ಆಕ್ಲಂಡ್: ಮುಂದಿನ ವಾರದಿಂದ ಆರಂಭವಾಗಲಿರುವ ಭಾರತ ವಿರುದ್ಧದ ಟಿ ಟ್ವೆಂಟಿ ಸರಣಿಗೆ ನ್ಯೂಜಿಲ್ಯಾಂಡ್ ತಂಡ ಪ್ರಕಟಿಸಿದೆ. ಸುಮಾರು ಮೂರು ವರ್ಷಗಳ ಬಳಿಕ ಹ್ಯಾಮಿಶ್ ಬೆನೆಟ್ ಅವರಿಗೆ ರಾಷ್ಟ್ರೀಯ ತಂಡದ ಬುಲಾವ್ ಬಂದಿದೆ.
ಐದು ಪಂದ್ಯಗಳ ಟಿ ಟ್ವೆಂಟಿ ಸರಣಿ ಜನವರಿ 24ರಿಂದ ಆರಂಭವಾಗಲಿದೆ. ಗುರುವಾರ ಬೆಳಿಗ್ಗೆ ತಂಡವನ್ನು ಪ್ರಕಟಿಸಲಾಗಿದೆ.
32 ವರ್ಷದ ಹ್ಯಾಮಿಶ್ ಬೆನೆಟ್ ಸುಮಾರು ಮೂರು ವರ್ಷದ ನಂತರ ಕಿವೀಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸುಮಾರು 16 ಏಕದಿನ ಪಂದ್ಯಗಳು ಮತ್ತು ಏಕೈಕ ಟೆಸ್ಟ್ ಪಂದ್ಯವಾಡಿರುವ ಹ್ಯಾಮಿಶ್ ಬೆನೆಟ್ ಇದುವರೆಗೆ ಟಿ ಟ್ವೆಂಟಿ ಪಂದ್ಯವಾಡಿಲ್ಲ. ಹೀಗಾಗಿ ಭಾರತ ವಿರುದ್ಧ ಹ್ಯಾಮಿಶ್ ಟಿ ಟ್ವೆಂಟಿ ಪದಾರ್ಪಣೆಯಾಗುವುದು ಬಹುತೇಕ ಖಚಿತ.
ಕಳೆದ ನವೆಂಬರ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿ ತಪ್ಪಿಸಿಕೊಂಡಿದ್ದ ನಾಯಕ ಕೇನ್ ವಿಲಿಯಮ್ಸನ್ ಮತ್ತೆ ತಂಡ ಸೇರಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ. ಉಳಿದಂತೆ ಕಾಲಿನ್ ಡಿ ಗ್ರಾಂಡ್ ಹೋಮ್ ಮೊದಲ ಮೂರು ಪಂದ್ಯಗಳು ಮತ್ತು ಟಾಮ್ ಬ್ರೂಸ್ ಕೊನೆಯ ಎರಡು ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಗಾಯಗೊಂಡಿದ್ದ ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ ಮತ್ತು ಲ್ಯೂಕಿ ಫರ್ಗ್ಯುಸನ್ ಈ ಸರಣಿಗೆ ಆಯ್ಕೆಯಾಗಿಲ್ಲ.
ಕಿವೀಸ್ ತಂಡ
ಕೇನ್ ವಿಲಿಯಮ್ಸನ್, ಹ್ಯಾಮಿಶ್ ಬೆನೆಟ್, ಮಾರ್ಟಿನ್ ಗಪ್ಟಿಲ್, ಸ್ಕಾಟ್ ಕುಗ್ಲಿಜನ್, ಡ್ಯಾರೆಲ್ ಮಿಚೆಲ್, ಕಾಲಿನ್ ಮನ್ಸರೋ, ರಾಸ್ ಟೇಲರ್, ಬ್ಲೇರ್ ಟಿಕ್ನರ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೈಫರ್ಟ್, ಇಶ್ ಸೋಧಿ, ಟಿಮ್ ಸೌಥಿ, ಕಾಲಿನ್ ಡಿ ಗ್ರಾಂಡ್ ಹೋಮ್ ( ಮೊದಲ 3) ಟಾಮ್ ಬ್ರೂಸ್ (ಕೊನೆಯ 2 ಪಂದ್ಯಗಳಿಗೆ).