Advertisement

ಹೊಸ ವರ್ಷದ ಸ್ಮಾರ್ಟ್‌ ಬಿಂಬ

11:17 PM Dec 30, 2022 | Team Udayavani |

2022 ಅನ್ನು ಮುಗಿಸಿ, ಇನ್ನೇನು ನಾಳೆ, 2023ಕ್ಕೆ ಕಾಲಿಡಲಿದ್ದೇವೆ. 2020 ಮತ್ತು 2021ರ ಕರಾಳ ಕೊರೊನಾ ಕಬಂಧಬಾಹುವಿನಲ್ಲಿ ನರಳಿದ್ದ ನಮಗೆ, 2022 ಅಷ್ಟೇನೂ ಕಾಟ ಕೊಡಲಿಲ್ಲ. ಈ ವರ್ಷಾಂತ್ಯಕ್ಕೆ ಮತ್ತೆ ಕೊರೊನಾ ಭೀತಿ ಕಾಡಿದೆಯಾದರೂ ಭಾರತಕ್ಕೆ ಅಷ್ಟೇನೂ ಬಾಧೆ ತಟ್ಟದು ಎಂದೇ ತಜ್ಞರು ಹೇಳುತ್ತಿದ್ದಾರೆ. ಇದರ ನಡುವೆಯೇ ಹೊಸ ವರ್ಷದಲ್ಲಿ ಆರ್ಥಿಕ ಪರ್ವ ಹೇಗಿರಲಿದೆ? ಹೊಸದಾಗಿ ಯಾವುದಾದರೂ ಪ್ರಾಡಕ್ಟ್ ಗಳು ಬರಲಿವೆಯೇ? ಈ ಕುರಿತ ಒಂದು  ಮುನ್ನೋಟ ಇಲ್ಲಿದೆ…

Advertisement

ಉಳಿತಾಯದ ವರ್ಷ

ಹೌದು, 2023 ಕೂಡ ಉಳಿತಾಯಕ್ಕೆ ಉತ್ತಮ ವರ್ಷವೇ. ಏಕೆಂದರೆ ಜಗತ್ತಿನ ಬಹುತೇಕ ಎಲ್ಲ ದೇಶಗಳು ಹಣದುಬ್ಬರ ಇಳಿಸುವುದಕ್ಕಾಗಿ ಕೇಂದ್ರ ಬ್ಯಾಂಕ್‌ಗಳ ರೆಪೋ ದರ ಅಥವಾ ಬಡ್ಡಿದರ ಹೆಚ್ಚಳ ಮಾಡುತ್ತವೆ. ಆರ್‌ಬಿಐ ಕೂಡ ಬಡ್ಡಿ ದರ ಹೆಚ್ಚಿಸುತ್ತದೆ. ಎಲ್ಲ ರೀತಿಯ ಉಳಿತಾಯ ಠೇವಣಿಗಳ ಬಡ್ಡಿದರವೂ ಹೆಚ್ಚಾಗುತ್ತದೆ. ಹೀಗಾಗಿ ಉಳಿತಾಯಕ್ಕೆ ಹೆಚ್ಚು ಗಮನಹರಿಸಬಹುದು. ಆಗ ಹೆಚ್ಚು ರಿಟರ್ನ್ ಬರುತ್ತದೆ.  ಆದರೆ ಯಾವುದರ ಮೇಲೆ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಹಣ ಕಾಸು ತಜ್ಞರ ಸಲಹೆ ಪಡೆಯುವುದು ಒಳಿತು. ಆದರೆ ಬೇಕಾಬಿಟ್ಟಿಯಾಗಿ ಹೂಡಿಕೆ ಮಾಡಲು ಹೋಗಬಾರದು.

ಬಂಗಾರ ಗಟ್ಟಿ

2022ರ ಆರಂಭದಲ್ಲಿ ಕ್ರಿಪ್ಟೋಕರೆನ್ಸಿ ಆರ್ಭಟ ಹೆಚ್ಚಾಗಿತ್ತು. ಆಗಲೇ ಆರ್‌ ಬಿಐ ತನ್ನದೇ ಆದ ಒಂದು ಡಿಜಿಟಲ್‌ ಕರೆನ್ಸಿಯನ್ನು ತರಲು ಚಿಂತನೆ ಮಾಡಿತು. ವಿಚಿತ್ರವೆಂದರೆ ಆರಂಭದಲ್ಲಿ ಇದ್ದ ಕ್ರಿಪ್ಟೋ ಆರ್ಭಟ ಅನಂತರದ ದಿನಗಳಲ್ಲಿ ಕುಸಿಯುತ್ತಾ ಹೋಯಿತು. ಆದರೆ ಈ ವರ್ಷಾರಂಭದಲ್ಲಿ ಬಂಗಾರಕ್ಕೆ ಬೇಡಿಕೆಯೂ ಕಡಿಮೆ ಇತ್ತು. ಅನಂತರದಲ್ಲಿ ಹೆಚ್ಚಾದರೂ ಅಷ್ಟೇನೂ ಪ್ರಭಾವ ಬೀರಲಿಲ್ಲ. 2023ರಲ್ಲಿ ಬಂಗಾರಕ್ಕೆ ಹೆಚ್ಚಿನ ಬೆಲೆ ಬರಲಿದೆ ಎಂಬುದು ಮಾರುಕಟ್ಟೆ ತಜ್ಞರ ಮಾತುಗಳು. ಬಂಗಾರದ ಮೇಲಿನ ಹೂಡಿಕೆಗೂ ಉತ್ತಮ ದಿನಗಳು ಬರಬಹುದು ಎಂದು ಹೇಳುತ್ತಿದ್ದಾರೆ.

Advertisement

ಸಖತ್‌ ಷೇರುಪೇಟೆ

2022ರಲ್ಲಿ ಏರಿಳಿತಗಳ ನಡುವೆಯೂ ಷೇರುಪೇಟೆ ತನ್ನ ಮೌಲ್ಯ ಕಳೆದುಕೊಳ್ಳಲಿಲ್ಲ. ಇದಕ್ಕೆ ಭಾರತದಲ್ಲಿನ ಕಂಪೆನಿಗಳ ಸ್ಥಿರತೆಯೂ ಕಾರಣ. ಹೀಗಾಗಿ 2023ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಆತಂಕದ ನಡುವೆಯೂ ಭಾರತದ ಕಂಪೆನಿಗಳ ಸಾಧನೆ ಚೆನ್ನಾಗಿಯೇ ಇರುತ್ತದೆ. ಹೀಗಾಗಿ ಷೇರುಮಾರುಕಟ್ಟೆಯಲ್ಲಿನ ಹೂಡಿಕೆಯೂ ಉತ್ತಮವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಅಂದರೆ 2023 ರಲ್ಲಿ ಶೇ.5ರಿಂದ 6ರಷ್ಟು ಏರಿಕೆಯಾಗಬಹುದು.

ಮ್ಯೂಚುವಲ್‌ ಅಂಡರ್‌ ಸ್ಟಾಂಡಿಂಗ್‌

ಮ್ಯೂಚುವಲ್‌ ಫ‌ಂಡ್‌ ಗಳ ಮೇಲಿನ ಹೂಡಿಕೆ ಒಂದು ರೀತಿ ಅದೃಷ್ಟದ ಮೇಲಿನ ನಡಿಗೆ ಎಂಬ ಮಾತುಗಳಿವೆ. ಇದಕ್ಕೆ ಕಾರಣ ಇವುಗಳ ಮೌಲ್ಯ ಷೇರುಪೇಟೆಯ ಏರಿಳಿತದ ಮೇಲೆ ತೀರ್ಮಾನವಾಗುವುದು. ಆದರೆ 2022ರಲ್ಲಿ ಮ್ಯೂಚುವಲ್‌ ಫ‌ಂಡ್‌ ಗಳು ತಮ್ಮ ಮೌಲ್ಯ ಉಳಿಸಿಕೊಂಡಿದ್ದು ಹೂಡಿಕೆದಾರರಿಗೆ ಉತ್ತಮ ಆದಾಯ ತಂದುಕೊಟ್ಟಿವೆ. ಇದೇ ರೀತಿಯ ಆದಾಯ 2023ರಲ್ಲಿಯೂ ಕಾಣಬಹುದು ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.

ಜೇಮ್ಸ್‌  “ಬಾಂಡ್‌’ ಗಳಾಗಿ

ಉಳಿತಾಯ ಯೋಜನೆಗಳಿಗೆ ನಾನಾ ದಾರಿ. ನಿಶ್ಚಿತ ಠೇವಣಿ, ಮ್ಯೂಚುವಲ್‌ ಫ‌ಂಡ್‌ ಗಳ ಹೂಡಿಕೆ ಮಾಡುವಂಥವರು ಸರ‌ಕಾರದ ಬಾಂಡ್‌ ಗಳತ್ತಲೂ ಕಣ್ಣು ಹಾಯಿಸಬಹುದು. 10 ವರ್ಷಗಳ ದೀರ್ಘ‌ಕಾಲದ ಬಾಂಡ್‌ ಗಳ ಮೇಲೆ ಹೂಡಿಕೆ ಮಾಡುವುದರಿಂದ ಹೆಚ್ಚು ಲಾಭವೂ ಬರಲಿದೆ. ಬಜೆಟ್‌ವರೆಗೆ ಕಾದರೆ ಹೆಚ್ಚು ಲಾಭ.

ವ್ಯಾಪಾರ ಉದ್ಯಮ ಕ್ಷೇತ್ರದಲ್ಲಿ ಏನಾಗಬಹುದು?

ಗೌತಮ್‌ ಅದಾನಿ

ಜಗತ್ತಿನ 4ನೇ ಶ್ರೀಮಂತ ಎಂಬ ಪಟ್ಟ ಮುಟ್ಟಿ ಬಂದಿರುವ ಭಾರತದ ಸಿರಿವಂತ ಉದ್ಯಮಿ ಗೌತಮ್‌ ಅದಾನಿ ಅವರ ಮನಸ್ಸಿನಲ್ಲಿ 2023ರ ಪ್ಲ್ರಾನ್‌ ಏನಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. 2022 ರಲ್ಲಿ ಅವರು ಅಂಬುಜಾ ಮತ್ತು ಎಸಿಸಿ ಸಿಮೆಂಟ್‌,ಎನ್‌ ಡಿಟಿವಿ ಖರೀದಿಸಿದ್ದಾರೆ. ಹೀಗಾಗಿ 2023ರಲ್ಲಿಯೂ ತಮ್ಮ ವಹಿವಾಟು ಹೆಚ್ಚಿಸಿಕೊಳ್ಳಲಿದ್ದಾರೆ.

ಮುಕೇಶ್‌ ಅಂಬಾನಿ

ತಮ್ಮ ಮೂವರು ಮಕ್ಕಳಿಗೆ ಕಂಪೆನಿಗಳನ್ನು ಹಂಚಿಕೆ ಮಾಡಲು ಹೊರಟಿರುವ ಮುಕೇಶ್‌ ಅಂಬಾನಿ ಅವರು, ಷೇರುಪೇಟೆಯಲ್ಲಿ ಇನ್ನಷ್ಟು ಐಪಿಒಗಳನ್ನು ಬಿಡುವ ಸಾಧ್ಯತೆ ಇದೆ. ಸದ್ಯ ಟೆಲಿಕಾಂ, ರಿಟೇಲ್‌ ಮತ್ತು ಗ್ರೀನ್‌ ಎನರ್ಜಿ ಕಂಪೆನಿಗಳನ್ನು ತಮ್ಮ 3 ಮಕ್ಕಳಿಗೆ ಹಂಚಲು ಮುಂದಾಗಿದ್ದಾರೆ. ಇದರ ನಡುವೆಯೇ ಜಿಯೋ ಮತ್ತು ರಿಲಯನ್ಸ್‌ ರಿಟೇಲ್‌ ಕಂಪೆನಿ ಯ ಐಪಿಒಗೂ ಸಜ್ಜಾಗುತ್ತಿದ್ದಾರೆ. ಇದು ಷೇರುಮಾರುಕಟ್ಟೆಗೆ ಶುಭ ಸುದ್ದಿ ಎಂದೇ ಹೇಳಬಹುದು.

ಎನ್‌. ಚಂದ್ರಶೇಖರನ್‌

ಸದ್ಯ ಟಾಟಾ ಗ್ರೂಪ್‌ನ ಸಿಇಒ ಚಂದ್ರಶೇಖರನ್‌ ಅವರು ಮೊಬೈಲ್‌ ಫೋನ್‌ ಗಳ ತಯಾರಿಕೆ ಮತ್ತು ಅವುಗಳ ಚಿಪ್‌ ಗಳ ತಯಾರಿಕೆ ಮೇಲೆ ಕಣ್ಣು ಹಾಕಿದೆ. ಈಗಾಗಲೇ ಭಾರತದಲ್ಲಿ ಐಫೋನ್‌ ತಯಾರಿಕೆಗಾಗಿ ಆ್ಯಪಲ್‌ ಕಂಪೆನಿ ಜತೆ ಹೊಂದಾಣಿಕೆ ಮಾಡಿಕೊಂಡಿದೆ. 2023ರಲ್ಲಿಯೂ ಇಂಥದ್ದೇ ಹೆಚ್ಚಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅಂದರೆ ಎಲ್ಲರ ಕಣ್ಣು ಗಳು ಟಾಟಾ ಕಂಪೆನಿಯ ಚಿಪ್‌ ಅಸೆಂಬ್ಲಿ ಮತ್ತು ಟೆಸ್ಟ್‌ ಸರ್ವೀ ಸಸ್‌ ಮೇಲೆ ಬಿದ್ದಿದೆ.

ತಂತ್ರಜ್ಞಾನದ ಟ್ರೆಂಡ್‌

ಡ್ರೋನ್‌

ಕೊರೊನಾ ಅನಂತರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಸಂಬಂಧಿತ ಆವಿಷ್ಕಾರಗಳಾದವು. ಅದರಲ್ಲಿ ಡ್ರೋನ್‌ ಕೂಡ ಒಂದು. ಸದ್ಯ ಸೇನೆಯಲ್ಲೂ ಡ್ರೋನ್‌ನ ನೆರವು ಪಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಡ್ರೋನ್‌ ದಿನನಿತ್ಯದ ಆಗುಹೋಗುಗಳಿಗೆ ನೆರವಾಗಬಲ್ಲ ಸ್ಥಿತಿಯೂ ಎದುರಾಗಬಹುದು. ಸದ್ಯ ಡ್ರೋನ್‌ ಉದ್ಯಮ 80 ಕೋಟಿ ರೂ.ಗಳಷ್ಟೇ ಇದೆ. 2026ರ ವೇಳೆಗೆ ಇದು 12ರಿಂದ 15 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಳವಾಗಬಹುದು ಎಂಬ ನಿರೀಕ್ಷೆ ಇದೆ.

ಎಲ್ಲ ಕಡೆ ಎಐ

ಈಗಾಗಲೇ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ನ ಆರ್ಭಟ ಕಾಣಿಸುತ್ತಿದೆ. ಇದು 2023ರಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯ ಕ್ಷೇತ್ರವನ್ನು ಒಳಗೊಂಡಂತೆ ಬಹುತೇಕ ಕಡೆಗಳಲ್ಲಿ ಎಐ ಆಧರಿತ ಸ್ವಯಂ ಚಾಲಿತ ಕ್ರಿಯೆಗಳಾಗಲಿವೆ. ಸ್ವಯಂ ಚಾಲಿತ ಕಾರುಗಳು ಹೆಚ್ಚು ಬರಲಿವೆ.

ರೋಬೋಗಳ ಜಮಾನ

ಮಾನವನಂತೆಯೇ ಕಾಣುವ ರೋಬೋಟ್‌ಗಳ ದರ್ಬಾರ್‌ ಹೆಚ್ಚಾಗುವ ಸಾಧ್ಯತೆ ಇದೆ. ಬಾರ್‌ ಗಳಲ್ಲಿ ಸರ್ವರ್‌ ಗಳಾಗಿ, ಸ್ವಾಗತಕಾರಿಣಿಗಳಾಗಿ, ಕಂಪೆನಿಗಳಲ್ಲಿ ಸಹೋದ್ಯೋಗಿಗಳಾಗಿ ಇರುವ ರೋಬೋಗಳೂ ಬರಬಹುದು.

Advertisement

Udayavani is now on Telegram. Click here to join our channel and stay updated with the latest news.

Next