Advertisement

ಮಿಂಚಿದ ಮಿಚೆಲ್‌; ಕಿವೀಸ್‌ ಟಿ20 ವಿಶ್ವಕಪ್‌ ಫೈನಲ್‌ಗೆ ಲಗ್ಗೆ

11:17 PM Nov 10, 2021 | Team Udayavani |

ಅಬುಧಾಬಿ: ಎಲ್ಲ ಬ್ಯಾಟಿಂಗ್‌ ಒತ್ತಡವನ್ನು ಯಶಸ್ವಿಯಾಗಿ ಮೆಟ್ಟಿನಿಂತ ನ್ಯೂಜಿಲ್ಯಾಂಡ್‌ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಫೈನಲ್‌ಗೆ ಲಗ್ಗೆ ಹಾಕಿದೆ.

Advertisement

ಬುಧವಾರದ ಮೊದಲ ಸೆಮಿಫೈನಲ್‌ನಲ್ಲಿ ಕಿವೀಸ್‌ ಪಡೆ ಇಂಗ್ಲೆಂಡನ್ನು 5 ವಿಕೆಟ್‌ಗಳಿಂದ ಉರುಳಿಸಿ ಪರಾಕ್ರಮ ಮೆರೆಯಿತು. ಆಂಗ್ಲರ 3ನೇ ಫೈನಲ್‌ ಯೋಜನೆ ತಲೆ ಕೆಳಗಾಯಿತು.

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್‌ 4 ವಿಕೆಟಿಗೆ 166 ರನ್‌ ಗಳಿಸಿ ಸವಾಲೊಡ್ಡಿತು. ನ್ಯೂಜಿಲ್ಯಾಂಡ್‌ 19 ಓವರ್‌ಗಳಲ್ಲಿ 5 ವಿಕೆಟಿಗೆ 167 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ಆರಂಭಕಾರ ಡ್ಯಾರಿಲ್‌ ಮಿಚೆಲ್‌ ನ್ಯೂಜಿಲ್ಯಾಂಡಿನ ಗೆಲುವಿನ ರೂವಾರಿ ಎನಿಸಿದರು. ಅವರು 47 ಎಸೆತಗಳಿಂದ 72 ರನ್‌ ಬಾರಿಸಿ ಇಂಗ್ಲೆಂಡ್‌ ಬೌಲರ್‌ಗಳಿಗೆ ಬೆವರಿಳಿಸಿದರು. ಈ ಪಂದ್ಯಶ್ರೇಷ್ಠ ಆಟದಲ್ಲಿ 4 ಬೌಂಡರಿ, 4 ಸಿಕ್ಸರ್‌ ಸಿಡಿಯಿತು.

ಮಾರ್ಟಿನ್‌ ಗಪ್ಟಿಲ್‌ (4) ಮತ್ತು ಕೇನ್‌ ವಿಲಿಯಮ್ಸನ್‌ ಅವರನ್ನು (5) ವೋಕ್ಸ್‌ ಅಗ್ಗಕ್ಕೆ ಉರುಳಿಸಿದಾಗ ಕಿವೀಸ್‌ ತೀವ್ರ ಒತ್ತಡಕ್ಕೆ ಸಿಲುಕಿತು. ಆದರೆ ಒಂದೆಡೆ ಕ್ರೀಸಿಗೆ ಅಂಟಿಕೊಂಡು ನಿಂತ ಡ್ಯಾರಿಲ್‌ ಮಿಚೆಲ್‌-ಡೇವನ್‌ ಕಾನ್ವೆ 82 ರನ್‌ ಜತೆಯಾಟ ನಿಭಾಯಿಸಿ ತಂಡವನ್ನು ಮೇಲೆತ್ತಿದರು. ಆದರೂ ಅಂತಿಮ 4 ಓವರ್‌ಗಳಲ್ಲಿ 57 ರನ್‌ ತೆಗೆಯುವ ಕಠಿನ ಸವಾಲು ಎದುರಿಗಿತ್ತು. ಮಿಚೆಲ್‌ ಅವರನ್ನು ಕೂಡಿಕೊಂಡ ಜೇಮ್ಸ್‌ ನೀಶಮ್‌ ಸಿಡಿದು ನಿಂತರು. ಲೆಕ್ಕಾಚಾರ 2 ಓವರ್‌, 20 ರನ್ನಿಗೆ ಬಂದು ನಿಂತಿತು.

Advertisement

ಇದನ್ನೂ ಓದಿ:ಲವ್ಲಿನಾರನ್ನು ನೇರವಾಗಿ ವಿಶ್ವಕೂಟಕ್ಕೆ ಆಯ್ಕೆ ಮಾಡಿದ್ದೇಕೆ?

ಅಲಿ ಅರ್ಧ ಶತಕ
ಮೊಯಿನ್‌ ಅಲಿ ಅವರ ಅಜೇಯ ಅರ್ಧ ಶತಕ, ಡೇವಿಡ್‌ ಮಲಾನ್‌ ಅವರ ಆಕರ್ಷಕ ಆಟ ಇಂಗ್ಲೆಂಡ್‌ ಸರದಿಯ ಹೈಲೈಟ್‌ ಎನಿಸಿತು. ನ್ಯೂಜಿಲ್ಯಾಂಡ್‌ ಒಟ್ಟು 7 ಮಂದಿಯನ್ನು ಬೌಲಿಂಗಿಗೆ ಇಳಿಸಿತು. ಟಿಮ್‌ ಸೌಥಿ ಉತ್ತಮ ನಿಯಂತ್ರಣ ಸಾಧಿಸಿದರು.

ಡೆತ್‌ ಓವರ್‌ಗಳಲ್ಲಿ ಮುನ್ನುಗ್ಗಿ ಬಾರಿಸಿದ ಮೊಯಿನ್‌ ಅಲಿ 37 ಎಸೆತಗಳಿಂದ 51 ರನ್‌ ಹೊಡೆದು ಔಟಾಗದೆ ಉಳಿದರು. 3 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಇದು ಒಳಗೊಂಡಿತ್ತು. ಇವರ ಪರಾಕ್ರಮದಿಂದ ಮೊತ್ತ 160ರ ಗಡಿ ದಾಟಿತು. ಇಂಗ್ಲೆಂಡಿನ ಆರಂಭ ಉತ್ತಮ ಮಟ್ಟದಲ್ಲಿತ್ತು. ಟ್ರೆಂಟ್‌ ಬೌಲ್ಟ್ ಅವರನ್ನು ಟಾರ್ಗೆಟ್‌ ಮಾಡಿಕೊಂಡ ಜಾಸ್‌ ಬಟ್ಲರ್‌ ಬಿರುಸಿನ ಆಟಕ್ಕಿಳಿದರು. ಆದರೆ ಟಿಮ್‌ ಸೌಥಿ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದರು. 5 ಓವರ್‌ಗಳಲ್ಲಿ ಸ್ಕೋರ್‌ 37ಕ್ಕೆ ಏರಿತು. ಆಗ ಮೊದಲ ಬೌಲಿಂಗ್‌ ಬದಲಾವಣೆಯ ರೂಪದಲ್ಲಿ ದಾಳಿಗಿಳಿದ ಆ್ಯಡಂ ಮಿಲೆ° ಮೊದಲ ಎಸೆತದಲ್ಲೇ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 13 ರನ್‌ ಮಾಡಿದ ಬೇರ್‌ಸ್ಟೊ, ನಾಯಕ ವಿಲಿಯಮ್ಸನ್‌ಗೆ ಕ್ಯಾಚ್‌ ನೀಡಿ ವಾಪಸಾದರು.

ಬೇರೂರುವ ಸೂಚನೆ ನೀಡಿದ ಜಾಸ್‌ ಬಟ್ಲರ್‌ 9ನೇ ಓವರ್‌ ಆರಂಭದ ತನಕ ನಿಂತು 29 ರನ್‌ ಮಾಡಿದರು. ಇವರನ್ನು ಸ್ಪಿನ್ನರ್‌ ಸೋಧಿ ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. 24 ಎಸೆತ ಎದುರಿಸಿದ ಬಟ್ಲರ್‌ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಒಳಗೊಂಡಿತ್ತು. 10 ಓವರ್‌ ಮುಕ್ತಾಯಕ್ಕೆ ಇಂಗ್ಲೆಂಡ್‌ 2 ವಿಕೆಟಿಗೆ 67 ರನ್‌ ಗಳಿಸಿತ್ತು. ಕಿವೀಸ್‌ ಬೌಲರ್ ಆಂಗ್ಲರಿಗೆ ಕಡಿವಾಣ ಹಾಕುವಲ್ಲಿ ಬಹುತೇಕ ಯಶಸ್ಸು ಸಾಧಿಸಿದ್ದರು. ಆದರೆ ಮುಂದಿನ 10 ಓವರ್‌ಗಳಲ್ಲಿ 99 ರನ್‌ ಸೋರಿ ಹೋಯಿತು.

ಡೇವಿಡ್‌ ಮಲಾನ್‌-ಮೊಯಿನ್‌ ಅಲಿ ಒಟ್ಟುಗೂಡಿದ ಬಳಿಕ ಇಂಗ್ಲೆಂಡ್‌ ಸರದಿ ಬಿರುಸು ಪಡೆಯಿತು. 3ನೇ ವಿಕೆಟಿಗೆ 43 ಎಸೆತಗಳಿಂದ 63 ರನ್‌ ಒಟ್ಟುಗೂಡಿತು. ಮೊನ್ನೆಯ ತನಕ ಟಿ20 ನಂ.1 ಬ್ಯಾಟ್ಸ್‌ಮನ್‌ ಆಗಿದ್ದ ಮಲಾನ್‌ ಕಿವೀಸ್‌ ಬೌಲಿಂಗಿಗೆ ದಿಟ್ಟ ರೀತಿಯಲ್ಲಿ ಜವಾಬು ನೀಡತೊಡಗಿದರು. 15 ಓವರ್‌ ಮುಕ್ತಾಯಕ್ಕೆ ಇಂಗ್ಲೆಂಡ್‌ ಸ್ಕೋರ್‌ 110ಕ್ಕೆ ಏರಿತು. ಡೆತ್‌ ಓವರ್‌ಗಳಲ್ಲಿ ಮಲಾನ್‌ ಹೆಚ್ಚು ಆಕ್ರಮಣಕಾರಿಯಾಗುವ ಸೂಚನೆ ನೀಡಿದರು. ಸೌಥಿ ಅವರ 16ನೇ ಓವರಿನ ಮೊದಲನೇ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿದರು. ಆದರೆ ಮುಂದಿನ ಎಸೆತವನ್ನೇ ಕೀಪರ್‌ ಕಾನ್ವೆ ಕೈಗೆ ಕ್ಯಾಚ್‌ ಕೊಡಿಸುವಲ್ಲಿ ಸೌಥಿ ಯಶಸ್ವಿಯಾದರು. 30 ಎಸೆತ ಎದುರಿಸಿದ ಮಲಾನ್‌ ಕೊಡುಗೆ 41 ರನ್‌, ಸಿಡಿಸಿದ್ದು 4 ಫೋರ್‌ ಹಾಗೂ ಒಂದು ಸಿಕ್ಸರ್‌.

ಇನ್ನೊಂದೆಡೆ ಮೊಯಿನ್‌ ಅಲಿ ಬಿರುಸಿನ ಆಟಕ್ಕಿಳಿದರು. ನ್ಯೂಜಿಲ್ಯಾಂಡಿನ ಬಿಗಿ ಫೀಲ್ಡಿಂಗ್‌ ಕೂಡ ಚದುರಿಹೋಯಿತು.

ಸ್ಕೋರ್‌ ಪಟ್ಟಿ
ಇಂಗ್ಲೆಂಡ್‌
ಜಾಸ್‌ ಬಟ್ಲರ್‌ ಎಲ್‌ಬಿಡಬ್ಲ್ಯು ಬಿ ಸೋಧಿ 29
ಜಾನಿ ಬೇರ್‌ಸ್ಟೊ ಸಿ ವಿಲಿಯಮ್ಸನ್‌ ಬಿ ಮಿಲ್ನೆ 13
ಡೇವಿಡ್‌ ಮಲಾನ್‌ ಸಿ ಕಾನ್ವೆ ಬಿ ಸೌಥಿ 41
ಮೊಯಿನ್‌ ಅಲಿ ಔಟಾಗದೆ 51
ಲಿವಿಂಗ್‌ಸ್ಟೋನ್‌ ಸಿ ಸ್ಯಾಂಟ್ನರ್‌ ಬಿ ನೀಶಮ್‌ 17
ಇಯಾನ್‌ ಮಾರ್ಗನ್‌ ಔಟಾಗದೆ 4
ಇತರ 11
ಒಟ್ಟು (4 ವಿಕೆಟಿಗೆ) 166
ವಿಕೆಟ್‌ ಪತನ:1-37, 2-53, 3-116, 4-156.
ಬೌಲಿಂಗ್‌; ಟಿಮ್‌ ಸೌಥಿ 4-0-24-1
ಟ್ರೆಂಟ್‌ ಬೌಲ್ಟ್ 4-0-41-0
ಆ್ಯಡಂ ಮಿಲ್ನೆ 4-0-31-1
ಐಶ್‌ ಸೋಧಿ 4-0-32-1
ಮಿಚೆಲ್‌ ಸ್ಯಾಂಟ್ನರ್‌ 1-0-8-0
ಜೇಮ್ಸ್‌ ನೀಶಮ್‌ 2-0-18-1
ಗ್ಲೆನ್‌ ಫಿಲಿಪ್ಸ್‌ 1-0-11-0

ನ್ಯೂಜಿಲ್ಯಾಂಡ್‌
ಮಾರ್ಟಿನ್‌ ಗಪ್ಟಿಲ್‌ ಸಿ ಅಲಿ ಬಿ ವೋಕ್ಸ್‌ 4
ಡೇರಿಲ್‌ ಮಿಚೆಲ್‌ ಔಟಾಗದೆ 72
ವಿಲಿಯಮ್ಸನ್‌ ಸಿ ರಶೀದ್‌ ಬಿ ವೋಕ್ಸ್‌ 5
ಡೇವನ್‌ ಕಾನ್ವೆ ಸ್ಟಂಪ್ಡ್ ಬಿ ಲಿವಿಂಗ್‌ಸ್ಟೋನ್‌ 46
ಗ್ಲೆನ್‌ ಫಿಲಿಪ್ಸ್‌ ಸಿ ಬಿಲ್ಲಿಂಗ್ಸ್‌ ಬಿ ಲಿವಿಂಗ್‌ಸ್ಟೋನ್‌ 2
ನೀಶಮ್‌ ಸಿ ಮಾರ್ಗನ್‌ ಬಿ ರಶೀದ್‌ 27
ಸ್ಯಾಂಟ್ನರ್‌ ಔಟಾಗದೆ 1
ಇತರ 10
ಒಟ್ಟು (19 ಓವರ್‌ಗಳಲ್ಲಿ 5 ವಿಕೆಟಿಗೆ) 167
ವಿಕೆಟ್‌ ಪತನ:1-4, 2-13, 3-95, 4-107, 5-147.
ಬೌಲಿಂಗ್‌; ಕ್ರಿಸ್‌ ವೋಕ್ಸ್‌ 4-1-36-2
ಕ್ರಿಸ್‌ ಜೋರ್ಡನ್‌ 3-0-31-0
ಆದಿಲ್‌ ರಶೀದ್‌ 4-0-39-1
ಮಾರ್ಕ್‌ ವುಡ್‌ 4-0-34-0
ಲಿಂವಿಂಗ್‌ಸ್ಟೋನ್‌ 4-0-22-2

Advertisement

Udayavani is now on Telegram. Click here to join our channel and stay updated with the latest news.

Next