂ (71), ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ (23) ಉತ್ತಮ ಬೆಂಬಲವಿತ್ತರು.

ವಿಲಿಯಮ್ಸನ್‌-ಟಯ್ಲರ್‌ 84 ರನ್‌, ಟಯ್ಲರ್‌-ಲ್ಯಾಥಂ 187 ರನ್‌ ಜತೆಯಾಟ ನಿಭಾಯಿಸಿ ಇಂಗ್ಲೆಂಡ್‌ ದಾಳಿಗೆ ಸಿಂಹಸ್ವಪ್ನರಾದರು. ಇದು ರಾಸ್‌ ಟಯ್ಲರ್‌ ಅವರ 19ನೇ ಏಕದಿನ ಶತಕ ಹಾಗೂ ಜೀವನಶ್ರೇಷ್ಠ ಗಳಿಕೆ. ಕ್ರ್ಯಾಂಪ್ಸ್‌ನಿಂದಾಗಿ ಕುಂಟುತ್ತಿದ್ದರೂ ಇದನ್ನು ಲೆಕ್ಕಿಸದೆ ಆಂಗ್ಲ ಬೌಲರ್‌ಗಳ ಮೇಲೆರಗಿ ಹೋದ ಟಯ್ಲರ್‌ 17 ಆಕರ್ಷಕ ಬೌಂಡರಿ ಹಾಗೂ 6 ಪ್ರಚಂಡ ಸಿಕ್ಸರ್‌ ಬಾರಿಸಿ ವಿಜೃಂಭಿಸಿದರು. ಅಂದಹಾಗೆ ಗುರುವಾರ (ಮಾ. 8) ಟಯ್ಲರ್‌ ಅವರ ಬರ್ತ್‌ಡೇ!

ಲ್ಯಾಥಂ 67 ಎಸೆತಗಳಿಂದ 71 ರನ್‌ ಬಾರಿಸಿದರು (2 ಬೌಂಡರಿ, 3 ಸಿಕ್ಸರ್‌). ಗ್ರ್ಯಾಂಡ್‌ಹೋಮ್‌ ಅವರ 23 ರನ್‌ 12 ಎಸೆತಗಳಿಂದ ಬಂತು (2 ಬೌಂಡರಿ, 2 ಸಿಕ್ಸರ್‌). ಎಲ್ಲರೂ ಆಕ್ರಮಣಕಾರಿ ಆಟಕ್ಕೆ ಮುಂದಾದ್ದರಿಂದ ನ್ಯೂಜಿಲ್ಯಾಂಡಿಗೆ ರನ್‌ರೇಟ್‌ ಸಮಸ್ಯೆ ಎದುರಾಗಲಿಲ್ಲ. ಅಂತಿಮ ಓವರಿನಲ್ಲಿ ಕೇವಲ 3 ರನ್‌ ಮಾಡಿದರೆ ಸಾಕಿತ್ತು. ಕರನ್‌ ಎಸೆತಕ್ಕೆ ಸಿಕ್ಸರ್‌ ಎತ್ತಿದ ನಿಕೋಲ್ಸ್‌ ನ್ಯೂಜಿಲ್ಯಾಂಡ್‌ ಗೆಲುವನ್ನು ಸಾರಿದರು.

Advertisement

ಇಂಗ್ಲೆಂಡ್‌ ದಿಢೀರ್‌ ಕುಸಿತ
ಇಂಗ್ಲೆಂಡಿನ ಬ್ಯಾಟಿಂಗ್‌ ನ್ಯೂಜಿಲ್ಯಾಂಡಿಗೆ ತದ್ವಿರುದ್ಧವಾಗಿತ್ತು. ಆಂಗ್ಲರ ಸರದಿಯ ಆರಂಭದಲ್ಲಿ ರನ್ನಿನ ಮಹಾಪೂರವೇ ಹರಿದು ಬಂದರೆ, ಕೊನೆಯಲ್ಲಿ ರನ್ನಿನ ತೀವ್ರ ಬರಗಾಲ ಎದುರಾಯಿತು. 38ನೇ ಓವರ್‌ ವೇಳೆ ಇಂಗ್ಲೆಂಡ್‌ ಒಂದೇ ವಿಕೆಟಿಗೆ 267 ರನ್‌ ಪೇರಿಸಿತ್ತು. ಬಳಿಕ ದಿಢೀರನೆ ಕುಸಿಯಿತು; 288ಕ್ಕೆ 7 ವಿಕೆಟ್‌ ಬಿತ್ತು. ಶತಕವೀರರನ್ನು ಹೊರತುಪಡಿಸಿದರೆ 22 ರನ್‌ ಮಾಡಿದ ಟಾಮ್‌ ಕರನ್‌ ಅವರದೇ ಹೆಚ್ಚಿನ ಗಳಿಕೆ.

4ನೇ ಶತಕ ಬಾರಿಸಿದ ಬೇರ್‌ಸ್ಟೊ 106 ಎಸೆತಗಳಿಂದ 138 ರನ್‌ ಸಿಡಿಸಿದರು (14 ಬೌಂಡರಿ, 7 ಸಿಕ್ಸರ್‌). ರೂಟ್‌ 101 ಎಸೆತಗಳಿಂದ 102 ರನ್‌ ಹೊಡೆದು 13ನೇ ಶತಕ ಸಂಭ್ರಮ ಆಚರಿಸಿದರು (6 ಬೌಂಡರಿ, 2 ಸಿಕ್ಸರ್‌).
ಸರಣಿ ಈಗ 2-2 ಸಮಬಲದಲ್ಲಿದ್ದು, ಶನಿವಾರದ ಕ್ರೈಸ್ಟ್‌ಚರ್ಚ್‌ ಮುಖಾಮುಖೀ ವಿಜೇತರನ್ನು ನಿರ್ಧರಿಸಲಿದೆ.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-9 ವಿಕೆಟಿಗೆ 335 (ಬೇರ್‌ಸ್ಟೊ 138, ರೂಟ್‌ 102, ಸೋಧಿ 58ಕ್ಕೆ 4, ಮುನ್ರೊ 53ಕ್ಕೆ 2, ಬೌಲ್ಟ್ 56ಕ್ಕೆ 2). ನ್ಯೂಜಿಲ್ಯಾಂಡ್‌-49.3 ಓವರ್‌ಗಳಲ್ಲಿ 5 ವಿಕೆಟಿಗೆ 339 (ಟಯ್ಲರ್‌ ಅಜೇಯ 181, ಲ್ಯಾಥಂ 71, ವಿಲಿಯಮ್ಸನ್‌ 45, ಕರನ್‌ 57ಕ್ಕೆ 2). ಪಂದ್ಯಶ್ರೇಷ್ಠ: ರಾಸ್‌ ಟಯ್ಲರ್‌.

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಏಕದಿನ ಚೇಸಿಂಗ್‌ ವೇಳೆ ರಾಸ್‌ ಟಯ್ಲರ್‌ 3ನೇ ಸರ್ವಾಧಿಕ ರನ್‌ ಬಾರಿಸಿದರು (ಅಜೇಯ 181). ಶೇನ್‌ ವಾಟ್ಸನ್‌ 2011ರ ಢಾಕಾ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅಜೇಯ 185 ರನ್‌ ಬಾರಿಸಿದ್ದು ವಿಶ್ವದಾಖಲೆ. ಭಾರತದ ಮಹೇಂದ್ರ ಸಿಂಗ್‌ ಧೋನಿ ಮತ್ತು ವಿರಾಟ್‌ ಕೊಹ್ಲಿ ತಲಾ 183 ರನ್‌ ಹೊಡೆದಿದ್ದಾರೆ.
* ರಾಸ್‌ ಟಯ್ಲರ್‌ ಟಾಪ್‌-3 ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ 2ನೇ ಅತ್ಯಧಿಕ ರನ್‌ ಬಾರಿಸಿದ ಬ್ಯಾಟ್ಸ್‌ಮನ್‌ ಎನಿಸಿದರು. ಇಂಗ್ಲೆಂಡ್‌ ವಿರುದ್ಧದ 1988ರ ಓಲ್ಡ್‌ ಟ್ರಾಫ‌ರ್ಡ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸಿನ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ವಿವಿಯನ್‌ ರಿಚರ್ಡ್ಸ್‌ ಅಜೇಯ 189 ರನ್‌ ಹೊಡೆದದ್ದು ದಾಖಲೆ.
* ರಾಸ್‌ ಟಯ್ಲರ್‌ ನ್ಯೂಜಿಲ್ಯಾಂಡ್‌ ಪರ ಸರ್ವಾಧಿಕ ರನ್‌ ಬಾರಿಸಿದವರ ಯಾದಿಯಲ್ಲಿ 3ನೇ ಸ್ಥಾನ ಅಲಂಕರಿಸಿದರು. ಮೊದಲೆರಡು ಸ್ಥಾನ ಮಾರ್ಟಿನ್‌ ಗಪ್ಟಿಲ್‌ ಪಾಲಾಗಿದೆ (ಅಜೇಯ 237 ಮತ್ತು ಅಜೇಯ 189 ರನ್‌).
* ನ್ಯೂಜಿಲ್ಯಾಂಡ್‌ ತನ್ನ ಏಕದಿನ ಚರಿತ್ರೆಯಲ್ಲಿ 3ನೇ ಅತ್ಯಧಿಕ ಮೊತ್ತವನ್ನು ಬೆನ್ನಟ್ಟಿ ಜಯ ಸಾಧಿಸಿತು (336 ರನ್‌). 2006-07ರಲ್ಲಿ ಆಸ್ಟ್ರೇಲಿಯ ವಿರುದ್ಧ ಹ್ಯಾಮಿಲ್ಟನ್‌ ಮತ್ತು ಆಕ್ಲೆಂಡ್‌ ಪಂದ್ಯಗಳಲ್ಲಿ 347 ಮತ್ತು 337 ರನ್‌ ಬಾರಿಸಿ ಗೆದ್ದಿತ್ತು.
* ಇಂಗ್ಲೆಂಡ್‌ ವಿರುದ್ಧ 2ನೇ ಅತ್ಯಧಿಕ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ ದಾಖಲೆ ನ್ಯೂಜಿಲ್ಯಾಂಡಿನದ್ದಾಯಿತು. 2017ರ ಪುಣೆ ಪಂದ್ಯದಲ್ಲಿ ಭಾರತ 351 ರನ್‌ ಬಾರಿಸಿ ಗೆದ್ದದ್ದು ದಾಖಲೆ.
* ನ್ಯೂಜಿಲ್ಯಾಂಡ್‌ 2ನೇ ಸಲ ಇಂಗ್ಲೆಂಡ್‌ ವಿರುದ್ಧ 300 ಪ್ಲಸ್‌ ರನ್‌ ಮೊತ್ತವನ್ನು ಬೆನ್ನಟ್ಟಿ ಗೆದ್ದಿತು. ಇದಕ್ಕೂ ಮುನ್ನ 2015ರ ಸೌತಾಂಪ್ಟನ್‌ ಪಂದ್ಯದಲ್ಲಿ ಈ ಸಾಧನೆಗೈದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next