Advertisement

ನ್ಯೂಜಿಲ್ಯಾಂಡ್‌ ತಂಡಕ್ಕೆ 7 ವಿಕೆಟ್‌ ಭರ್ಜರಿ ಗೆಲುವು

03:45 AM Mar 02, 2017 | |

ಹ್ಯಾಮಿಲ್ಟನ್‌: ಆರಂಭಿಕ ಮಾರ್ಟಿನ್‌ ಗಪ್ಟಿಲ್‌ ಅವರ ಅಮೋಘ ಬ್ಯಾಟಿಂಗ್‌ನಿಂದಾಗಿ ನ್ಯೂಜಿಲ್ಯಾಂಡ್‌ ತಂಡವು ಬುಧವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿ ಸರಣಿಯನ್ನು ಜೀವಂತವಿರಿಕೊಂಡಿದೆ.

Advertisement

ಈ ಗೆಲುವಿನಿಂದ ಐದು ಪಂದ್ಯಗಳ ಸರಣಿ 2-2 ಅಂತರದಿಂದ ಸಮಬಲದಲ್ಲಿ ನಿಂತಿದೆ. ಸರಣಿ ನಿರ್ಣಾಯಕ ಪಂದ್ಯ ಮಾ. 4ರಂದು ಆಕ್ಲಂಡ್‌ನ‌ಲ್ಲಿ ನಡೆಯಲಿದೆ. ಆರಂಭದ ನಾಲ್ಕು ಪಂದ್ಯಗಳನ್ನು ಗಮನಿಸಿದರೆ ನಿರ್ಣಾಯಕ ಪಂದ್ಯ ತೀವ್ರ ಪೈಪೋಟಿಯಿಂದ ಸಾಗುವ ನಿರೀಕ್ಷೆಯಿದೆ.

ಗಪ್ಟಿಲ್‌ ಬ್ಯಾಟಿಂಗ್‌ ವೈಭವ
ಗಾಯದಿಂದ ಚೇತರಿಸಿಕೊಂಡಿರುವ ಗಪ್ಟಿಲ್‌ ದಾಖಲೆಯ ಬ್ಯಾಟಿಂಗ್‌ ಪ್ರದರ್ಶಿಸಿರುವುದು ಈ ಪಂದ್ಯದ ವಿಶೇಷವಾಗಿದೆ. ಮೂರನೇ ವಿಕೆಟಿಗೆ ರಾಸ್‌ ಟಯ್ಲರ್‌ ಜತೆ 180 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡ ಅವರು ನ್ಯೂಜಿಲ್ಯಾಂಡಿಗೆ 7 ವಿಕೆಟ್‌ಗಳ ಜಯ ತಂದಿತ್ತರು. ಇನ್ನೂ ಐದು ಓವರ್‌ಗಳು ಇರುತ್ತಲೇ ಜಯಭೇರಿ ಬಾರಿಸಿದ ನ್ಯೂಜಿಲ್ಯಾಂಡ್‌ ಈ ಹಿಂದಿನ 159 ರನ್ನುಗಳ ಸೋಲಿಗೆ ಸೇಡು ತೀರಿಸಿಕೊಂಡಿತು.

ಗಾಯದ ಸಮಸ್ಯೆಯಿಂದಾಗಿ ಎರಡು ವಾರ ತಂಡದಿಂದ ಹೊರಗಿದ್ದ ಗಪ್ಟಿಲ್‌ ಈ ಪಂದ್ಯದಲ್ಲಿ ಗಾಯದ ಯಾವುದೇ ಸೂಚನೆ ನೀಡದೇ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದರು. ಹರಿಣಗಳ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಅವರು 138 ಎಸೆತಗಳಿಂದ 180 ರನ್‌ ಗಳಿಸಿ ಅಜೇಯರಾಗಿ ಉಳಿದರು. 15 ಬೌಂಡರಿ ಬಾರಿಸಿದ್ದ ಅವರು 11 ಸಿಕ್ಸರ ಸಿಡಿಸಿ ರಂಜಿಸಿದರು. ರಾಸ್‌ ಟಯ್ಲರ್‌ ಜತೆ ಮೂರನೇ ವಿಕೆಟಿಗೆ 180 ರನ್‌ ಪೇರಿಸಿ ತಂಡದ ಗೆಲುವು ಖಚಿತಗೊಳಿಸಿದರು. ಟಯ್ಲರ್‌ 66 ರನ್‌ ಗಳಿಸಿ ತಾಹಿರ್‌ಗೆ ವಿಕೆಟ್‌ ಒಪ್ಪಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲ್ಯಾಂಡ್‌ ಪರ ಗರಿಷ್ಠ ವೈಯಕ್ತಿಕ ಏಕದಿನ ರನ್‌ ಮೊತ್ತವನ್ನು ಗಳಿಸಿದ ಆಟಗಾರರೆಂಬ ಗೌರವಕ್ಕೆ ಗಪ್ಟಿಲ್‌ ಪಾತ್ರರಾದರು. ರನ್‌ ಚೇಸ್‌ ವೇಳೆ ಇದು ನಾಲ್ಕನೇ ಗರಿಷ್ಠ ಮೊತ್ತವಾಗಿದೆ.

Advertisement

ಈ ಮೊದಲು ಫಾ ಡು ಪ್ಲೆಸಿಸ್‌ ಮತ್ತು ಎಬಿ ಡಿ’ವಿಲಿಯರ್ ಅವರ ಅರ್ಧಶತಕದಿಂದಾಗಿ ದಕ್ಷಿಣ ಆಫ್ರಿಕಾವು 8 ವಿಕೆಟಿಗೆ 279 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಪ್ಲೆಸಿಸ್‌ 67 ಮತ್ತು ಡಿ’ವಿಲಿಯರ್ 72 ರನ್‌ ಹೊಡೆದರು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ 8 ವಿಕೆಟಿಗೆ 279 (ಹಾಶಿಮ್‌ ಆಮ್ಲ 40, ಪ್ಲೆಸಿಸ್‌ 67, ಡ್ಯುಮಿನಿ 25, ಡಿ’ವಿಲಿಯರ್ 71 ಔಟಾಗದೆ, ಕ್ರಿಸ್‌ ಮೊರಿಸ್‌ 28, ವೇಯ್ನ ಪಾರ್ನೆಲ್‌ 29, ಜೀತನ್‌ ಪಟೇಲ್‌ 57ಕ್ಕೆ 2); 
ನ್ಯೂಜಿಲ್ಯಾಂಡ್‌ 45 ಓವರ್‌ಗಳಲ್ಲಿ 3 ವಿಕೆಟಗೆ 280 (ಮಾರ್ಟಿನ್‌ ಗಪ್ಟಿಲ್‌ 180 ಔಟಾಗದೆ, ರಾಸ್‌ ಟಯ್ಲರ್‌ 66, ಇಮ್ರಾನ್‌ ತಾಹಿರ್‌ 56ಕ್ಕೆ 2). ಪಂದ್ಯಶ್ರೇಷ್ಠ: ಮಾರ್ಟಿನ್‌ ಗಪ್ಟಿಲ್‌

Advertisement

Udayavani is now on Telegram. Click here to join our channel and stay updated with the latest news.

Next