Advertisement

CWC-19: ರೋಚಕ ಸೆಮಿ ಕಾಳಗ : ಕಿವೀಸ್ ಕಿಲ ಕಿಲ

01:59 PM Jul 12, 2019 | Team Udayavani |

ಮ್ಯಾಂಚೆಸ್ಟರ್: ಈ ಬಾರಿಯ ವಿಶ್ವಕಪ್ ಕೂಟದ ಅತ್ಯಂತ ರೋಮಾಂಚಕ ಫೈಟ್ ಗೆ ಸಾಕ್ಷಿಯಾದ ಪ್ರಥಮ ಸೆಮಿಫೈನಲ್ ಸೆಣೆಸಾಟದಲ್ಲಿ ಬಲಿಷ್ಟ ಭಾರತವನ್ನು 18 ರನ್ನುಗಳಿಂದ ಮಣಿಸಿದ ನ್ಯೂಝಿಲ್ಯಾಂಡ್ ಸತತ ಎರಡನೇ ಬಾರಿಗೆ ವಿಶ್ವಕಪ್ ಫೈನಲ್ ಗೆ ಲಗ್ಗೆಯಿಟ್ಟಿದೆ.

Advertisement

ಭಾರತ 49.3 ಓವರುಗಳಲ್ಲಿ 221 ರನ್ನುಗಳಿಗೆ ಆಲೌಟ್ ಆಗಿ ತನ್ನ ಮೂರನೇ ವಿಶ್ವಕಪ್ ಗೆಲುವಿನ ಕನಸಿಗೆ ಎಳ್ಳು ನೀರು ಬಿಟ್ಟುಕೊಂಡಿತು. ಮಾತ್ರವಲ್ಲದೇ 8 ವರ್ಷಗಳ ಬಳಿಕ ವಿಶ್ವಕಪ್ ಗೆದ್ದು ಆಂಗ್ಲರ ನಾಡಿನಲ್ಲಿ 1983ರ ಇತಿಹಾಸವನ್ನು ಪುನರಾವರ್ತಿಸುವ ಕೊಹ್ಲಿ ಬಳಗದ ಕನಸು ನನಸಾಗಲಿಲ್ಲ.

ಮಳೆಯ ಕಾಟಕ್ಕೆ ತುತ್ತಾದ ಈ ಸೆಮಿಫೈನಲ್ ಪಂದ್ಯ ಮೀಸಲು ದಿನಕ್ಕೆ ವಿಸ್ತರಣೆಗೊಂಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ನ್ಯೂಝಿಲ್ಯಾಂಡ್ ನಿಗದಿತ 50 ಓವರುಗಳಲ್ಲಿ 8 ವಿಕೆಟ್ ಗಳನ್ನು ಕಳೆದುಕೊಂಡು 239 ರನ್ನುಗಳ ಸಾಧಾರಣ ಮೊತ್ತವನ್ನು ಕಲೆ ಹಾಕಿತ್ತು.

ಕಿವೀಸ್ ಪರ ನಾಯಕ ಕೇನ್ ವಿಲಿಯಮ್ಸ್ 67 ರನ್ನುಗಳನ್ನು ಬಾರಿಸಿದರೆ ರಾಸ್ ಟೈಲರ್ ಇನ್ನಿಂಗ್ಸ್ ನ ಸರ್ವಾಧಿಕ 74 ರನ್ನುಗಳನ್ನು ಬಾರಿಸಿದರು. ಉಳಿದ ಬ್ಯಾಟ್ಸ್ ಮನ್ ಗಳ ಪ್ರದರ್ಶನ ನಿರಾಶಾದಾಯಕವಾಗಿತ್ತು.

ಎದುರಾಳಿ ನೀಡಿದ ಸವಾಲನ್ನು ಬೆನ್ನತ್ತಿದ ಭಾರತದ ಆರಂಭ ತೀರಾ ಶೋಚನೀಯವಾಗಿತ್ತು. ತಂಡದ ಮೊತ್ತ 4 ರನ್ ಆಗುವಷ್ಟರಲ್ಲಿ ರೋಹಿತ್ ಶರ್ಮಾ (1) ಔಟಾದರೆ ಇನ್ನೊಂದು ರನ್ ಸೇರುವಷ್ಟರಲ್ಲಿ ನಾಯಕ ಕೊಹ್ಲಿ (1) ವಿಕೆಟ್ ಉದುರಿತ್ತು ಇದರ ಬೆನ್ನಿಗೇ ರಾಹುಲ್ (1) ವಿಕೆಟ್ ಉರುಳಿತ್ತು ಆಗ ತಂಡದ ಮೊತ್ತ 5-3. ಭರವಸೆ ಮೂಡಿಸಿದ್ದ ದಿನೇಶ್ ಕಾರ್ತಿಕ್ (6) ಯಾವುದೇ ಪರಾಕ್ರಮ ತೋರಲಿಲ್ಲ. ಆದರೆ ನಂತರ ಜೊತೆಯಾದ ರಿಷಭ್ ಪಂತ್ (32) ಹಾಗೂ ಹಾರ್ಧಿಕ್ ಪಾಂಡ್ಯ (32) ನಿಧಾನವಾಗಿ ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡಿದರು.

Advertisement

ಈ ಜೋಡಿ ಬೇರ್ಪಟ್ಟ ಬಳಿಕ ಧೋನಿ (50) ಹಾಗೂ ಜಡೇಜಾ (77) ಭಾರತದ ಗೆಲುವಿನ ಆಸೆಯನ್ನು ಚಿಗುರಿಸಿದರು. ಇದರಲ್ಲಿ ಧೋನಿ ನಿಧಾನಗತಿಯ ಬ್ಯಾಟಿಂಗ್ ಮೊರೆಹೋದರೆ ಜಡೇಜಾ ಕಿವೀಸ್ ಬೌಲರ್ ಗಳನ್ನು ದಂಡಿಸತೊಡಗಿದರು. ಜಡೇಜಾ 59 ಎಸೆತಗಳಲ್ಲಿ 77 ರನ್ನುಗಳನ್ನು ಬಾರಿಸಿದರು ಇದರಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸೇರಿತ್ತು.

ಆದರೆ ಉತ್ತಮ ಜೊತೆಯಾಟ ಕಟ್ಟಿದ್ದ ಜಡೇಜಾ ಹಾಗೂ ದೋನಿ ನಾಲ್ಕೇ ಎಸೆತಗಳ ಅಂತರದಲ್ಲಿ ಔಟಾಗುವುದರೊಂದಿಗೆ ಭಾರತದ ಹೋರಾಟ ಅಂತ್ಯಗೊಳ್ಳುವುದು ಖಚಿತವಾಗಿತ್ತು. ಗೆಲುವಿಗೆ ಬೇಕಾಗಿದ್ದ 19 ರನ್ನುಗಳನ್ನು ಬಾರಿಸಲು ಬಾಲಂಗೋಚಿಗಳು ವಿಫಲರಾದರು.

ನ್ಯೂಝಿಲ್ಯಾಂಡ್ ತಂಡದ ಬೌಲಿಂಗ್ ಮತ್ತು ಕ್ಷೇತ್ರರಕ್ಷಣೆ ಉತ್ಕೃಷ್ಟ ಮಟ್ಟದಲ್ಲಿದ್ದುದೂ ಸಹ ಟೀಂ ಇಂಡಿಯಾ ಸೋಲಿಗೆ ಕಾರಣವಾಯ್ತೆನ್ನಬಹುದು.

3.70 ಎಕಾನಮಿಯಲ್ಲಿ ಬೌಲಿಂಗ್ ನಡೆಸಿದ ಮ್ಯಾಟ್ ಹೆನ್ರಿ 10 ಓವರುಗಳಲ್ಲಿ 3 ವಿಕೆಟ್ ಪಡೆದು ಮಿಂಚಿದರು. ಇದರಲ್ಲಿ ಶರ್ಮಾ ಮತ್ತು ರಾಹುಲ್ ವಿಕಟ್ ಗಳೂ ಸೇರಿದೆ. ವೇಗಿ ಟ್ರೆಂಟ್ ಬೌಲ್ಟ್ 2 ವಿಕೆಟ್ ಪಡೆದರು. ಸ್ಪಿನ್ನರ್ ಸ್ಯಾಟ್ನರ್ 2 ವಿಕೆಟ್ ಪಡೆದರೆ ಫರ್ಗ್ಯುಸನ್ ಹಾಗೂ ನೀಶಮ್ ತಲಾ 1 ವಿಕೆಟ್ ಪಡೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next