ವೆಲ್ಲಿಂಗ್ಟನ್: ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಬೆರಳಣಿಕೆಯ ಆಟಗಾರರಲ್ಲಿ ಒಬ್ಬರಾಗಿರುವ ಮಾರ್ಟಿನ್ ಗಪ್ಟಿಲ್ ಅವರು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ನ್ಯೂಜಿಲ್ಯಾಂಡ್ ತಂಡಕ್ಕೆ ಮರಳಿದ್ದಾರೆ.
ಗುರುವಾರ ಪ್ರಕಟಿಸಲಾದ 13 ಸದಸ್ಯರ ತಂಡಕ್ಕೆ ಆಲ್‌ರೌಂಡರ್‌ಗಳಾದ ಡಗ್ ಬ್ರೇಸ್‌ವೆಲ್ ಮತ್ತು ಜಿಮ್ಮಿ ನೀಶಮ್ ಕೂಡ ಮರಳಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಅವರನ್ನು ಕಡೆಗಣಿಸಲಾಗಿತ್ತು. 2015ರ ವಿಶ್ವಕಪ್‌ನಲ್ಲಿ ಗಪ್ಟಿಲ್ ವೆಸ್ಟ್‌ಇಂಡೀಸ್ ವಿರುದ್ಧ 237 ರನ್ ಸಿಡಿಸಿರುವುದು ಏಕದಿನ ಕ್ರಿಕೆಟ್‌ನ ಎರಡನೇ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ.
ಗಾಯದ ಬಳಿಕ ಮಾರ್ಟಿನ್ ಮರಳಿರುವುದು ನಮ್ಮ ಪಾಲಿಗೆ ಶ್ರೇಷ್ಠ ವಿಷಯವಾಗಿದೆ. ತಂಡದ ಗೆಲುವಿಗಾಗಿ ಅವರು ತನ್ನೆಲ್ಲ ಶ್ರಮ ವಹಿಸಲಿದ್ದಾರೆ ಎಂದು ಆಯ್ಗೆಗಾರ ಗಾವಿನ್ ಲಾರ್ಸೆನ್ ಹೇಳಿದ್ದಾರೆ.
ಪ್ರತಿಭಾವಂತ ಯುವ ಆಟಗಾರರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಅನುಭವಿ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದರೆ ಏಕದಿನ ವಿಕೆಟ್‌ಕೀಪರ್ ಟಾಮ್ ಲಾಥಮ್ ಅವರನ್ನು ಹೊರಗಿಡಲಾಗಿದೆ. ಲಾಥಮ್ ಅನುಪಸ್ಥಿತಿಯಿಂದಾಗಿ 24ರ ಹರೆಯದ ಟಿಮ್ ಸೀಫೆರ್ಟ್ ಅವರಿಗೆ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆಗೈಯಲು ಅವಕಾಶ ಸಿಗಲಿದೆ.
ನ್ಯೂಜಿಲ್ಯಾಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಡಗ್ ಬ್ರೇಸ್‌ವೆಲ್, ಲಾಕೀ ಫರ್ಗ್ಯುಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಕಾಲಿನ ಮುನ್ರೊ, ಜಿಮ್ಮಿ ನೀಶಮ್, ಹೆನ್ರಿ ನಿಕೋಲ್ಸ್, ಟಿಮ್ ಸೀಫೆರ್ಟ್, ಇಶ್ ಸೋಧಿ, ಟಿಮ್ ಸೌಥಿ, ರಾಸ್ ಟಯ್ಲರ್.