ಬೆಂಗಳೂರು: ಹೊಸ ವರ್ಷಾಚರಣೆಯಿಂದ ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ಹಾಗೂ ಚರ್ಚ್‌ಸ್ಟ್ರೀಟ್‌ನಲ್ಲಿ ಬರೋಬ್ಬರಿ 10 ಟನ್ ಕಸ ಉತ್ಪತ್ತಿಯಾಗಿದ್ದು, ಬಿಬಿಎಂಪಿಯ ಪೌರಕಾರ್ಮಿಕರು ಬೆಳಗ್ಗೆ 3 ಗಂಟೆಗೇ ಈ ರಸ್ತೆಗಳ ಸ್ವಚ್ಛತಾ ಕಾರ್ಯ ಆರಂಭಿಸಿ, ಕಸ ಸಂಗ್ರಹಿಸಿ ವಿಲೇವಾರಿ ಮಾಡಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ಲಕ್ಷಾಂತರ ಮಂದಿ ಸೇರಿ ಸಾಮೂಹಿಕವಾಗಿ ಹೊಸ ವರ್ಷ ಆಚರಿಸಿದ್ದು, ಈ ವೇಳೆ ಪ್ಲಾಸ್ಟಿಕ್ ಕವರ್, ಮದ್ಯ, ನೀರಿನ ಬಾಟಲಿ ಸೇರಿ ವಿವಿಧ ತ್ಯಾಜ್ಯವನ್ನು ರಸ್ತೆಗಳ್ಲಲೇ ಬಿಸಾಡಿದ್ದು, ಪೌರಕಾರ್ಮಿಕರು ರಸ್ತೆಗಳನ್ನು ಸ್ವಚ್ಛ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಸ ಹುಡುಕುವ ಸ್ಪರ್ಧೆ: ಹೊಸ ವರ್ಷ ನಡೆದ ಸ್ಥಳ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಬಿಬಿಎಂಪಿ ಹಾಗೂ ದಿ ಅಗ್ಲಿ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಬುಧವಾರ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ ಹಾಗೂ ಚರ್ಚ್‌ಸ್ಟ್ರೀಟ್‌ನ ಮೂರು ಕಿ.ಮೀ ಅಂತರದಲ್ಲಿ ಕಸ ಹುಡುಕುವ ಸ್ಪರ್ಧೆ ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ ಸುಮಾರು 40 ಮಂದಿ ಭಾಗವಹಿಸಿದರು. ಈ ಎಲ್ಲ ರಸ್ತೆಗಳನ್ನು ಸುತ್ತಿ ಕಸ ಸಂಗ್ರಹಿಸಲಾಗಿದೆ. ಪಾದಚಾರಿಗಳು ರಸ್ತೆಯಲ್ಲಿ ಬಿಸಾಡಲಾಗಿದ್ದ ಸುಮಾರು 8 ಕೆ.ಜಿ. ತ್ಯಾಜ್ಯ ಸಂಗ್ರಹವಾಗಿದ್ದು, ಹೆಚ್ಚು ತ್ಯಾಜ್ಯ ಹುಡುಕಿದ ಐದು ಸ್ಪರ್ಧಿಗಳಿಗೆ ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್ ಬಹುಮಾನ ವಿತರಿಸಿದರು.
ಸ್ಪರ್ಧೆ ನಂತರ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್, ನಗರದ ಪ್ರಮುಖ ರಸ್ತೆಗಳಲ್ಲಿದ್ದ ತ್ಯಾಜ್ಯವನ್ನು ಪೌರಕಾರ್ಮಿಕರ ತಂಡ ಮುಂಜಾನೆ 3 ಗಂಟೆಗೆ ಬಂದು ಸಂಗ್ರಹಿಸಿ, ಕಾಂಪ್ಯಾಕ್ಟರ್ ಮೂಲಕ ವಿಲೇವಾರಿ ಮಾಡಿದೆ.
ದಿ ಅಗ್ಲಿ ಇಂಡಿಯನ್ ಸಂಸ್ಥೆ ಏರ್ಪಡಿಸಿದ್ದ ಕಸ ಹುಡುಕುವ ಸ್ಪರ್ಧೆಗೆ ಪಾಲಿಕೆಯಿಂದ ಹಣ ಖರ್ಚು ಮಾಡಿಲ್ಲ. ಸಂಸ್ಥೆಯೇ ಬಹುಮಾನ ವಿತರಿಸಿದೆ. ಸಾರ್ವಜನಿಕರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವ ಬದಲು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಮನವಿ ಮಾಡಿದರು.