ಕ್ರೈಸ್ಟ್ ಚರ್ಚ್: ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲನುಭವಿಸಿ ಅವಮಾನ ಅನುಭವಿಸಿದ್ದ ನ್ಯೂಜಿಲ್ಯಾಂಡ್ ತಂಡ ಎರಡನೇ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದೆ. ದಿನವಿಡೀ ಬಾಂಗ್ಲಾ ಬೌಲರ್ ಗಳ ಮೇಲೆ ಸವಾರಿ ಮಾಡಿದ ಕಿವೀಸ್ ಬ್ಯಾಟರ್ ಗಳು ಮೊದಲ ದಿನದ ಸಂಪೂರ್ಣ ಯಶಸ್ಸನ್ನು ತಮ್ಮದಾಗಿಸಿದರು.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದ ಬಾಂಗ್ಲಾ ತಂಡದ ಯೋಜನೆ ಆರಂಭದಿಂದಲೇ ಕೆಲಸ ಮಾಡಲಿಲ್ಲ. ಮೊದಲ ವಿಕೆಟ್ ಗೆ ಜೊತೆಯಾದ ನಾಯಕ ಟಾಮ್ ಲ್ಯಾಥಂ ಮತ್ತು ವಿಲ್ ಯಂಗ್ 148 ರನ್ ಜೊತೆಯಾಟವಾಡಿದರು. ಅರ್ಧ ಶತಕ ಬಾರಿಸಿದ ಯಂಗ್ 54 ರನ್ ಗೆ ಔಟಾದರು. ಇದು ಬಾಂಗ್ಲಾ ಬೌಲರ್ ಗಳಿಗೆ ಸಿಕ್ಕ ಏಕಮಾತ್ರ ಯಶಸ್ಸು.
ಇದನ್ನೂ ಓದಿ:ಬ್ರೂಕ್ಸ್, ಪೊಲಾರ್ಡ್ ಬೊಂಬಾಟ್ ಬ್ಯಾಟಿಂಗ್: ಐರ್ಲೆಂಡ್ ವಿರುದ್ಧ ವಿಂಡೀಸ್ ಗೆ ಜಯ
ನಂತರ ಡೆವೋನ್ ಕಾನ್ವೆ ಜೊತೆಯಾದ ಲಾಥಂ ಎರಡನೇ ವಿಕೆಟ್ ಗೆ ಅಜೇಯ 201 ರನ್ ಜೊತೆಯಾಟವಾಡಿದರು. ಭರ್ಜರಿ ಶತಕ ಬಾರಿಸಿದ ಲ್ಯಾಥಂ ಹಾಗ್ಲೆ ಓವಲ್ ಮೈದಾನದಲ್ಲಿ ಮೆರೆದಾಡಿದರು. 186 ರನ್ ಗಳಿಸಿರುವ ಲ್ಯಾಥಂ ಅಜೇಯರಾಗಿದ್ದು, ಎರಡನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಇವರಿಗೆ ಕಾನ್ವೆ ಉತ್ತಮ ಸಾಥ್ ನೀಡಿದ್ದು, ಅಜೇಯ 99 ರನ್ ಗಳಿಸಿದ್ದಾರೆ.
ಮೊದಲ ದಿನದ ಅಂತ್ಯಕ್ಕೆ ನ್ಯೂಜಿಲ್ಯಾಂಡ್ ಕೇವಲ ಒಂದು ವಿಕೆಟ್ ನಷ್ಟಕ್ಕೆ 349 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ.