Advertisement
ಸ್ವಾತಂತ್ರ್ಯೋತ್ತರದ ಪ್ರಾರಂಭದ ವರ್ಷಗಳಲ್ಲಿ ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯುವ ಕಾಲದಲ್ಲಿ ಬಹು ಸಂಖ್ಯೆಯ ಮತದಾರರಿಗೆ ತಮ್ಮಿಂದ ಚುನಾಯಿತ ಪ್ರತಿನಿಧಿ ಯಾವ ಸರಕಾರ ರಚನೆ ಪ್ರಕ್ರಿಯೆಯ ಭಾಗೀದಾರ ಎನ್ನುವ ಸ್ಪಷ್ಟ ಕಲ್ಪನೆಯೂ ಇರುತ್ತಿರಲಿಲ್ಲ ಎಂದರೆ ತಪ್ಪಾಗದು.
Related Articles
Advertisement
ಯುವ ಮತದಾರ ರಾಷ್ಟ್ರದ ಸ್ವಾಭಿಮಾನ ಮತ್ತು ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಸ್ಥಾನ-ಮಾನದ ಕುರಿತಂತೆ ತನ್ನದೇ ಆದ ಆಸೆ-ಆಶೋತ್ತರಗಳನ್ನು ಹೊಂದಿದ್ದಾನೆ ಎನ್ನುವುದನ್ನು ಅಲಕ್ಷಿಸಲು ಸಾಧ್ಯವಿಲ್ಲ. ರಾಷ್ಟ್ರ ರಾಜಕಾರಣವನ್ನು ಕಾಡುತ್ತಿರುವ ವಂಶವಾದ, ಭ್ರಷ್ಟಾಚಾರದಿಂದ ಅಸಂತುಷ್ಟ ಗೊಂಡಿರುವ ಮತದಾರ ನಿಸ್ವಾರ್ಥವಾಗಿ ದುಡಿಯುವ ರಾಜಕೀಯ ನೇತೃತ್ವವನ್ನು ಅನುಸರಿಸುವ-ಆರಾಧಿಸುವ ಹೊಸ ಪರಿ(trend) ನಾವಿಂದು ಕಾಣುತ್ತಿದ್ದೇವೆ.
ರಾಷ್ಟ್ರದ ಭದ್ರತೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಚ್ಚುತ್ತಿರುವ ವರ್ಚಸ್ಸು ಚುನಾವಣೆಯ ಈ ಹೊತ್ತಿನಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ ಎನ್ನುವುದು ಸ್ಪಷ್ಟ. ಕೆಲವು ರಾಜಕೀಯ ಪಕ್ಷಗಳು ಹೊಸ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿವೆ. ಸೇನೆಯ ಶೌರ್ಯ-ಸಾಹಸ, ದೇಶಭಕ್ತಿಯ ಮೇಲೆ ಆದರವಿರುವ ಜನತೆಗೆ ಸ್ವಾರ್ಥ ರಾಜಕಾರಣಿಗಳ ಸೇನೆಯ ಟೀಕೆ ಸಮ್ಮತವಲ್ಲ.
ಸೇನೆಯ ವಿಶ್ವಾಸಾರ್ಹತೆ ಮತ್ತು ರಾಷ್ಟ್ರದ ಭದ್ರತೆಯಂತಹ ವಿಷಯಗಳಲ್ಲಿ ರಾಜಕೀಯ ಪಕ್ಷಗಳ ಸಿನಿಕ ನಿಲುವು ಚುನಾವಣೆಯಲ್ಲಿ ಅವುಗಳಿಗೆ ಹಾನಿ ಮಾಡಬಹುದು ಎನ್ನುವುದರಲ್ಲಿ ಸಂದೇಹವಿಲ್ಲ. ಒಂದು ರಾಷ್ಟ್ರ ಪ್ರಗತಿಯ ಹಾದಿಯಲ್ಲಿ ಮುಂದುವರೆಯಬೇಕಾದರೆ ಆಂತರಿಕ ಹಾಗೂ ಬಾಹ್ಯ ಶತ್ರುಗಳ ಸವಾಲನ್ನು ಎದುರಿಸುವ ರಾಜಕೀಯ ನೇತೃತ್ವ ಇರಬೇಕೆಂಬುದನ್ನು ಇಂದಿನ ಮತದಾರರು ಚೆನ್ನಾಗಿ ಅರಿತಿದ್ದಾರೆ. ದೇಶದಲ್ಲಿ ಶಾಂತಿ, ಸ್ಥಿರತೆ ಇದ್ದರೆ ವಿದೇಶೀ ಬಂಡವಾಳ ಹರಿದು ಬರುವುದು ಸಾಧ್ಯ. ವ್ಯಾಪಾರ-ಉದ್ದಿಮೆಗಳಲ್ಲಿ ವೃದ್ಧಿ ಕಾಣಬಹುದು. ಆ ದೃಷ್ಟಿಯಲ್ಲಿ ದೇಶದ ಸುರಕ್ಷತೆ ಪ್ರಮುಖ ಅಂಶ ಎನ್ನುವುದು ನಿರ್ವಿವಾದ ಸಂಗತಿ.
ಯಾವ ರೀತಿಯಲ್ಲಿ ತುಷ್ಟೀಕರಣ ರಾಜಕಾರಣ ಅನುಸರಿಸಿದ ರಾಜಕೀಯ ಪಕ್ಷಗಳು ಕಾಲಾಂತರದಲ್ಲಿ ತಮ್ಮ ವರ್ಚಸ್ಸು ಬದಲಿಸಲು ಶತ ಪ್ರಯತ್ನ ಪಡಬೇಕಾಯಿತೋ ಅದೇ ರೀತಿಯಲ್ಲಿ ಸೇನೆ, ರಾಷ್ಟ್ರದ ಸುರಕ್ಷತೆ ವಿಷಯದಲ್ಲಿ ಲಘುವಾಗಿ ಮಾತನಾಡುವ ಪಕ್ಷಗಳು, ರಾಜಕಾರಣಿಗಳು ಚುನಾವಣೋತ್ತರದಲ್ಲಿ ಪಶ್ಚಾತ್ತಾಪ ಪಡಬೇಕಾಗಬಹುದು. ನವ ಭಾರತದ ಯುವ ಮತದಾರರ ಚಿಂತನೆ ಹೊಸ ಸರ್ಕಾರದ ರಚನೆಯಲ್ಲಿ ನಿರ್ಣಾಯಕ ಎನ್ನುವುದರಲ್ಲಿ ಸಂದೇಹವಿಲ್ಲ.
ಬೈಂದೂರು ಚಂದ್ರಶೇಖರ ನಾವಡ