ಮೌಂಟ್ ಮಾಂಗಾನುಯಿ: ಮಾರ್ಟಿನ್ ಗಪ್ಟಿಲ್ (138 ರನ್) ಶತಕ, ಕೇನ್ ವಿಲಿಯಮ್ಸನ್ (76 ರನ್), ರಾಸ್ ಟೇಲರ್ (54 ರನ್) ಅರ್ಧಶತಕ ಹಾಗೂ ಜಿಮ್ಮಿ ನೀಶಮ್ (ಅಜೇಯ 47 ರನ್) ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ 45 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಕಿವೀಸ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ 50 ಓವರ್‌ಗೆ 7 ವಿಕೆಟ್ ಕಳೆದುಕೊಂಡು ಬರೋಬ್ಬರಿ 371 ರನ್ ಕಲೆ ಹಾಕಿತು. ಕಠಿಣ ಗುರಿ ಬೆನ್ನಟ್ಟಿದ ಶ್ರೀಲಂಕಾ ಕುಶಲ್ ಪೆರೆರಾ (102 ರನ್) ಹಾಗೂ ನಿರೋಶನ್ ಡಿಕ್ವೆಲ್ಲ (76 ರನ್) ಹಾಗೂ ಧನುಷ್ಕ ಗುಣತಿಲಕ (43 ರನ್) ಸಾಹಸದ ನೆರವಿನಿಂದ 49 ಓವರ್‌ಗೆ 326 ರನ್ ಕೂಡಿ ಹಾಕಿತು. ಆದರೆ ಉಳಿದ ಆಟಗಾರರ ವೈಫಲ್ಯದಿಂದ ತಂಡ ಸೋಲು ಅನುಭವಿಸುವಂತಾಯಿತು.
ಜಿಮ್ಮಿ ನೀಶಮ್ ಸ್ಫೋಟಕ ಬ್ಯಾಟಿಂಗ್: ನ್ಯೂಜಿಲೆಂಡ್ ಮೊತ್ತವನ್ನು ಕೊನೆಯ ಕ್ಷಣದಲ್ಲಿ ಹೆಚ್ಚಿಸಿದ್ದು ಜಿಮ್ಮಿ ನೀಶಮ್. ಏಕದಿನಕ್ಕೆ ಭರ್ಜರಿ ವಾಪಸ್ ಆದ ಅವರು 49ನೇ ಓವರ್‌ನಲ್ಲಿ ಕಮಾಲ್ ಮಾಡಿದರು. ತಿಸ್ಸಾರ ಪರೆರಾ ಮೊದಲ 5 ಎಸೆತಗಳನ್ನು ಕ್ರಮವಾಗಿ ಸಿಕ್ಸರ್‌ಗಟ್ಟಿ ನೀಶಮ್ ಅಬ್ಬರಿಸಿದರು. ಕೊನೆಯ ಎಸೆತವೂ ಸಿಕ್ಸರ್ ಆಗಿದ್ದರೆ ದಾಖಲೆಯೊಂದಕ್ಕೆ ಜಿಮ್ಮಿ ಪಾತ್ರರಾಗುತ್ತಿದ್ದರು. ಸ್ವಲ್ಪದರಲ್ಲೇ ಅವಕಾಶ ಕೈತಪ್ಪಿತು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ 50 ಓವರ್‌ಗೆ 371/7 (ಮಾರ್ಟಿನ್ ಗಪ್ಟಿಲ್ 138 , ಶತಕ, ಕೇನ್ ವಿಲಿಯಮ್ಸನ್ 76, ಪ್ರದೀಪ್ 72ಕ್ಕೆ2), ಶ್ರೀಲಂಕಾ 49 ಓವರ್‌ಗೆ 326 ಆಲೌಟ್ (ಕುಶಲ್ ಪೆರೆರಾ 102, ನಿರೋಶನ್ ಡಿಕ್ವೆಲ್ಲ 76,ನೀಶಮ್ 38ಕ್ಕೆ3)