Advertisement

ನ್ಯೂಯಾರ್ಕ್‌, ಅಮೆರಿಕದ ಹಾಟ್‌ಸ್ಪಾಟ್‌; ಒಟ್ಟು ಸಾವಿನ ಪೈಕಿ ಅರ್ಧದಷ್ಟು ಸಾವು ಇಲ್ಲೇ

03:48 AM Apr 12, 2020 | Team Udayavani |

ವಾಷಿಂಗ್ಟನ್‌/ಹೊಸದಿಲ್ಲಿ: ಅಮೆರಿಕದಲ್ಲಿ ಕೋವಿಡ್ 19 ವೈರಸ್ ನಿದ ಸಂಭವಿಸಿದ ಸಾವಿನ ಪ್ರಮಾಣದಲ್ಲಿ ಅರ್ಧದಷ್ಟು ನ್ಯೂಯಾರ್ಕ್‌ನಲ್ಲಿಯೇ ಸಂಭವಿಸಿದೆ. ಶನಿವಾರ ಇಲ್ಲಿ ಸೋಂಕಿತರ ಸಂಖ್ಯೆ 1.60 ಲಕ್ಷಕ್ಕೇರಿದ್ದು, ಈ ವಿಚಾರದಲ್ಲಿ ಸ್ಪೇನ್‌ ಮತ್ತು ಇಟಲಿಯನ್ನೂ ನ್ಯೂಯಾರ್ಕ್‌ ಮೀರಿಸಿದೆ. ಕೇವಲ ನ್ಯೂಯಾರ್ಕ್‌ನಲ್ಲೇ 7,800 ಮಂದಿ ಮೃತಪಟ್ಟಿದ್ದಾರೆ.

Advertisement

ಇದಕ್ಕೇನು ಕಾರಣ? ಕಾರಣ ಇಷ್ಟೆ, ಈ ನಗರ ಅತ್ಯಂತ ಹೆಚ್ಚು ಜನಸಾಂದ್ರತೆಯಿರುವ ನಗರ. ಅಲ್ಲದೆ, ಅತಿ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡುವ ಸ್ಥಳ. ಒಂದು ಚದರ ಕಿಲೋಮೀಟರ್‌ಗೆ 10,000 ಮಂದಿಯಂತೆ ಜನಸಾಂದ್ರತೆ ಇಲ್ಲಿದೆ. ಇಲ್ಲಿನ ಸಬ್‌ ವೇಗಳಲ್ಲಿ ಲಕ್ಷಾಂತರ ಮಂದಿ ಒಬ್ಬರಿಗೊಬ್ಬರು ತಾಕಿಕೊಂಡೇ ಸಾಗುವಂಥ ಸ್ಥಿತಿಯಿದೆ. ವರ್ಷಕ್ಕೆ 6 ಕೋಟಿಗೂ ಹೆಚ್ಚು ಪ್ರವಾಸಿಗರನ್ನು ಕೈಬೀಸಿ ಕರೆಯುವಂಥ ನಗರವಿದು.

ಅಲ್ಲದೆ, ಅಮೆರಿಕಕ್ಕೆ ಬರುವ ಬಹುತೇಕ ಮಂದಿಯ ಎಂಟ್ರಿ ಪಾಯಿಂಟ್‌ ಕೂಡ ಇದೇ ಆಗಿದೆ. ಹಾಗಾಗಿ, ವೈರಸ್‌ ಹೊತ್ತುಕೊಂಡು ಬಂದವರು ಯಾರೇ ಆಗಿದ್ದರೂ ಅವರು ಮೊದಲು ಈ ಪ್ರದೇಶದ ಜನರಿಗೆ ಸೋಂಕು ಹಬ್ಬಿಸಿಯೇ ಮುಂದೆ ಸಾಗಿರುತ್ತಾರೆ. ನ್ಯೂಯಾರ್ಕ್‌ ಅಮೆರಿಕದ ಕೋವಿಡ್ ಹಾಟ್‌ ಸ್ಪಾಟ್‌ ಆಗಿರುವುದು ಇದೇ ಕಾರಣಕ್ಕೆ.

ನಿರ್ಬಂಧದ ಬೆದರಿಕೆ: ಕೋವಿಡ್ 19 ಕಾಟಕ್ಕೆ ಜಗತ್ತಿಡೀ ಬೆಚ್ಚಿಬಿದ್ದಿರುವ ನಡುವೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಬೆದರಿಕೆ ತಂತ್ರವನ್ನು ಮುಂದುವರಿಸಿದ್ದಾರೆ. ಅಮೆರಿಕದಲ್ಲಿರುವ ತಮ್ಮ ನಾಗರಿಕರನ್ನು ವಾಪಸ್‌ ಸ್ವದೇಶಕ್ಕೆ ಕರೆದೊಯ್ಯದಂಥ ಹಾಗೂ ಕರೆದೊಯ್ಯಲು ಹಿಂದೇಟು ಹಾಕುತ್ತಿರುವ ದೇಶಗಳಿಗೆ ಹೊಸದಾಗಿ ವೀಸಾ ನಿರ್ಬಂಧ ಹೇರುವುದಾಗಿ ಟ್ರಂಪ್‌ ಶನಿವಾರ ಬೆದರಿಕೆಯೊಡ್ಡಿದ್ದಾರೆ.

ಬೇರೆ ಬೇರೆ ದೇಶದ ನಾಗರಿಕರು ಅಮೆರಿಕನ್ನರ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ. ಎಲ್ಲ ದೇಶಗಳೂ ಕೂಡಲೇ ತಮ್ಮ ತಮ್ಮ ನಾಗರಿಕರನ್ನು ವಾಪಸ್‌ ಕರೆದೊಯ್ಯಬೇಕು. ಇಲ್ಲವೆಂದಾದರೆ ತಕ್ಷಣಕ್ಕೇ ಅನ್ವಯವಾಗುವಂತೆ ಅಂಥ ಎಲ್ಲ ದೇಶಗಳಿಗೂ ವೀಸಾ ನಿರ್ಬಂಧ ಹೇರಲಾಗುತ್ತದೆ ಎಂದಿದ್ದಾರೆ ಟ್ರಂಪ್‌.

Advertisement

ಇಟಲಿ ಮೀರಿಸಿದ ಅಮೆರಿಕ
ಕೋವಿಡ್ ಹೊಡೆತದಿಂದ ಮೇಲಕ್ಕೇಳಲಾಗದೆ, ನರಳುತ್ತಿರುವ ಅಮೆರಿಕದಲ್ಲಿ 24 ಗಂಟೆಗಳ ಅವಧಿಯಲ್ಲಿ 2,108 ಮಂದಿ ಸಾವಿಗೀಡಾಗಿದ್ದಾರೆ. ಇದು ಜಗತ್ತನ್ನೇ ಆತಂಕಕ್ಕೆ ನೂಕಿದೆ. ಈ ಮೂಲಕ ಒಂದೇ ದಿನದಲ್ಲಿ ಇಷ್ಟೊಂದು ಪ್ರಮಾಣದ ಸಾವು ಸಂಭವಿಸಿರುವ ಜಗತ್ತಿನ ಮೊದಲ ದೇಶ ಎಂಬ ಅಪಖ್ಯಾತಿಗೂ ಅಮೆರಿಕ ಪಾತ್ರವಾಗಿದೆ.

ಜತೆಗೆ, ಸೋಂಕಿತರ ಸಂಖ್ಯೆಯೂ ಶನಿವಾರ 5 ಲಕ್ಷ ದಾಟಿದ್ದು, ಇದು ಕೂಡ ವಿಶ್ವದಲ್ಲೇ ಅತಿ ಹೆಚ್ಚು. ಅಮೆರಿಕದಲ್ಲಿ ಸಾವಿನ ಸಂಖ್ಯೆ 19,714 ಆಗುವ ಮೂಲಕ ಇಟಲಿಯನ್ನು ಹಿಂದಿಕ್ಕಿದೆ. ಇಟಲಿಯಲ್ಲಿ ಈವರೆಗೆ 18,848 ಮಂದಿ ಸಾವಿಗೀಡಾಗಿದ್ದಾರೆ.

ವೈರಸ್‌ ಮೊದಲು ಕಾಣಿಸಿಕೊಂಡ ಚೀನದಲ್ಲೇ ಸಾವಿನ ಸಂಖ್ಯೆ 3,339 ಹಾಗೂ ಸೋಂಕಿತರ ಸಂಖ್ಯೆ 81 ಸಾವಿರ ಆಗಿತ್ತು. ಸ್ಪೇನ್‌ (1,58,000), ಇಟಲಿ (1,47,000), ಜರ್ಮನಿ (1,22,000) ಮತ್ತು ಫ್ರಾನ್ಸ್‌ (1,12,000)ಗೆ ಹೋಲಿಸಿದರೆ, ಈ ನಾಲ್ಕೂ ದೇಶಗಳ ಒಟ್ಟು ಸೋಂಕಿತರಿಗಿಂತಲೂ ಹೆಚ್ಚು ಸೋಂಕಿತರು ಅಮೆರಿಕ ಒಂದರಲ್ಲೇ (5 ಲಕ್ಷಕ್ಕೂ ಹೆಚ್ಚು) ಇದ್ದಾರೆ. ಹೀಗಾಗಿ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಸರಕಾರಕ್ಕೆ ಸೋಂಕು ನಿಯಂತ್ರಣ ಅತ್ಯಂತ ಸವಾಲಿನದ್ದಾಗಿರಲಿದೆ.

ಸದ್ಯದಲ್ಲೇ ನಿರ್ಧಾರ
ಕೋವಿಡ್ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ದೇಶದ ಲಾಕ್‌ ಡೌನ್‌ ಅನ್ನು ಯಾವಾಗ ತೆರವುಗೊಳಿಸಬೇಕು ಎನ್ನುವುದೇ ನಾನು ಕೈಗೊಳ್ಳಬೇಕಾದ ಅತಿ ದೊಡ್ಡ ನಿರ್ಧಾರವಾಗಿದೆ.

ಇಂಥದ್ದೊಂದು ಕ್ಲಿಷ್ಟಕರ ಸನ್ನಿವೇಶವನ್ನು ಯಾವತ್ತೂ ಎದುರಿಸಿಲ್ಲ ಎಂದು ಶನಿವಾರ ಟ್ರಂಪ್‌ ಹೇಳಿದ್ದಾರೆ. ಕೋವಿಡ್ ಗೆ ಸಂಬಂಧಿಸಿದ ಶ್ವೇತಭವನದ ಕಾರ್ಯಪಡೆ ಹಾಗೂ ನನ್ನ ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಿ, ಲಾಕ್‌ ಡೌನ್‌ ಅನ್ನು ಯಾವಾಗ ತೆರವುಗೊಳಿಸಬೇಕು, ದೇಶದ ಆರ್ಥಿಕತೆಯನ್ನು ಮರಳಿ ಹಳಿಗೆ ಹೇಗೆ ತರಬೇಕು ಎಂಬ ಬಗ್ಗೆ ಆದಷ್ಟು ಬೇಗ ನಿರ್ಧಾರ ಕೈಗೊಳ್ಳುತ್ತೇನೆ ಎಂದೂ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಶ್ವಾದ್ಯಂತ 1.6 ಲಕ್ಷ ಮಂದಿ ಬಲಿ
ಮನುಕುಲವನ್ನೇ ತಲ್ಲಣಗೊಳಿಸಿರುವ ಕೋವಿಡ್ ವೈರಸ್‌ ಜಗತ್ತಿನಾದ್ಯಂತ 1,06,532 ಮಂದಿಯನ್ನು ಬಲಿಪಡೆದುಕೊಂಡಿದೆ. 193 ದೇಶಗಳ ಒಂದು ಲಕ್ಷಕ್ಕೂ ಅಧಿಕ ಮಂದಿ ಪ್ರಾಣತೆತ್ತಿದ್ದು, 17,35,554 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಪೈಕಿ ಕನಿಷ್ಠ 3.41 ಲಕ್ಷ ಮಂದಿ ಗುಣಮುಖರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಬಹುತೇಕ ದೇಶಗಳು ಕೇವಲ ಗಂಭೀರ ಪ್ರಕರಣಗಳನ್ನಷ್ಟೇ ಪರೀಕ್ಷೆಗೆ ಒಳಪಡಿಸಿದ್ದು, ಈ ಸಂಖ್ಯೆ ಹೆಚ್ಚಳವಾದರೆ ಸೋಂಕಿತರ ಸಂಖ್ಯೆಯಲ್ಲೂ ಏರಿಕೆಯಾಗಬಹುದು ಎಂದು ಡಬ್ಲ್ಯೂಚ್‌ಒ ಅಭಿಪ್ರಾಯಪಟ್ಟಿದೆ. ಸಾವಿನ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಇಟಲಿಯಲ್ಲಿ ಈವರೆಗೆ ಕೋವಿಡ್ ಗೆ 18,848 ಮಂದಿ ಬಲಿಯಾದರೆ, ಸೋಂಕಿತರ ಸಂಖ್ಯೆ 1.47 ಲಕ್ಷ ಕ್ಕೇರಿದೆ.

ಮೊದಲನೇ ಸ್ಥಾನದಲ್ಲಿರುವ ಅಮೆರಿಕದಲ್ಲಿ 19,714 ಮಂದಿ ಪ್ರಾಣ ಕಳೆದುಕೊಂಡಿದ್ದು, ಇಲ್ಲಿ 5.10 ಲಕ್ಷ ಸೋಂಕಿತರಿದ್ದಾರೆ. ಸ್ಪೇನ್‌ ನಲ್ಲಿ 24 ಗಂಟೆಗಳ ಅವಧಿಯಲ್ಲಿ 510 ಮಂದಿ ಸಾವಿಗೀಡಾಗಿದ್ದಾರೆ. ಇಲ್ಲಿ ಸಾವಿನ ಸಂಖ್ಯೆ 16,353, ಫ್ರಾನ್ಸ್‌ನಲ್ಲಿ 13,197, ಬ್ರಿಟನ್‌ನಲ್ಲಿ 10 ಸಾವಿರ ಮಂದಿ ಮೃತಪಟ್ಟಿದ್ದಾರೆ.

ಇದೇ ವೇಳೆ, ಇರಾನ್‌ ನಲ್ಲಿ ಒಂದೇ ದಿನ 125 ಸಾವು ಸಂಭವಿಸಿದ್ದು, ಒಟ್ಟಾರೆ ಸಾವಿನ ಸಂಖ್ಯೆ 4,357 ಆಗಿದೆ. ಅಲ್ಪಕಾಲದ ಲಾಕ್‌ ಡೌನ್‌ ಅನ್ನು ಕಂಡಿದ್ದ ಇರಾನ್‌ ನಲ್ಲಿ ಶನಿವಾರದಿಂದ ಸರ್ಕಾರಿ ಕಚೇರಿಗಳು ಪುನಾರಂಭಗೊಂಡಿವೆ.

ಭಾರತಕ್ಕೆ ಲಾಕ್‌ಡೌನ್‌, ಸಾಮಾಜಿಕ ಅಂತರವೇ ‘ಲಸಿಕೆ’
ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೋವಿಡ್ ಸೋಂಕು ಹರಡುವಿಕೆ ತಡೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಲಾಕ್‌ಡೌನ್‌ ಜಾರಿ ‘ಸಾಮಾಜಿಕ ಲಸಿಕೆ’ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ತಿಳಿಸಿದ್ದಾರೆ.

‘ದಿ ವೀಕ್‌’ಗೆ ಸಂದರ್ಶನ ನೀಡಿರುವ ಅವರು, ಏ.8ರವರೆಗೆ ದೇಶದಲ್ಲಿ 1.4 ಲಕ್ಷ ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಇದೀಗ ದಿನಕ್ಕೆ 20 ಸಾವಿರ ಜನರನ್ನು ಪರೀಕ್ಷಿಸುವ ಸಾಮರ್ಥ್ಯ ಹೊಂದಲಾಗಿದೆ. ಭಾರತದಲ್ಲಿ ಕಂಡು ಬಂದಿರುವ ಸೋಂಕಿತರ ಪೈಕಿ ಶೇ. 80 ಮಂದಿಗೆ ಸಣ್ಣ ಪ್ರಮಾಣದ ಲಕ್ಷಣಗಳು ಇವೆ.

ಶೇ.15 ಮಂದಿಗೆ ಆಕ್ಸಿಜನ್‌ ಚಿಕಿತ್ಸೆ ಅಗತ್ಯವಿದೆ. ಶೇ.5ರಷ್ಟು ಮಂದಿಗೆ ವೆಂಟಿಲೇಟರ್‌ ಅಳವಡಿಸಲಾಗಿದೆ.17 ರಾಜ್ಯಗಳ 71 ಜಿಲ್ಲೆಗಳಲ್ಲಿ ಶೇ.80 ರಷ್ಟು ಸೋಂಕು ಇದೆ. ಈ ಜಿಲ್ಲೆಗಳಲ್ಲಿ ಸೋಂಕು ತಡೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next