Advertisement
ಕನಸುಗಳ ಕನವರಿಕೆಗಳನ್ನು ನನಸು ಮಾಡಲಿರುವ “ಭರವಸೆ’ ಎಂಬ ಹೊಸ ವರ್ಷವನ್ನು ಅತ್ಯಂತ ಸಡಗರದಿಂದ ಬರಮಾಡಿಕೊಂಡಿತು. ಉತ್ಸಾಹದ ಕಿಚ್ಚು ಹಚ್ಚುವ ಯುವಸಮುದಾಯದ ಸಂಗೀತ, ನೃತ್ಯಗಳು ನಗರವನ್ನು ಮನರಂಜನೆಯ ಅಲೆಯಲ್ಲಿ ತೇಲುವಂತೆ ಮಾಡಿದವು. ಅದರಲ್ಲೂ ವಿಶಿಷ್ಟವಾಗಿ ಬ್ರಿಗೇಡ್ ರಸ್ತೆ ನವವಧುವಿನಂತೆ ಸಿಂಗಾರಗೊಂಡಿತ್ತು. ಈ ಸಂಭ್ರಮಕ್ಕಾಗಿ ಹೊಸ ವರ್ಷದ ಭರ್ಜರಿ ಸ್ವಾಗತಕ್ಕೆ ಕಳೆದೆರಡು ದಿನಗಳಿಂದಲೇ ಬ್ರಿಗೇಡ್ ರಸ್ತೆ ಮತ್ತು ಎಂ.ಜಿ. ರಸ್ತೆಯಲ್ಲಿ ವೇದಿಕೆ ಸಿದ್ಧಗೊಂಡಿತ್ತು. ಝಗಮಗಿಸುವ ದೀಪಾಲಂಕಾರ, ಎದೆ ನಡುಗಿಸುವ ಸಂಗೀತದ ಅಲೆಗಳಿಂದಾಗಿ ಈ ಎರಡೂ ರಸ್ತೆಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದವು. ಅತ್ತ ಸೂರ್ಯ ಅಸ್ತಂಗತವಾಗುತ್ತಿದ್ದಂತೆ “ಹೊಸ ವರ್ಷದ ವೇದಿಕೆ’ಯತ್ತ ಯುವಸಮೂಹ ಉತ್ಸಾಹದಿಂದ ತಂಡೋಪತಂಡವಾಗಿ ಹೆಜ್ಜೆಹಾಕಿತು. ರಾತ್ರಿ 10ರಿಂದಲೇ ನಗರದ ಮೂಲೆ, ಮೂಲೆಯಲ್ಲಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಅಲ್ಲಿ ಜಮಾವಣೆಗೊಳ್ಳುತ್ತಿದ್ದರು. ಗಡಿಯಾರದ ಮುಳ್ಳುಗಳು 12ರ ಕಡೆಗೆ ಮುಖಮಾಡುತ್ತಿದ್ದಂತೆ ನೆರೆದವರೆಲ್ಲಾ ಹುಚ್ಚೆದ್ದು ಕುಣಿದರು. ಪರಸ್ಪರ ಕೈ-ಕುಲುಕಿ ಅಪ್ಪುಗೆ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ಇದಕ್ಕೆ ಅಪರಿಚಿತರೂ ಹೊರತಾಗಿರಲಿಲ್ಲ. ಎದುರಾದವರನ್ನೆಲ್ಲಾ ಅಪ್ಪಿಕೊಂಡು “ಹ್ಯಾಪಿ ನ್ಯೂ ಇಯರ್’ ಎಂದು ಶುಭ ಕೋರುವುದು ಸಾಮಾನ್ಯವಾಗಿತ್ತು. ನಗರದ ವಿವಿಧೆಡೆ ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಯುವಮನಸ್ಸುಗಳು ರಸ್ತೆಗಿಳಿದು ಪಟಾಕಿ ಸಿಡಿಸಿ, ಹಳೆಯ ವರ್ಷಕ್ಕೆ ವಿದಾಯ ಹೇಳಿದರು. “ಹಾಟ್‌ಸ್ಪಾಟ್’ನಲ್ಲಿಯ ಈ ಪರಿಯ ಭರ್ಜರಿ ಸ್ವಾಗತಕ್ಕೆ ಚಳಿ ಕೂಡ ಕೆಲಹೊತ್ತು ನಡುಗಿ ಹಿಂದೆಸರಿಯಿತು.
Related Articles
Advertisement
ಪೊಲೀಸರ ಹರಸಾಹಸಹೊಸ ವರ್ಷಚಾರಣೆಗೆ ಒಮ್ಮೆಲೆ ಜನ ಎಂ.ಜಿ. ರಸ್ತೆಯತ್ತ ಧಾವಿಸಿದ್ದರಿಂದ ಸುತ್ತಮುತ್ತ ವಾಹನದಟ್ಟಣೆ ಹೆಚ್ಚಾಗಿತ್ತು. ನೂಕುನುಗ್ಗಲು ಉಂಟಾಗಿ, ಗುಂಪು ಚದುರಿಸಲು ಪೊಲೀಸರು ಲಾಠಿ ಚದುರಿಸಿದರು. ಸಾಮಾನ್ಯವಾಗಿ ಡಿ. 31ರ ರಾತ್ರಿ 8ಕ್ಕೇ ಎಂ.ಜಿ. ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗುತ್ತದೆ. ಆದರೆ, ಈ ಬಾರಿ 11ರವರೆಗೂ ವಾಹನ ಸಂಚಾರಕ್ಕೆ ಅವಕಾಶ ಇದ್ದುದರಿಂದ ಎಂದಿಗಿಂತ ವಿಪರೀತ ಸಂಚಾರದಟ್ಟಣೆ ಉಂಟಾಗಿತ್ತು. ಎಂ.ಜಿ. ರಸ್ತೆ, ಹಲಸೂರು ಮುಖ್ಯರಸ್ತೆ, ಡಿಕೆನ್ಸನ್, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ರಿಚ್‌ಮಂಡ್ ರಸ್ತೆ, ಕಸ್ತೂರಬಾ ರಸ್ತೆ, ಕಬ್ಬನ್ ಪಾರ್ಕ್ ರಸ್ತೆಗಳಲ್ಲೆಲ್ಲಾ ಜನ ಹೆಜ್ಜೆ-ಹೆಜ್ಜೆಗೂ ಪರದಾಡಿದರು. ನೃತ್ಯದ ನಡುವೆ ಕುಸಿದು ಬಿದ್ದ ಯುವಕ ಅಸ್ವಸ್ಥ ಹೊಸ ವರ್ಷದ ಸಂಭ್ರಮದಲ್ಲಿ ನೃತ್ಯ ಮಾಡುತ್ತಿದ್ದಾಗ ಶಿವಮೊಗ್ಗ ಮೂಲದ ನಿಶಾಂತ್ (28) ಕುಸಿದುಬಿದ್ದು ಅಸ್ವಸ್ಥಗೊಂಡ ಘಟನೆ ಬ್ರಿಗೇಡ್ ರಸ್ತೆಯಲ್ಲಿ ನಡೆದಿದೆ. ಅಸ್ವಸ್ಥಗೊಂಡ ನಿಶಾಂತ್‌ನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಆತನೇ ಏಕಾಏಕಿ ಕುಸಿದು ಬಿದ್ದಿದ್ದಾನೋ ಅಥವಾ ಯಾರಾದರೂ ಹಲ್ಲೆ ನಡೆಸಿದ್ದಾರೋ ಅನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಸಂದೀಪ ಪಾಟೀಲ್ ತಿಳಿಸಿದ್ದಾರೆ. ಸಂಭ್ರಮದ ನಡುವೆ ಕನ್ನಡ ಪಾಠ! ಬ್ರಿಗೇಡ್ ರಸ್ತೆಯಲ್ಲಿ ಸೇರಿದ್ದ ಇಡೀ ಸಮುದಾಯ ಮನರಂಜನೆಯ ಅಮಲಿನಲ್ಲಿತ್ತು. ಆ ಭರಾಟೆಯ ನಡುವೆ ತಮಿಳು ಮೂಲದ ವ್ಯಕ್ತಿಯಿಂದ “ಕನ್ನಡ ಪಾಠ’ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಇಂಟೀರಿಯರ್ ಡಿಸೈನರ್ ಮತ್ತು ಸಿಸಿಟಿವಿ ಅಳವಡಿಕೆ ಕೆಲಸ ಮಾಡುವ ಶಕ್ತಿವೇಲು ಅವರು, ಬ್ರಿಗೇಡ್ ರಸ್ತೆಯಲ್ಲಿ ನೆರೆದ ಜನರಿಗೆ “ಹೊಸ ವರ್ಷಕ್ಕಾದ್ರೂ ಬದಲಾಗಿ, ಕನ್ನಡಿಗರು ಕನ್ನಡ ಮಾತಾಡಿ’ ಎಂದು ಕನ್ನಡಿಗರಿಗೆ ಅರಿವು ಮೂಡಿಸುವ ಕೆಲಸ ಮಾಡಿದರೆ, “ಕಲಿಯೋಕೆ ಕೋಟಿ ಭಾಷೆ, ಹಾಡೋಕೆ ಒಂದೇ ಭಾಷೆ ಕನ್ನಡ…’ ಎಂದು ಅಲ್ಲಿ ಬಂದಿದ್ದ ಉತ್ತರ ಭಾರತದ ಮೂಲನಿವಾಸಿಗಳು, ಟೆಕ್ಕಿಗಳಿಗೆ ತಿಳಿಹೇಳುವ ಕೆಲಸವನ್ನೂ ಮಾಡಿದರು.ಕನ್ನಡ ಧ್ವಜವನ್ನು ಹೋಲುವ ಫಲಕಗಳ ಮೇಲೆ ಕನ್ನಡ ಕಲಿಕೆಯ ಮಹತ್ವವನ್ನು ಸಾರುತ್ತಿರುವುದು ಕಂಡುಬಂತು. ಸಂಗೀತ-ಕುಣಿತದ ನಡುವೆ ಕೆಲವರು ಇದರ ಮೇಲೆ ಕಣ್ಣಾಡಿಸುವ ಪ್ರಯತ್ನವನ್ನೂ ಮಾಡಿದರು.