Advertisement
ಇಲ್ಲಿನ “ಈಡನ್ ಪಾರ್ಕ್’ನಲ್ಲಿ ಗುರುವಾರ ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡಿಗೆ ಕಿವೀಸ್ ಸ್ವಿಂಗ್ ಬೌಲಿಂಗ್ ಸ್ಪೆಷಲಿಸ್ಟ್ ಗಳಾದ ಟ್ರೆಂಟ್ ಬೌಲ್ಟ್ ಮತ್ತು ಟಿಮ್ ಸೌಥಿ ಸಿಂಹಸ್ವಪ್ನರಾಗಿ ಪರಿಣಮಿಸಿದರು. ಇವರಿಬ್ಬರೇ ಸೇರಿಕೊಂಡು ಸತತ 20.4 ಓವರ್‌ಗಳನ್ನೆಸೆದು ಪ್ರವಾಸಿ ಆಂಗ್ಲ ತಂಡವನ್ನು ಅಲ್ಪ ಮೊತ್ತಕ್ಕೆ ಉಡಾಯಿಸಿದರು. ಬೌಲ್ಟ್ 32 ರನ್ನಿಗೆ 6 ವಿಕೆಟ್ ಕಿತ್ತು ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದರೆ, ಸೌಥಿ 25 ರನ್ನಿತ್ತು 4 ವಿಕೆಟ್ ಹಾರಿಸಿದರು.
ಇದು ಇಂಗ್ಲೆಂಡ್ ಟೆಸ್ಟ್ ಚರಿತ್ರೆಯ 6ನೇ ಕನಿಷ್ಠ ಮೊತ್ತ. ನ್ಯೂಜಿಲ್ಯಾಂಡ್ ವಿರುದ್ಧ ದಾಖಲಾದ ಇಂಗ್ಲೆಂಡಿನ ಅತೀ ಕಡಿಮೆ ಸ್ಕೋರ್ ಕೂಡ ಹೌದು. 9ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಕ್ರೆಗ್ ಓವರ್ಟನ್ ಸರ್ವಾಧಿಕ 33 ರನ್ ಮಾಡಿದರು. ಎರಡಂಕೆಯ ಗಡಿ ದಾಟಿದ ಮತ್ತೂಬ್ಬ ಆಟಗಾರ ಓಪನರ್ ಮಾರ್ಕ್ ಸ್ಟೋನ್‌ಮ್ಯಾನ್ (11). ಇಂಗ್ಲೆಂಡ್ ಸರದಿಯಲ್ಲಿ ಐವರು ಖಾತೆಯನ್ನೇ ತೆರೆಯಲಿಲ್ಲ. ಈ “ಶೂನ್ಯ ಸಾಧಕ’ರೆಂದರೆ ನಾಯಕ ಜೋ ರೂಟ್, ಬೆನ್ ಸ್ಟೋಕ್ಸ್, ಜಾನಿ ಬೇರ್‌ಸ್ಟೊ, ಮೊಯಿನ್ ಅಲಿ ಮತ್ತು ಸ್ಟುವರ್ಟ್ ಬ್ರಾಡ್. 23 ರನ್ನಿಗೆ ಬಿತ್ತು 8 ವಿಕೆಟ್!
ಇಂಗ್ಲೆಂಡಿನ 8 ವಿಕೆಟ್ 23 ರನ್ನಿಗೆ ಹಾರಿ ಹೋದಾಗ ಟೆಸ್ಟ್ ಇತಿಹಾಸದ ಕನಿಷ್ಠ ಮೊತ್ತದ ದಾಖಲೆ ನಿರ್ಮಾಣವಾಗುವ ಸಾಧ್ಯತೆಯಿತ್ತು (26 ರನ್). ಆ ದಾಖಲೆ 1955ರಲ್ಲಿ ಇದೇ ಅಂಗಳದಲ್ಲಿ, ಇದೇ ತಂಡಗಳ ನಡುವಿನ ಟೆಸ್ಟ್ ಪಂದ್ಯದ ವೇಳೆ ದಾಖಲಾಗಿತ್ತು. ಅಂದು ಇಂಗ್ಲೆಂಡ್ ವಿರುದ್ಧ ಆತಿಥೇಯ ನ್ಯೂಜಿಲ್ಯಾಂಡ್ 26 ರನ್ನಿಗೆ ಉದುರಿತ್ತು. 63 ವರ್ಷಗಳ ಬಳಿಕ ಕಿವೀಸ್‌ಗೆ ಸೇಡು ತೀರಿಸಿಕೊಳ್ಳುವ ಅವಕಾಶ ವೊಂದು ಎದುರಾಯಿತಾದರೂ ಇದರಲ್ಲಿ ಅದು ಯಶಸ್ವಿಯಾಗಲಿಲ್ಲ. ಕ್ರಿಕೆಟ್ ಜನಕರು ಭಾರೀ ಅವಮಾನದಿಂದ ಪಾರಾದರು.
Related Articles
ಇಂಗ್ಲೆಂಡ್ ತನ್ನ ಟೆಸ್ಟ್ ಇತಿಹಾಸದಲ್ಲಿ 6ನೇ ಕನಿಷ್ಠ ರನ್ ದಾಖಲಿಸಿತು (58 ಆಲೌಟ್). ಆಸ್ಟ್ರೇಲಿಯ ವಿರುದ್ಧದ 1887ರ ಸಿಡ್ನಿ ಟೆಸ್ಟ್‌ನಲ್ಲಿ 45 ರನ್ನಿಗೆ ಆಲೌಟ್ ಆದದ್ದು ಇಂಗ್ಲೆಂಡಿನ ಅತೀ ಕಡಿಮೆ ಮೊತ್ತ ವಾಗಿದೆ. ಆ ಪಂದ್ಯವನ್ನು ಇಂಗ್ಲೆಂಡ್ 13 ರನ್ನುಗಳಿಂದ ಗೆದ್ದಿತ್ತು!
Advertisement
ಇದು ನ್ಯೂಜಿಲ್ಯಾಂಡ್ ವಿರುದ್ಧ ಇಂಗ್ಲೆಂಡ್ ದಾಖಲಿಸಿದ ಕನಿಷ್ಠ ಸ್ಕೋರ್ ಕೂಡ ಹೌದು. 1978ರ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದಲ್ಲಿ 64ಕ್ಕೆ ಆಲೌಟಾದದ್ದು ಹಿಂದಿನ ಅತ್ಯಂತ ಕಡಿಮೆ ಗಳಿಕೆ.
ಇಂಗ್ಲೆಂಡ್ ಈ ಇನ್ನಿಂಗ್ಸ್‌ನಲ್ಲಿ 124 ಎಸೆತಗಳ ಬ್ಯಾಟಿಂಗ್ ನಡೆಸಿತು (20.4 ಓವರ್). ಇದು ಎಸೆತಗಳ ಲೆಕ್ಕಾಚಾರದಲ್ಲಿ ಟೆಸ್ಟ್ ಪಂದ್ಯದ 5ನೇ ಅತ್ಯಂತ ಸಣ್ಣ ಮೊದಲ ಇನ್ನಿಂಗ್ಸ್ ಆಗಿದೆ. 2015ರ ಟ್ರೆಂಟ್‌ಬ್ರಿಜ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ 111 ಎಸೆತಗಳಲ್ಲಿ ಆಲೌಟಾದದ್ದು ದಾಖಲೆ (60 ರನ್).
ಟೆಸ್ಟ್ ಪಂದ್ಯದ ಮೊದಲ ದಿನದ ಮೊದಲ ಅವಧಿಯಲ್ಲೇ ತಂಡವೊಂದು ಆಲೌಟಾದ 5ನೇ ಸಂದರ್ಭ ಇದಾಗಿದೆ. ಇದರಲ್ಲಿ 4 ದೃಷ್ಟಾಂತಗಳು ಕಳೆದ 10 ವರ್ಷಗಳಲ್ಲಿ ದಾಖಲಾಗಿರುವುದು ವಿಶೇಷ. ಇಂಗ್ಲೆಂಡ್ ಎದುರಿನ 1896ರ ಲಾರ್ಡ್ಸ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ಮೊದಲ ಬಾರಿಗೆ ಈ ಸಂಕಟಕ್ಕೆ ಸಿಲುಕಿತ್ತು.
ಇಂಗ್ಲೆಂಡಿನ ಮೊದಲ ಸರದಿಯಲ್ಲಿ ಅತ್ಯಧಿಕ 5 ಆಟಗಾರರು 4ನೇ ಸಲ ಖಾತೆ ತೆರೆಯದೆ ಔಟಾದರು (ರೂಟ್, ಸ್ಟೋಕ್ಸ್, ಬೇರ್‌ಸ್ಟೊ, ಅಲಿ, ಬ್ರಾಡ್). ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಎದುರಿನ 1954ರ ಬ್ರಿಜ್‌ಟೌನ್ ಹಾಗೂ 1976ರ ಹೇಡಿಂಗ್ಲೆ ಟೆಸ್ಟ್‌ನಲ್ಲಿ, ಆಸ್ಟ್ರೇಲಿಯ ವಿರುದ್ಧದ 1956ರ ಓವಲ್ ಟೆಸ್ಟ್‌ನಲ್ಲೂ ಇಂಗ್ಲೆಂಡ್ ಸರದಿಯ ಐವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.
ಟ್ರೆಂಟ್ ಬೌಲ್ಟ್ ಜೀವನಶ್ರೇಷ್ಠ ಬೌಲಿಂಗ್ ದಾಖಲಿಸಿದರು. (32ಕ್ಕೆ 6 ವಿಕೆಟ್). ವೆಸ್ಟ್ ಇಂಡೀಸ್ ವಿರುದ್ಧದ 2013ರ ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ 40 ರನ್ನಿಗೆ 6 ವಿಕೆರ್ಟ್ ಕಿತ್ತದ್ದು ಅವರ ಈವರೆಗಿನ ಅತ್ಯುತ್ತಮ ನಿರ್ವಹಣೆಯಾಗಿತ್ತು.
ಟೆಸ್ಟ್ ಪಂದ್ಯವೊಂದರ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ಇಬ್ಬರು ಬೌಲರ್‌ಗಳು ಸತತವಾಗಿ ಬೌಲಿಂಗ್ ನಡೆಸಿ ಎದುರಾಳಿಯನ್ನು ಆಲೌಟ್ ಮಾಡಿದ 9ನೇ ಸಂದರ್ಭ ಇದಾಗಿದೆ. ಕಳೆದ 105 ವರ್ಷಗಳಲ್ಲಿ ಕಂಡುಬಂದ ಕೇವಲ 3ನೇ ನಿದರ್ಶನವಿದು. ನ್ಯೂಜಿಲ್ಯಾಂಡ್ ಬೌಲರ್‌ಗಳಿಬ್ಬರು ಮೊದಲ ಸಲ ಈ ಸಾಧನೆಗೈದರು (ಬೌಲ್ಟ್ ಮತ್ತು ಸೌಥಿ).
ಬ್ರಾಡ್ ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್ ಉರುಳಿಸಿದ ವಿಶ್ವದ ಅತೀ ಕಿರಿಯ ವೇಗದ ಬೌಲರ್ ಎನಿಸಿದರು (31 ವರ್ಷ, 271 ದಿನ). ಹಿಂದಿನ ದಾಖಲೆ ಸ್ಟೇನ್ ಹೆಸರಲ್ಲಿತ್ತು (32 ವರ್ಷ, 33 ದಿನ).