Advertisement
ಭಾರತ ನೀಡಿದ 347 ರನ್ ಗಳ ಗುರಿಯನ್ನು ಬೆನ್ನಟ್ಟಿದ ಅತಿಥೇಯರಿಗೆ ಓಪನರ್ ಗಳಾದ ಮಾರ್ಟಿನ್ ಗಪ್ಟಿಲ್ (32) ಮತ್ತು ಹೆನ್ರಿ ನಿಕೊಲಸ್ (78) ಅವರು ಉತ್ತಮ ಆರಂಭ ಒದಗಿಸಿದರು. ಇವರ ಪ್ರಥಮ ವಿಕೆಟ್ ಜೊತೆಯಾಟದಲ್ಲಿ 85 ರನ್ ಹರಿದು ಬಂತು. ಈ ಸಂದರ್ಭದಲ್ಲಿ 32 ರನ್ ಗಳಿಸಿದ್ದ ಗಪ್ಟಿಲ್ ಔಟಾದರು. ಬಳಿಕ ಬಂದ ಟಾಮ್ ಬ್ಲಂಡೆಲ್ ಅವರು ಕೇವಲ 09 ರನ್ ಗಳಿಸಿ ಕುಲದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದರು.ಈ ಹಂತದಲ್ಲಿ ನಿಕೊಲಸ್ ಜೊತೆ ಸೇರಿದ ಅನುಭವಿ ಆಟಗಾರ ರಾಸ್ ಟೇಲರ್ (ಅಜೇಯ 109) ಉತ್ತಮವಾಗಿ ಆಡುತ್ತಾ ಗೆಲುವಿನ ಗುರಿಯನ್ನು ಬೆನ್ನತ್ತಲಾರಂಭಿಸಿದರು. ಇವರಿಬ್ಬರು ಮೂರನೇ ವಿಕೆಟ್ ಗೆ 62 ರನ್ ಗಳ ಅಮೂಲ್ಯ ಭಾಗೀದಾರಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ 78 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಹೆನ್ರಿ ನಿಕೊಲಸ್ (78) ರನೌಟ್ ಆಗುವುದರೊಂದಿಗೆ ಭಾರತದ ಗೆಲುವಿನ ಆಸೆ ಮತ್ತೆ ಚಿಗುರಿತ್ತು.
ತಂಡದ ಗೆಲುವಿಗೆ 39 ರನ್ ಅಗತ್ಯವಿದ್ದಾಗ ಬಿರುಸಿನ ಆಟವಾಡುತ್ತಿದ್ದ ಟಾಮ್ ಲಾಥಮ್ 69 ರನ್ ಗಳಿಸಿ ಔಟಾದರೂ ಇನ್ನೊಂದು ತುದಿಯಲ್ಲಿ ಶತಕ ದಾಖಲಿಸಿ ಭರ್ಜರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ಟೇಲರ್ ಅವರು ತಂಡದ ಗೆಲುವನ್ನು ಸರಾಗಗೊಳಿಸಿದರು. ಕೇವಲ 84 ಎಸೆತಗಳಲ್ಲಿ 109 ರನ್ ಗಳಿಸಿ ಔಟಾಗದೇ ಉಳಿದ ರಾಸ್ ಟೇಲರ್ ಅಜೇಯ ಆಟಕ್ಕೆ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದುಬಂತು. ತಮ್ಮ ಈ ಅಜೇಯ ಇನ್ನಿಂಗ್ಸ್ ನಲ್ಲಿ ರಾಸ್ ಟೇಲರ್ 10 ಬೌಂಡರಿ ಹಾಗೂ 4 ಸಿಕ್ಸರ್ ಗಳನ್ನೂ ಸಿಡಿಸಿದ್ದರು. ಅಂತಿಮವಾಗಿ ನ್ಯೂಜಿಲ್ಯಾಂಡ್ 48.1 ಓವರ್ ಗಳಲ್ಲಿ 6 ವಿಕೆಟ್ ಗಳನ್ನು ಕಳೆದುಕೊಂಡು 348 ರನ್ ಕಲೆಹಾಕುವ ಮೂಲಕ 4 ವಿಕೆಟ್ ಗಳ ಜಯವನ್ನು ದಾಖಲಿಸಿತು.
Related Articles
Advertisement