ಬೆಂಗಳೂರು: ರಾತ್ರಿ ಮೋಜು ಮಸ್ತಿಯೊಂದಿದೆ ಹೊಸ ವರ್ಷವನ್ನು ಸ್ವಾಗತಿಸಿದ ಬೆಂಗಳೂರಿಗರು ಬೆಳಗಾಗುತ್ತಿದ್ದಂತೆ ದೇವಾಲಯ ಹಾಗೂ ಚರ್ಚ್‌ಗಳಿಗೆ ಭೇಟಿ ನೀಡಿ ಒಳಿತಿಗಾಗಿ ಪ್ರಾರ್ಥನೆ ಮಾಡಿದರು. ಹೊಸ ವರ್ಷದ ಹಿನ್ನೆಲೆ ಬುಧವಾರ ಬೆಳಂಬೆಳಗ್ಗೆಯೇ ನಗರದ ಬನಶಂಕರಿ ದೇವಾಲಯ, ಗವಿಗಂಗಾಧರೇಶ್ವರ, ಇಸ್ಕಾನ್, ದೊಡ್ಡ ಗಣಪತಿ, ಗಿರಿನಗರದ ಕಾರ್ಯಸಿದ್ಧಿ ಆಂಜನೇಯ, ಮಹಾಲಕ್ಷ್ಮೀ ಲೇಔಟ್‌ನ ಶ್ರೀನಿವಾಸ ದೇವಾಲಯ, ಕಾಡು ಮಲ್ಲೇಶ್ವರ ದೇವಾಲಯಗಳಲ್ಲಿ ಭಕ್ತರ ದಂಡು ನೆರೆದಿತ್ತು.
ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಅಲಂಕಾರಗಳು ನೆರವೇರಿದವು. ಈ ವರ್ಷದ ಎಲ್ಲಾ ಕೆಲಸಗಳಿಗೂ ಒಳಿತಾಗಲಿ, ಯಾವುದೇ ವಿಘ್ನ ಬಾರದಿರಲಿ, ಆಯಸ್ಸು, ಆರೋಗ್ಯಕ್ಕಾಗಿ ಪ್ರಾರ್ಥಿಸಿದರು. ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಸಿಹಿ ತಿನಿಸು ನೀಡುತ್ತಿದ್ದ ದೃಶ್ಯ ಕಂಡು ಬಂತು. ಗವಿಪುರದಲ್ಲಿ ಗಂಗಾಧರೇರ್ಶವರನನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಬನಶಂಕರಿ ದೇವಸ್ಥಾನದಲ್ಲಿ ಬೆಳಗ್ಗೆ 5 ಗಂಟೆಗೆ ವಿಶೇಷ ಪೂಜೆ 20 ಕ್ವಿಂಟಾಲ್ ಪ್ರಸಾದ ವಿತರಣೆ, ಒಂದು ಲಕ್ಷ ಮೈಸೂರು ಪಾಕ ವಿತರಣೆ ಮಾಡಲಾಯಿತು.
ಮಧ್ಯಾಹ್ನ 12 ಗಂಟೆಯಿಂದ ಎಲ್ಲಾ ಭಕ್ತರಿಗೂ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ವೈಯಾಲಿಕಾವಲ್‌ನ ತಿರುಮಲ ತಿರುಪತಿ ದೇವಸ್ಥಾನಗಳು ನೂತನ ವರ್ಷಾರಂಭದ ಹಿನ್ನೆಲೆ ವಿಶೇಷ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಂಡಿತ್ತು. ಬೆಳಗ್ಗೆ 6 ಗಂಟೆಗೆ ವೇದ ಪಾರಾಯಣ ಸೇರಿ ವಿವಿಧ ಕಾರ್ಯಕ್ರಮಗಳು, ಸಂಜೆ ಸಂಗೀತ ಕಾರ್ಯಕ್ರಮ ನಡೆಯಿತು.
ಮುಂಬತ್ತಿ ಹಚ್ಚಿ ಪ್ರಾರ್ಥನೆ: ಶಿವಾಜಿನಗರದ ಸೇಂಟ್ ಮೇರಿಸ್ ಬೆಸಿಲಿಕಾ, ಫ್ರೇಜರ್‌ಟೌನ್‌ನಲ್ಲಿರುವ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್, ಬ್ರಿಗೇಡ್ ರಸ್ತೆಯಲ್ಲಿರುವ ಸಂತ ಪ್ಯಾಟ್ರಿಕ್ಸ್ ಚರ್ಚ್, ಸೇಂಟ್ ಮಾರ್ಕ್ಸ್ ಕೆಥೆ ಡ್ರಲ್, ಚಾಮರಾಜಪೇಟೆಯ ಸೇಂಟ್ ಜೋಸೆಫ್ ಚರ್ಚ್, ಹಲಸೂರಿನ ಹೋಲಿ ಟ್ರಿನಿಟಿ ಚರ್ಚ್, ಎಂಜಿ ರಸ್ತೆಯ ಈಸ್ಟ್ ಪೆರೇಡ್ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಂಗಳವಾರ ರಾತ್ರಿಯೇ ಸಾಕಷ್ಟು ಮಂದಿ ಭೇಟಿ ನೀಡಿದ್ದರು. ಬುಧವಾರ ಬೆಳಗ್ಗೆಯೂ ಮುಂಬತ್ತಿ ಹಚ್ಚುವ ಮೂಲಕ ಪ್ರಾರ್ಥನೆ ಮಾಡಿದರು.
ಇಸ್ಕಾನ್‌ಗೆ ಲಕ್ಷ ಮಂದಿ ಭೇಟಿ: ಹೊಸ ವರ್ಷದ ಅಂಗವಾಗಿ ಬುಧವಾರ ಒಂದೇ ದಿನ ರಾಜಾಜಿನಗರದ ಇಸ್ಕಾನ್ ದೇವಾಲಯಕ್ಕೆ ಬರೊಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದಿದ್ದಾರೆ. ಇಸ್ಕಾನ್ ದೇವಾಲಯಕ್ಕೆ ಬೆಳಗ್ಗೆಯಿಂದ ರಾತ್ರಿಯವರೆಗೆ ಭಕ್ತರು ಸಾಲುಗಟ್ಟಿ ಬಂದರು. ಭಕ್ತರಿಗೆ ಪ್ರಸಾದ ವಿತರಣೆ, ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಪಾರ್ಕ್‌ಗಳು ಫುಲ್: ಹೊಸ ವರ್ಷದ ಮೊದಲ ದಿನವನ್ನು ಖುಷಿಯಿಂದ ಕಳೆಯಲು ಕುಂಟುಂಬ ಸಮೇತರಾಗಿ ಉದ್ಯಾನಗಳಿಗೆ ಸಾಕಷ್ಟು ಮಂದಿ ಆಗಮಿಸಿದ್ದರು. ಈ ಹಿನ್ನೆಲೆ ನಗರ ಕಬ್ಬನ್ ಉದ್ಯಾನ, ಲಾಲ್‌ಬಾಗ್‌ನಲ್ಲಿ ಜನದಟ್ಟಣೆ ಹೆಚ್ಚಿತ್ತು. ಜತೆಗೆ ಇತರೆ ಉದ್ಯಾನಗಳಿಗೂ ತೆರಳಿ ಸುತ್ತಾಡಿ, ಭೋಜನ ಸವಿದು ಕುಟುಂಬದೊಟ್ಟಿಗೆ ಸಂತಸಪಟ್ಟರು. ಜತೆಗೆ ನಗರ ಮಾಲ್‌ಗಳು, ಸಿನಿಮಾ ಮಂದಿರಗಳು ಜನರಿಂದ ತುಂಬಿದ್ದವು.