Advertisement

New Year: ನಮ್ಮ ಮನದಲ್ಲಿ ಹಾಗೇ ಉಳಿದ ನಮ್ಮನೆ

12:29 PM Dec 31, 2023 | Team Udayavani |

ಕಳೆದು ಹೋದ ವರ್ಷದಲ್ಲಿ, ಕಳೆದುಕೊಂಡ ವಸ್ತು ಕಳೆದು ಹೋಗುವವರೆಗೂ ಅಷ್ಟು ಮುಖ್ಯ ಎಂಬ ಭಾವವನ್ನೇ ನನಗೆ ನೀಡಿರಲಿಲ್ಲ. ಅದು ನಮ್ಮಿಂದ ದೂರವಾಗುತ್ತಿದೆ ಎಂದು ಗೊತ್ತಾದಾಗ ಅದರ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಗಿತ್ತು. ಅದು ಶಾಶ್ವತವಾಗಿ ದೂರವಾದ ಮೇಲಂತೂ  ಮನದಲ್ಲಿ ಭದ್ರವಾಗಿ ನೆಲೆಸಿಬಿಟ್ಟಿತು. ಹುಟ್ಟಿದಾಗಿನಿಂದ ಮದುವೆಯಾಗುವವರೆಗೂ ನನಗೆ ಆಶ್ರಯ ನೀಡಿದ್ದ ತಾಣ.

Advertisement

ಮನೆ ಮಂದಿಯೆಲ್ಲಾ ಆರೋಗ್ಯವಾಗಿರಿ ಎಂದು ಪಾತ್ರೆ ತುಂಬಾ ಹಾಲು ನೀಡು­ತ್ತಿದ್ದ ಗೋವುಗಳಿದ್ದ ಕೊಟ್ಟಿಗೆ, ಅಮ್ಮಂದಿರ ಕೈಬಳೆಯ ನಾದ, ಗುಸು ಗುಸು-ಪಿಸು ಪಿಸು ಮಾತು ಹಾಗೂ ಸದಾ ಒಂದಿಲ್ಲೊಂದು ಘಮ ಬೀರುತ್ತಿದ್ದ ಅಡುಗೆಮನೆ, ಊಟ ಮಾಡಲು ಕೂರುತ್ತಿದ್ದ ಭೋಜನ ಕೋಣೆ, ಭಜನೆ, ಆರತಿ, ಮಂತ್ರಗಳ ನಾದ ಕೇಳಿ ಬರುತ್ತಿದ್ದ ದೇವರ ಮನೆ, ಎಲ್ಲರೂ ಕೂಡಿ  ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಿದ್ದ ಪಡಸಾಲೆ, ಮನಸ್ಸಿಗೆ ಬೇಸರವಾದಾಗ, ದುಃಖವಾದಾಗ ಅದನ್ನೆಲ್ಲಾ ಮೌನವಾಗಿ ಕೇಳಿಸಿಕೊಂಡ ಭಿತ್ತಿಗಳು, “ಕಣ್ತುಂಬ ಕನಸು ಕಾಣು’ ಎಂದು ಬೆಚ್ಚಗಿನ ಆಸರೆ ನೀಡಿದ್ದ ನನ್ನ ಕೋಣೆ. ತಣ್ಣನೆಯ ವಾತಾವರಣವನ್ನು ಸೃಷ್ಟಿಸಿದ್ದ ಹಸಿರು ತೋಟ.

ಇದನ್ನೆಲ್ಲಾ ಒಳಗೊಂಡಿದ್ದ ನಮ್ಮ ಪ್ರೀತಿಯ ಮನೆ, ನಮ್ಮಿಂದ ಈ ವರುಷ ದೂರವಾಯಿತು. ಹತ್ತಿರದ ಬಂಧುವನ್ನು ಕಳೆದುಕೊಂಡಂತಹ ಭಾವದಲ್ಲಿ ಮನಸ್ಸು ಮಂಕಾಗಿತ್ತು. ಸಮಯ ಸರಿದಂತೆ ಮನಸ್ಸು ತಿಳಿಯಾಯ್ತು. ಮನೆ ಶಾಶ್ವತ ನೆನಪಾಗಿ ಮನದಲ್ಲಿ ನೆಲೆಸಿತು. ಆದರೂ ಕೆಲವೊಮ್ಮೆ ಬಾಲ್ಯದ ನೆನಪಾದಾಗ, ಬೇರೆ ಹಳೆಯ ಮನೆಗಳನ್ನು ನೋಡಿದಾಗ, ನಮ್ಮ ಮನೆಯ ಚಿತ್ರ ಕಣ್ಣ ಮುಂದೆ ಬರುತ್ತದೆ. ಮತ್ತೆ ನೆನಪುಗಳು ಕಾಡುತ್ತವೆ, ಕಣ್ಣಂಚು ತೇವವಾಗುತ್ತದೆ. ಮನೆ ದೂರವಾದರೂ ಮನೆಯಲ್ಲಿದ್ದ ಮನಗಳು ದೂರವಾಗಲಿಲ್ಲ ಎಂಬ ಸಂತಸದೊಂದಿಗೆ, 2023 ಕ್ಕೆ  ವಿದಾಯವನ್ನು ಹೇಳುತ್ತಾ 2024ಕ್ಕೆಶುಭ ಸ್ವಾಗತವನ್ನು ಕೋರೋಣ.

-ಅಚಲಾ ಬಾಪಟ್‌,  ಸಾಗರ

Advertisement

Udayavani is now on Telegram. Click here to join our channel and stay updated with the latest news.

Next