ಪಣಜಿ: ಹೊಸ ವರ್ಷವನ್ನು ಸ್ವಾಗತಿಸಲು ದೇಶ-ವಿದೇಶಗಳಿಂದ ಪ್ರವಾಸಿಗರು ರಾಜ್ಯಕ್ಕೆ ಆಗಮಿಸಿದ್ದು, ನಟರು, ಉದ್ಯಮಿಗಳು, ರಾಜಕಾರಣಿಗಳು ಹೀಗೆ ವಿವಿಧ ಕ್ಷೇತ್ರಗಳ ಗಣ್ಯರು ಅಪಾರ ಸಂಖ್ಯೆಯಲ್ಲಿ ಗೋವಾಕ್ಕೆ ಆಗಮಿಸಿದ್ದಾರೆ. ಹಾಗಾಗಿ ಪ್ರವಾಸಿಗರಿಂದ ಗೋವಾ ಹೌಸ್ ಫುಲ್ ಆಗಿದೆ.
ನೆರೆಯ ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರ ವಾಹನಗಳು ಗೋವಾ ಪ್ರವೇಶಿಸಿವೆ. ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷ ಸ್ವಾಗತಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಗೋವಾಕ್ಕೆ ಆಗಮಿಸಿದ್ದು ಜನಜಂಗುಳಿ ಕಂಡು ಬಂದಿದೆ.
ಗೋವಾ ರಾಜ್ಯದ ಎಲ್ಲಾ ಬೀಚ್ ಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದು, ಇದರಿಂದಾಗಿ ಪ್ರವಾಸೋದ್ಯಮ ಅವಲಂಭಿತ ಉದ್ಯೋಗಿಗಳಲ್ಲಿ ಸಂತಸ ಮನೆಮಾಡಿದೆ. ರಾಜ್ಯದ ಎಲ್ಲ ಸಣ್ಣ, ದೊಡ್ಡ ಹೋಟೆಲ್ ಗಳು ಭರ್ತಿಯಾಗಿದ್ದು, ಇದೀಗ ಹೊಸದಾಗಿ ಆಗಮಿಸುವ ಪ್ರವಾಸಿಗರಿಗೆ ಕೊಠಡಿ ಸಿಗದೇ ಪರದಾಡುವಂತಾಗಿದೆ. ಕರೋನಾ ಸಾಂಕ್ರಾಮಿಕದ ನಂತರ ರಾಜ್ಯದಲ್ಲಿ ಪ್ರವಾಸೋದ್ಯಮ ವ್ಯಾಪಾರವು ಚುರುಕುಗೊಂಡಿದೆ. ಗೋವಾದ ಕಲಂಗುಟ್, ವಾಗಾತೋರ್, ಶಿಕೇರಿ, ಬಾಗಾ, ಮೀರಾಮಾರ್ ಬೀಚ್‍ಗಳು ಪ್ರವಾಸಿಗರಿಂದ ತುಂಬಿರುವ ದೃಶ್ಯ ಕಂಡುಬರುತ್ತಿದೆ.
ದೇಶಿ ಹಾಗೂ ವಿದೇಶಿ ಪ್ರವಾಸಿಗರು ಗೋವಾ ಪ್ರವೇಶಿಸುತ್ತಿದ್ದಾರೆ. ಪ್ರವಾಸೋದ್ಯಮ ವ್ಯಾಪಾರ ಖಂಡಿತವಾಗಿಯೂ ಉತ್ತೇಜನವನ್ನು ಪಡೆಯುತ್ತದೆ. ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ದೇಶೀಯ ಪ್ರವಾಸಿಗರೂ ಹೆಚ್ಚಿದ್ದಾರೆ. ಅದರೊಂದಿಗೆ ರಷ್ಯಾ, ಬ್ರಿಟನ್, ಉಜ್ಬೇಕಿಸ್ತಾನ್ ಮೊದಲಾದ ದೇಶಗಳಿಂದ ಹಲವು ವಿಮಾನಗಳು ಬರುತ್ತಿವೆ. ಗೋವಾಕ್ಕೆ ಹೊಸ ವರ್ಷ ಸಂಭ್ರಮಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿರುವುದರಿಂದ ಗೋವಾದ ಎಲ್ಲ ಹೋಟೆಲ್ ರೂಂಗಳು ಭರ್ತಿಯಾಗಿದೆ. ನೆರೆಯ ರಾಜ್ಯಗಳ ಪ್ರವಾಸಿಗರು ತಮ್ಮ ಸ್ವಂತ ವಾಹನಗಳಲ್ಲಿ ಗೋವಾಕ್ಕೆ ಆಗಮಿಸಿರುವುದರಿಂದ ಎಲ್ಲೆಡೆ ಭಾರಿ ಟ್ರಾಫಿಕ್ ಜಾಮ್ ಸಂಭವಿಸುವಂತಾಗಿದೆ.
ಗೋವಾ ರಾಜ್ಯದ ವಿವಿಧ ಕಡಲತೀರಗಳು, ಹೋಟೆಲ್‍ಗಳು ಮತ್ತು ಕ್ಯಾಸಿನೊ ಹಡಗುಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಮದ್ಯದಂಗಡಿಗಳಲ್ಲೂ ಖರೀದಿ ಭರಾಟೆ ಕಂಡು ಬರುತ್ತಿದೆ. ಹಾಗಾಗಿ ರಾಜ್ಯದ ಎಲ್ಲಾ ಪ್ರವಾಸಿ ಸ್ಥಳಗಳು ಜನದಟ್ಟಣೆಯಿಂದ ಕೂಡಿವೆ. ಹೊಸ ವರ್ಷವನ್ನು ಸ್ವಾಗತಿಸಲು ಪಾರ್ಟಿಗಳು ಮತ್ತು ದೊಡ್ಡ ಔತಣಕೂಟಗಳನ್ನು ಆಯೋಜಿಸಿರುವುದರಿಂದ ಎಲ್ಲೆಡೆ ಸಂಭ್ರಮದ ವಾತಾವರಣವಿದೆ.