ಹೊಸದಿಲ್ಲಿ: ನ್ಯೂಜಿಲ್ಯಾಂಡ್‌ನ ಕ್ರೈಸ್ಟ್ ಚರ್ಚ್‌ನ ಎರಡು ಮಸೀದಿಗಳ ಮೇಲೆ ಶುಕ್ರವಾರ ನಡೆದ ಭೀಕರ ಉಗ್ರ ದಾಳಿಯಲ್ಲಿ ಭಾರತೀಯರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೈದರಾಬಾದ್ ಮೂಲದ ಅಹ್ಮದ್ ಇಕ್‌ಬಾಲ್ ಜಹಾಂಗೀರ್ ಅವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ.
ದಾಳಿಯಾಗುತ್ತಿದ್ದಂತೆ ಜಹಾಂಗೀರ್ ಅವರು ರೆಸ್ಟೊರೆಂಟ್‌ವೊಂದಕ್ಕೆ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.
ಜಹಾಂಗೀರ್ ಅವರ ಕುಟುಂಬ ಸದಸ್ಯರು ನ್ಯೂಜಿಲ್ಯಾಂಡ್‌ಗೆ ತೆರಳಲು ತುರ್ತು ವೀಸಾ ನೀಡುವಂತೆ ಸರ್ಕಾರವನ್ನು ಕೇಳಿಕೊಂಡಿದ್ದಾರೆ.
ನನ್ನ ಸಹೋದರ ಗಾಯಗೊಂಡಿದ್ದು, ವಿಡಿಯೋದಲ್ಲಿ ನೋಡಿದಂತೆ ಅವರ ಎದೆ ಭಾಗಕ್ಕೆ ಗಾಯವಾಗಿದೆ. ನಮಗೆ ಇದುವರೆಗೆ ಸರಿಯಾದ ಮಾಹಿತಿ ಪಡೆದಕೊಳ್ಳಲು ಸಾಧ್ಯವಾಗಿಲ್ಲ. ನಮಗೆ ನ್ಯೂಜಿಲ್ಯಾಂಡ್‌ಗೆ ತೆರಳಲು ವೀಸಾ ವ್ಯವಸ್ಥೆ ಮಾಡಿಕೊಡಬೇಕು ಎಂದು ಅಹ್ಮದ್ ಜಾಹಂಗೀರ್ ಅವರು ಮನವಿ ಮಾಡಿದ್ದಾರೆ.
ಸೆಂಟ್ರಲ್ ಕ್ರೈಸ್ಟ್ ಚರ್ಚ್ ನಲ್ಲಿರುವ ಅಲ್ ನೂರ್ ಮಸೀದಿ ಮತ್ತು ನಗರ ಹೊರವಲಯದಲ್ಲಿರುವ ಲಿನ್‌ವುಡ್ ಮಸೀದಿಯ ಮೇಲೆ ಆಸ್ಟ್ರೇಲಿಯದ ಬಲಪಂಥೀಯ ಉಗ್ರನೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ ಪರಿಣಾಮ ಕನಿಷ್ಠ 49 ಮಂದಿ ಬಲಿಯಾಗಿದ್ದಾರೆ.