Advertisement

ನಂ.1 ರ್‍ಯಾಂಕಿಂಗ್‌ ಮೇಲೆ ನ್ಯೂಜಿಲ್ಯಾಂಡ್ ಕಣ್ಣು

11:06 AM Jan 03, 2021 | Team Udayavani |

ಕ್ರೈಸ್ಟ್‌ಚರ್ಚ್‌: ನೂತನ ವರ್ಷಾರಂಭದ ಮೊದಲ ಟೆಸ್ಟ್‌ ಪಂದ್ಯ ನ್ಯೂಜಿಲ್ಯಾಂಡ್‌ ಮತ್ತು ಪ್ರವಾಸಿ ಪಾಕ್‌ ನಡುವೆ ರವಿವಾರ ಕ್ರೈಸ್ಟ್‌ಚರ್ಚ್‌ ನಲ್ಲಿ ಆರಂಭವಾಗಲಿದೆ. ಈ ಪಂದ್ಯವನ್ನು ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ನ್ಯೂಜಿಲ್ಯಾಂಡ್‌ ಮೊದಲ ಬಾರಿಗೆ ಐಸಿಸಿ ಟೆಸ್ಟ್‌ ಟೀಮ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸಲಿದೆ.

Advertisement

ಈಗಾಗಲೇ ಮೊದಲ ಪಂದ್ಯವನ್ನು 101 ರನ್ನುಗಳ ಅಂತರದಿಂದ ಗೆದ್ದಿರುವ ನ್ಯೂಜಿಲ್ಯಾಂಡ್‌, ದ್ವಿತೀಯ ಹಾಗೂ ಅಂತಿಮ ಟೆಸ್ಟ್‌ ಪಂದ್ಯವನ್ನೂ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆಗ ಚೊಚ್ಚಲ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಇನ್ನಷ್ಟು ಹತ್ತಿರವಾಗಲಿದೆ.

ನ್ಯೂಜಿಲ್ಯಾಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಪ್ರಚಂಡ ಫಾರ್ಮ್ ನಲ್ಲಿದ್ದು, ಮೊದಲ ಟೆಸ್ಟ್‌ನಲ್ಲಿ 23ನೇ ಶತಕ ಬಾರಿಸಿ ಪ್ರವಾಸಿಗರ ಪಾಲಿಗೆ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ಜತೆಗೆ 5 ವರ್ಷಗಳ ಬಳಿಕ ಮೊದಲ ಸಲ ನಂ.1 ಟೆಸ್ಟ್‌ ಬ್ಯಾಟ್ಸ್‌ಮನ್‌ ಆಗಿಯೂ ಮೂಡಿಬಂದಿದ್ದಾರೆ. ಕಿವೀಸ್‌ ಮೇಲುಗೈಯಲ್ಲಿ ಕೇನ್‌ ಪಾತ್ರ ನಿರ್ಣಾಯಕವಾಗಲಿದೆ.

ಗಾಯಾಳು ನೀಲ್‌ ವ್ಯಾಗ್ನರ್‌ ಈ ಪಂದ್ಯದಲ್ಲಿ ಆಡುತ್ತಿಲ್ಲ. ಇವರ ಬದಲು ಮ್ಯಾಟ್‌ ಹೆನ್ರಿ ಬಂದಿದ್ದಾರೆ. ಬ್ಯಾಟಿಂಗ್‌ ಆಲ್‌ರೌಂಡರ್‌ ಡ್ಯಾರಿಲ್‌ ಮಿಚೆಲ್‌ ಅವಕಾಶ ಪಡೆದಿದ್ದಾರೆ.

ಚೇತರಿಸದ ಬಾಬರ್‌ ಆಜಂ

Advertisement

ನಾಯಕ ಬಾಬರ್‌ ಆಜಂ ಇನ್ನೂ ಚೇತರಿಸದಿರುವುದು ಪಾಕಿಸ್ಥಾನದ ಸಂಕಟವನ್ನು ಬಿಗಡಾಯಿಸುವಂತೆ ಮಾಡಿದೆ. ಶುಕ್ರವಾರ ಅಭ್ಯಾಸಕ್ಕಿಳಿದರೂ ಅವರ ಹೆಬ್ಬೆರಳಿನ ನೋವು ವಾಸಿಯಾಗಿಲ್ಲ ಎಂದು ತಿಳಿದು ಬಂದಿದೆ.

ದಕ್ಷಿಣ ಆಫ್ರಿಕಾ ಪ್ರವಾಸ ಮುಂದಿರುವ ಕಾರಣ ಬಾಬರ್‌ ವಿಷಯದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಪಿಸಿಬಿ ತೀರ್ಮಾನಿಸಿದೆ. ಹೀಗಾಗಿ ಕೀಪರ್‌ ಮೊಹಮ್ಮದ್‌ ರಿಜ್ವಾನ್‌ ಅವರೇ ಪಾಕ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಕುಸಿದ ಪಾಕ್ : ಆಧರಿಸಿದ ಅಜರ್, ರಿಜ್ವಾನ್

ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ ತಂಡ ಕೈಲ್ ಜಾಮಿಸನ್ ದಾಳಿಗೆ ನಲುಗಿ ಕೇವಲ 83 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ನಂತರ ತಂಡವನ್ನು ಆಧರಿಸಿದ ಅಜರ್ ಅಲಿ (93 ರನ್) ಮತ್ತು ರಿಜ್ವಾನ್ (61 ರನ್ ) ಉತ್ತಮ ಜೊತೆಯಾಟ ಆಡಿದರು. 75 ಓವರ್ ಅಂತ್ಯಕ್ಕೆ ಪಾಕ್ ಏಳು ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next