ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಕೋವಿಡ್ ವೈರಸ್ ಮುಕ್ತವಾಗಿದೆ. ಅಲ್ಲಿನ ಕೊನೆಯ ರೋಗಿ ಕೂಡ ಈಗ ಗುಣಮುಖನಾಗಿದ್ದಾನೆ.
ಈ ಮಹತ್ವದ ಮೈಲುಗಲ್ಲು ಸಾಧಿಸಿದ ಖುಷಿಯ ವಿಷಯ ಕೇಳಿದ ಪ್ರಧಾನಿ ಜಸಿಂಡಾ ಆರ್ಡೆರ್ನ್, ಮಗಳು ನೇವ್ ಜೊತೆ ಕುಣಿದು ಕುಪ್ಪಳಿಸಿದ್ದಾರೆ.
ಜಗತ್ತಿನ ಬಹುತೇಕ ರಾಷ್ಟ್ರಗಳು ಕೋವಿಡ್ ಪ್ರಭಾವಕ್ಕೆ ಸಿಲುಕಿ ತತ್ತರಿಸಿ ಹೋಗಿರುವ ನಡುವೆಯೂ ನ್ಯೂಜಿಲೆಂಡ್ ಮಾರಕ ಕೋವಿಡ್ ವೈರಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಬೀಗಿದೆ. ಈ ಹಿನ್ನೆಲೆಯಲ್ಲಿ ದೇಶ ಕೋವಿಡ್ ಮುಕ್ತವಾಗಿದೆ ಎಂದು ಪ್ರಧಾನಿ ಆರ್ಡೆರ್ನ್ ಸೋಮವಾರ ಘೋಷಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪ್ರಧಾನಿ ಜಸಿಂಡಾ ಆರ್ಡೆರ್ನ್, ದೇಶ ಸೋಂಕು ಮುಕ್ತವಾಗಿದ್ದರೂ ಗಡಿಯಲ್ಲಿನ ನಿರ್ಬಂಧ ಮುಂದುವರಿಯಲಿದೆ. ಆದರೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಮತ್ತು ಸಾರ್ವಜನಿಕರು ಗುಂಪು ಸೇರದಿರುವುದೂ ಒಳಗೊಂಡು ಹಲವು ನಿರ್ಬಂಧಗಳು ಇನ್ನುಮುಂದೆ ಅಗತ್ಯವಿಲ್ಲ ಎಂದು ಹೇಳಿದರು.
‘ಸದ್ಯದ ಮಟ್ಟಿಗೆ ನ್ಯೂಜಿಲೆಂಡ್‌ನಲ್ಲಿ ಕೋವಿಡ್ ವೈರಸ್‌ನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ್ದೇವೆ ಎಂಬ ವಿಶ್ವಾಸ ನಮಗಿದೆ. ವೈರಸ್‌ನ ಹೆಡೆಮುರಿ ಕಟ್ಟಲು ದೇಶದ ಜನತೆ ಅಭೂತಪೂರ್ವ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ದೇಶದಲ್ಲಿದ್ದ ಕೊನೆಯ ಕೋವಿಡ್ ಸೋಂಕಿತನೂ ಗುಣಮುಖನಾದ ವಿಷಯ ಕೇಳಿದ ಬಳಿಕ ನಾನು, ನನ್ನ ಪುಟ್ಟ ಮಗಳು ನೇವ್ ಜೊತೆ ಕೋಣೆಯೊಳಗೆ ಕುಣಿದು ಕುಪ್ಪಳಿಸಿದೆ,’ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಇನ್ನು ಮುಂದೆ ಆರ್ಥಿಕ ಸ್ಥಿತಿ ಸುಧಾರಣೆಯತ್ತ ಗಮನಹರಿಸಲಿದ್ದೇವೆ ಎಂದು ಪ್ರಧಾನಿ ಆರ್ಡೆರ್ನ್ ಹೇಳಿದರು. ನ್ಯೂಜಿಲೆಂಡ್‌ನಲ್ಲಿ ಒಟ್ಟು 1,154 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಈ ಪೈಕಿ 22 ಮಂದಿ ಮೃತಪಟ್ಟಿದ್ದಾರೆ. ಈ ನಡುವೆ 40,000 ಮಂದಿಯನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ.
ಕೋವಿಡ್ ಮುಕ್ತ ಎಂಟು ದೇಶಗಳು
ಆರ್ಥಿಕವಾಗಿ ಸಬಲವಾಗಿರುವ ಅಮೆರಿಕ, ಬ್ರಿಟನ್, ಭಾರತ ಸೇರಿ ಹಲವು ದೇಶಗಳು ಕೋವಿಡ್ ಕಪಿ ಮುಷ್ಠಿಯಿಂದ ಹೊರಬರಲಾಗದೆ ಪರದಾಡುತ್ತಿವೆ. ಆದರೆ, ತಾನು ಕೋವಿಡ್ ಮುಕ್ತ ದೇಶ ಎಂದು ನ್ಯೂಜಿಲೆಂಡ್ ಸೋಮವಾರ ಘೋಷಿಸಿಕೊಂಡಿದೆ. ಈ ನಡುವೆ ನ್ಯೂಜಿಲೆಂಡ್ ಹೊರತುಪಡಿಸಿ ಮಾಂಟೆನೆಗ್ರೊ, ಎರಿಟ್ರಿಯಾ, ಪಪುವಾ ನ್ಯೂ ಗಿನಿಯಾ, ಸೀಶೆಲ್ಸ್, ಹೋಲಿ ಸೀ, ಸೇಂಟ್ ಕಿಟ್ಸ್ ಆ್ಯಂಡ್ ನೆವೀಸ್, ಫಿಜಿ, ಪೂರ್ವ ಟಿಮೋರ್ ಎಂಬ ಎಂಟು ಚಿಕ್ಕ ರಾಷ್ಟ್ರಗಳು ಕೋವಿಡ್ ವೈರಾಣುವಿನ ಸವಾಲನ್ನು ಯಶಸ್ವಿಯಾಗಿ ಮೆಟ್ಟಿನಿಂತಿವೆ.