Advertisement

New Year 2024; ಹೊಸ ಭರವಸೆಗಳ ಜತೆ ಮೊದಲ ಹೆಜ್ಜೆ…

09:53 PM Dec 31, 2023 | Team Udayavani |

2024ರ ಮೊದಲ ದಿನಕ್ಕೆ ಇಂದು ಕಾಲಿರಿಸಿದ್ದೇವೆ. ಹಿಂದಿನ ವರ್ಷದ ಅನುಭವಗಳ ನೆನಪುಗಳನ್ನೆಲ್ಲ ಗಂಟುಮೂಟೆ ಕಟ್ಟಿ ಹೊಸ ಭರವಸೆ, ಹೊಸ ನಿರೀಕ್ಷೆಗಳೊಂದಿಗೆ 2024ಕ್ಕೆ ಪ್ರವೇಶಿಸಿದ್ದೇವೆ. ಈ ವರ್ಷದಲ್ಲಿ ರಾಜ್ಯ, ದೇಶ-ವಿದೇಶಗಳಲ್ಲಿ ಏನೇನು ನಿರೀಕ್ಷಿತ ಘಟನೆಗಳು ನಡೆಯುತ್ತವೆ ಎನ್ನುವ ಒಂದು ಮುನ್ನೋಟ ಇಲ್ಲಿದೆ.

Advertisement

ಹಲವು ದಶಕಗಳ ಕನಸು
ರಾಮಮಂದಿರ ಅನಾವರಣ
ಹಲವು ದಶಕಗಳಿಂದ ಭಾರತೀಯರು ಕಾತರದಿಂದ ಕಾಯುತ್ತಿರುವಂಥ ಐತಿಹಾಸಿಕ ದಿನವೊಂದಕ್ಕೆ 2024 ಸಾಕ್ಷಿಯಾಗಲಿದೆ. ಅದುವೇ ಅಯೋಧ್ಯೆಯ ಶ್ರೀ ರಾಮ ಮಂದಿರದ ಉದ್ಘಾಟನೆ.

ರಾಮಜನ್ಮಭೂಮಿಯಲ್ಲಿ ಭವ್ಯವಾದ ರಾಮಮಂದಿರವು ತಲೆಎತ್ತಿ ನಿಂತಿದ್ದು, ಇದೇ 22ರಂದು ಬಾಲರಾಮನ ಪ್ರಾಣಪ್ರತಿಷ್ಠೆಯೊಂದಿಗೆ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಈ ಮೂಲಕ ಜನ್ಮಭೂಮಿಯಲ್ಲೇ  ಶ್ರೀ ರಾಮನ ಭವ್ಯ ದೇಗುಲವನ್ನು ಕಣ್ತುಂಬಿಕೊಳ್ಳಬೇಕೆಂದು ಕಾಯುತ್ತಿದ್ದ ಅಸಂಖ್ಯಾತ ಹಿಂದೂಗಳ ಕನಸು ನನಸಾಗಲಿದೆ.
ದೇಶ-ವಿದೇಶಗಳ ಪ್ರತಿನಿಧಿಗಳು, ಸಾಧು-ಸಂತರು, ರಾಜಕೀಯ ಮುಖಂಡರು, ತಾರೆಯರು, ಕ್ರಿಕೆಟರ್‌ಗಳು, ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಜ.22ರ ಮಧ್ಯಾಹ್ನ ಮೃಗಶಿರಾ ನಕ್ಷತ್ರದಲ್ಲಿ ರಾಮಲಲ್ಲಾನು ಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಲಿದ್ದಾನೆ. ಜ.16ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಜ.22ರ ವರೆಗೂ ಮುಂದುವರಿಯಲಿದೆ. ಪ್ರಾಣಪ್ರತಿಷ್ಠೆಯ ದಿನದಂದು ದೇಶದ ಮನೆ ಮನೆಗಳಲ್ಲೂ ಶ್ರೀ ರಾಮಜ್ಯೋತಿ ಬೆಳಗಲಿದೆ. ಪ್ರತೀ ಊರಿನ ದೇವಸ್ಥಾನಗಳಲ್ಲೂ ಪೂಜೆ, ಹೋಮ, ಹವನಗಳು ನಡೆಯಲಿವೆ. ರಾಮ ಮಂದಿರದ ಉದ್ಘಾಟನೆಯನ್ನು ಇಡೀ ದೇಶವೇ ದೀಪಾವಳಿಯಂತೆ ಸಂಭ್ರಮಿಸಲಿದೆ.

ಮಂದಿರ ನಿರ್ಮಾಣಕ್ಕೆ ಅಗತ್ಯವಾದ ಪರಿಕರಗಳ ಸಂಗ್ರಹ ಕಾರ್ಯ, ಕಲ್ಲುಗಳ ಕೆತ್ತನೆ ಕೆಲಸ ಸುಮಾರು 29 ವರ್ಷಗಳಿಂದಲೂ ನಡೆಯುತ್ತಾ ಬಂದಿದೆ. 1989ರಿಂದಲೇ ಸುಮಾರು 2 ಲಕ್ಷಕ್ಕೂ ಅಧಿಕ ಗ್ರಾಮಗಳಿಂದ ಇಟ್ಟಿಗೆಗಳನ್ನು ಅಯೋಧ್ಯೆಗೆ ತರಲಾಗಿತ್ತು. ಕರಸೇವಕರು, ಭಕ್ತರು, ಸಂಘ-ಸಂಸ್ಥೆಗಳ ಪರಿಶ್ರಮದ ಫ‌ಲವೆಂಬಂತೆ, ಈಗ ಎರಡು ಅಂತಸ್ತಿನ ರಾಮಮಂದಿರ ನಿರ್ಮಾಣವಾಗಿದೆ. ಮೊದಲ ಅಂತಸ್ತಿನಲ್ಲಿ ಶ್ರೀ ರಾಮಲಲ್ಲಾ ವಿರಾಜಮಾನನಾದರೆ, 2ನೇ ಅಂತಸ್ತಿನಲ್ಲಿ ಶ್ರೀರಾಮ ಪಟ್ಟಾಭಿಷೇಕದ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ಮಂದಿರದಿಂದಾಗಿ, ಅಯೋಧ್ಯಾ ನಗರಿಗೂ ಹೊಸ ಕಳೆ ಬಂದಿದ್ದು, ಮುಂದೆ ಬರಲಿರುವ ಪ್ರವಾಸಿಗರು, ಭಕ್ತರನ್ನು ಗಮನದಲ್ಲಿಟ್ಟುಕೊಂಡು ಇಡೀ ನಗರವನ್ನು ಮರುಅಭಿವೃದ್ಧಿ ಮಾಡಲಾಗುತ್ತಿದೆ. ಹೊಸ ಟೌನ್‌ ಶಿಪ್‌ಗಳು , ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು, ಅತ್ಯಾಧುನಿಕ ಸೌಕರ್ಯಗಳಿಂದ ಅಯೋಧ್ಯೆ ಕಂಗೊಳಿಸುತ್ತಿದೆ.

ಭಾರತದಲ್ಲಿ
ಮಹಾ ಚುನಾವಣೆ
40ಕ್ಕೂ ಹೆಚ್ಚು ದೇಶಗಳಲ್ಲಿ ಈ ವರ್ಷ ಮತದಾನ
2024ರಲ್ಲಿ ವಿಶ್ವದ ಪ್ರಜಾಪ್ರಭುತ್ವ ದೇಶಗಳಲ್ಲಿ ದಿಗ್ಗಜ ರಾಷ್ಟ್ರವೆಂದು ಗುರುತಿಸಲ್ಪಟ್ಟಿರುವ ಭಾರತ, ಅಮೆರಿಕ, ಬ್ರಿಟನ್‌ ಸಹಿತ ವಿಶ್ವದ 40ಕ್ಕೂ ಅಧಿಕ ದೇಶಗಳಲ್ಲಿ ಚುನಾವಣೆ ನಡೆಯಲಿದೆ. ವಿಶ್ವದ ಒಟ್ಟಾರೆ ಜನಸಂಖ್ಯೆಯ ಶೇ.50ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಚುನಾವಣೆಗಳಲ್ಲಿ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ.
ಭಾರತ, ಅಮೆರಿಕ, ಕೆನಡಾ, ರಷ್ಯಾ, ಬ್ರಿಟನ್‌ನಲ್ಲಿ ನಡೆಯಲಿರುವ ಚುನಾವಣೆಗಳು ಇಡೀ ವಿಶ್ವದ ಕುತೂಹಲಕ್ಕೆ ಕಾರಣವಾಗಿವೆ. ರಷ್ಯಾ, ದಕ್ಷಿಣ ಆಫ್ರಿಕಾ, ಪಾಕಿಸ್ಥಾನ, ಬಾಂಗ್ಲಾದೇಶ, ಇಂಡೋನೇಷ್ಯಾ, ಉಕ್ರೇನ್‌ ಮತ್ತು ಯುರೋಪ್‌ನ 9 ರಾಷ್ಟ್ರಗಳಲ್ಲಿ ಚುನಾವಣೆ ನಡೆಯಲಿದೆ.

Advertisement

ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಎಪ್ರಿಲ್‌-ಮೇ ತಿಂಗಳ ಅವಧಿಯಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ದೇಶದಲ್ಲಿ ಸತತ 3ನೇ ಬಾರಿಗೆ ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ಹುಮ್ಮಸ್ಸಿನಲ್ಲಿದ್ದರೆ ಕಳೆದೆರಡು ಚುನಾವಣೆಗಳಲ್ಲಿ ಪರಾಭವಗೊಂಡು ಬಸವಳಿದಿರುವ ವಿಪಕ್ಷ ಗಳು ಈ ಬಾರಿ ಮೈತ್ರಿಕೂಟ ರಚಿಸಿಕೊಂಡಿವೆ.
ಇದೇ ವೇಳೆ ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಝಾರ್ಖಂಡ್‌ ವಿಧಾನಸಭೆಗೆ ಲೋಕಸಭೆ ಚುನಾವಣೆಯೊಂದಿಗೇ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗಳಿಗೆ ಅಕ್ಟೋಬರ್‌ ವೇಳೆಗೆ ಚುನಾವಣೆ ನಡೆಯಲಿದೆ.

ಅಮೆರಿಕದಲ್ಲಿ ನವೆಂಬರ್‌ 5ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ರಿಪಬ್ಲಿಕನ್‌ ಪಕ್ಷದಿಂದ ಹಾಲಿ ಅಧ್ಯಕ್ಷ ಜೋ ಬೈಡೆನ್‌ ಕಣಕ್ಕಿಳಿಯುವ ಸಾಧ್ಯತೆ ಇದ್ದರೆ, ಕಾನೂನು ಜಂಜಾಟದಲ್ಲಿ ಸಿಲುಕಿ ಈಗ ಸ್ಪರ್ಧೆಯಿಂದ ಅನರ್ಹಗೊಂಡಿರುವ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೆ ಕಣಕ್ಕಿಳಿಯುವ ಸಲುವಾಗಿ ಕಾನೂನು ಹೋರಾಟವನ್ನು ಮುಂದುವರಿಸಿದ್ದಾರೆ.

ವಿದೇಶಗಳಲ್ಲಿ ಚುನಾವಣೆ
ಬಾಂಗ್ಲಾದೇಶ ಜ.7
ತೈವಾನ್‌ ಜ.13
ಪಾಕಿಸ್ಥಾನ ಫೆ. 8
ಯುರೋಪಿಯನ್‌
ಪಾರ್ಲಿಮೆಂಟ್‌ಫೆ. 8
ಇಂಡೋನೇಷ್ಯಾ ಫೆ.14
ರಷ್ಯಾ ಅಧ್ಯಕ್ಷೀಯ ಚುನಾವಣೆ ಮಾ.17
ಮೆಕ್ಸಿಕೋ ಜೂ.2

ಮಾನವ ಸಹಿತ ಗಗನಯಾನ, ಶುಕ್ರಯಾನ
ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಕ್ರಮ ಸಾಧಿಸಲು ಇಸ್ರೋ ಸಂಕಲ್ಪ
2023ರಲ್ಲಿ ಚಂದ್ರನ ಅಧ್ಯಯನಕ್ಕಾಗಿ ಉಡಾಯಿಸ ಲಾದ ಬಾಹ್ಯಾಕಾಶ ನೌಕೆ ಚಂದ್ರಯಾನ -3 ಮತ್ತು ಸೂರ್ಯನ ಹೊರಕವಚದ ಅಧ್ಯಯನಕ್ಕಾಗಿ ಉಡಾಯಿಸಲಾದ ಆದಿತ್ಯ ಎಲ್‌ 1 ಯೋಜನೆಯ ಯಶಸ್ಸಿನ ಹುಮ್ಮಸ್ಸಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೋ) 2024ರಲ್ಲಿ ಮತ್ತಷ್ಟು ಬಾಹ್ಯಾಕಾಶ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಜ್ಜಾಗಿದೆ. ಇವುಗಳಲ್ಲಿ ಬಹು ನಿರೀಕ್ಷೆಯ ಮಾನವಸಹಿತ ಗಗನಯಾನ, ಮಂಗಳಯಾನ -2 ಮತ್ತು ಶುಕ್ರಯಾನ-1 ಪ್ರಮುಖವಾದವುಗಳಾಗಿವೆ.

ಎಕ್ಸ್‌ ರೇ ಪೋಲಾರಿಮೀಟರ್‌ ಉಪಗ್ರಹ
ಬ್ಲ್ಯಾಕ್‌ಹೋಲ್‌(ಕಪ್ಪು ಕುಳಿ)ಯ ಅಧ್ಯಯನಕ್ಕಾಗಿ ಎಕ್ಸ್‌-ರೇ ಪೋಲಾರಿಮೀಟರ್‌ ಉಪಗ್ರಹವನ್ನು ಹೊಸ ವರ್ಷದ ಮೊದಲ ದಿನದಂದೇ ಉಡಾಯಿಸಲು ನಿರ್ಧರಿಸಿದೆ. ಇದೇ ಮೊದಲ ಬಾರಿಗೆ ಭಾರತ ಕಪ್ಪುಕುಳಿ ಅಧ್ಯಯನ ನಡೆಸುತ್ತಿದೆ.

ಇನ್ಸಾಟ್‌
3ಡಿಎಸ್‌
ಇದು ಭಾರತೀಯ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆ (ಐNಖಅಖ) ಸರಣಿಯ ಬಹು ಮುಖ್ಯ ಭಾಗವಾಗಿ ಇನ್ಸಾಟ್‌ 3ಡಿಎಸ್‌ ಉಪಗ್ರಹವನ್ನು 2024 ರ ಜನವರಿಯಲ್ಲಿ ಉಡಾಯಿ ಸಲಾಗುವುದು.

ನಿಸಾರ್‌
ಭೂಮಿಯನ್ನು ಸೂಕ್ಷ್ಮ ವಾಗಿ ಅಧ್ಯಯನ ಮಾಡಲು ನಾಸಾ ಮತ್ತು ಇಸ್ರೋ ಜಂಟಿ ಆಶ್ರಯದಲ್ಲಿ ರೂಪುಗೊಳಿ ಸಿರುವ ಬಾಹ್ಯಾಕಾಶ ಯೋಜನೆ ಇದು. ಎರಡು ಪ್ರತ್ಯೇಕ ರಾಡಾರ್‌ ತರಂಗಾಂತರಗಳಿಂದ ಭೂಮಿಯ ಅತೀ ಸೂಕ್ಷ್ಮ ಚಲನವಲನಗಳನ್ನೂ ಗಮನಿಸಲಾಗುವುದು.

ಗಗನಯಾನ-1
ಇದು ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ. ಮೂವರು ವಿಜ್ಞಾನಿಗಳಿ ರುವ ನೌಕೆಯನ್ನು ಸುಮಾರು 400 ಕಿ.ಮೀ. ಗಳಷ್ಟು ದೂರದ ಕಕ್ಷೆಗೆ ಕಳುಹಿಸಿ, 3 ದಿನಗಳ ಬಳಿಕ ಪುನಃ ಹಿಂದೂ ಮಹಾ ಸಾಗರದಲ್ಲಿ ಸುರಕ್ಷಿತವಾಗಿ ಇಳಿಸಲಾಗುವುದು.

ಮಂಗಳಯಾನ-2
“ಮಾರ್ಸ್‌ ಆರ್ಬಿಟರ್‌ ಮಿಶನ್‌ 2” ಅಥವಾ “ಮಂಗಳಯಾನ-2′ ಯೋಜನೆಯು ಮಂಗಳ ಗ್ರಹದ ಅಧ್ಯಯನಕ್ಕಾಗಿ ಉಡಾವಣೆ ಮಾಡು ತ್ತಿರುವ ಇಸ್ರೋದ ಎರಡನೇ ಬಾಹ್ಯಾಕಾಶ ನೌಕೆ. ಈ ನೌಕೆಯ ಮೂಲಕ ಮಂಗಳ ಗ್ರಹದ ಮೇಲ್ಮೈ, ಅಲ್ಲಿಯ ಹವಾಮಾನದ ಅಧ್ಯಯನ ಮಾಡುವ ಉದ್ದೇಶವನ್ನು ಇಸ್ರೋ ಹೊಂದಿದೆ.

ಶುಕ್ರಯಾನ-1
ಇದು ಶುಕ್ರ ಗ್ರಹದ ಅಧ್ಯಯನಕ್ಕಾಗಿ ರೂಪುಗೊಳ್ಳು ತ್ತಿರುವ ಇಸ್ರೋದ ಮೊಟ್ಟಮೊದಲ ಯೋಜನೆಯಾಗಿದ್ದು, 2024ರ ಡಿಸೆಂಬರ್‌ ಅಥವಾ 2025ರ ಪ್ರಾರಂಭದಲ್ಲಿ ಉಡಾಯಿಸುವ ಯೋಚನೆಯಲ್ಲಿದೆ.

ನಾಸಾದ ಮುಂದಿದೆ ಹಲವು ಯೋಜನೆಗಳು
ಅಮೆರಿಕದ ರಾಷ್ಟ್ರೀಯ ಏರೋನಾಟಿಕ್ಸ್‌ ಮತ್ತು ಬಾಹ್ಯಾಕಾಶ ಆಡಳಿತ ಸಂಸ್ಥೆ(ನಾಸಾ) ಕೂಡ 2024ರಲ್ಲಿ ಹಲವು ಮಹತ್ವದ ಬಾಹ್ಯಾಕಾಶ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಜ್ಜಾಗಿದೆ. ಚಂದ್ರನ ಅಧ್ಯಯನಕ್ಕೆ ವಿಶೇಷ ಒತ್ತು ನೀಡಿದ್ದು ಚಂದ್ರನಂಗಳಕ್ಕೆ ಮಾನವನನ್ನು ಕಳುಹಿಸಲು ಮುಂದಾಗಿದೆ. ಭೂಮಿಯ ಅಧ್ಯಯನಕ್ಕಾಗಿ “ನಿಸಾರ್‌’ ಯೋಜನೆಯನ್ನು ಹಮ್ಮಿಕೊಂಡಿದೆ.

ಹೊಸ ಟೆಕ್ನಾಲಜಿಗೆ ಸ್ವಾಗತ
ಹೊಸ ಸವಾಲು, ಆವಿಷ್ಕಾರ, ವಿನೂತನಗಳಿಗೆ 2024 ಸಾಕ್ಷಿಯಾಗಲಿದೆ. ಈ ವರ್ಷ ಬದುಕಿಗೆ ಹತ್ತಿರವಾಗುವ ಹಾಗೂ ಇನ್ನಷ್ಟು ಸರಳೀಕರಿಸುವ ಹೊಸ ಸಾಹಸಗಳೂ ನಡೆಯಲಿವೆ. ರಿಯಾಲಿಟಿ ಗ್ಲಾಸಸ್‌. ನೂತನ ಆವಿಷ್ಕಾರಗಳಲ್ಲಿ ಇದೂ ಒಂದು. ನೀವು ಧರಿಸುವ ಒಂದು ಕನ್ನಡಕ ನಿಮಗೆ ಮಾಹಿತಿಯ ಕಣಜವನ್ನೇ ತೆರೆದಿಡುತ್ತದೆ. ಜಗತ್ತಿನ ಯಾವುದೇ ಮೂಲೆಗೆ ಹೋದರೂ ತತ್‌ಕ್ಷಣವೇ ಅಲ್ಲಿನ ವಿಶೇಷತೆ, ಸ್ಥಳಗಳ ಮಾಹಿತಿ ಸೇರಿದಂತೆ ಸಮಗ್ರ ಚಿತ್ರಣ ಅನಾವರಣಗೊಳ್ಳಲಿದೆ. ಇದು ನಿಮ್ಮ ಬದುಕು ಸರಳೀಕರಣಗೊಳಿ­ಸುವುದರ ಜತೆಗೆ ನಡೆದಾಡುವ ವಿಶ್ವಕೋಶ ದಂತೆ ಕೆಲಸ ಮಾಡಲಿದೆ. “ಕೃತಕ ಬುದ್ಧಿಮತ್ತೆ’ ಹೊಸ ವರ್ಷದಲ್ಲಿ ಇನ್ನೊಂದು ಮಜಲನ್ನು ಪರಿಚಯಿಸಲಿದೆ. ಆರೋಗ್ಯ ಸಂಬಂಧಿ ಉಪಕರಣಗಳ ಬಳಕೆಯಿಂದ ದಿನಚರಿ ಬದುಕಿಗೂ ಹತ್ತಿರವಾಗಲಿದೆ. ಆರೋಗ್ಯದ ನಿಖರ ಮಾಹಿತಿ ಜತೆಗೆ ತೆಗೆದುಕೊಳ್ಳ­ಬೇಕಾದ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಿದೆ. ಮೊಬೈಲ್‌ ದುನಿಯಾದಲ್ಲಿ ಆ್ಯಪಲ್‌ 16, ಸ್ಯಾಮ್ಸಂಗ್‌ ಗ್ಯಾಲಕ್ಸಿ ಎಸ್‌24, ಫೋಲ್ಡ್‌ 6, ಫ್ಲಿಪ್‌ 6, ಒನ್‌ ಪ್ಲಸ್‌ 12, ಕ್ಸಿಯೊಮಿ 14, ನಥಿಂಗ್‌ 2ಎ, ರೆಡ್‌ಮಿ 13 ಸಿರೀಸ್‌ ಸೇರಿದಂತೆ ಇತರ ಕಂಪೆನಿಗಳು ಹೊಸ ವರ್ಷದಲ್ಲಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿವೆ.

ಧೂಳೆಬ್ಬಿಸಲಿವೆ ಕಾರುಗಳು
ಕಾರುಗಳು ನೂತನ ವರ್ಷದಲ್ಲಿ ಹೊಸ ಅವತಾರಗಳಲ್ಲಿ ರಸ್ತೆಗಿಳಿಯಲಿವೆ. ಕಿಯಾದ ಸೋನೆಟ್‌ ಫೇಸ್‌ಲಿಫ್ಟ್, ಹುಂಡೈ ಕ್ರೆಟಾ ಫೇಸ್‌ಲಿಫ್ಟ್, ಸ್ಟಾರ್‌ಗೆàಜರ್‌, ಲೆಕ್ಸ್‌ಸ್‌ ಎಲ್‌ಎಂ, ರೆನಾಲ್ಟ್ ನ್ಯೂ ಡಸ್ಟರ್‌, ಟೆಸ್ಲಾದ ಮಾಡೆಲ್‌ ಎಸ್‌, ಮಹೀಂದ್ರಾದ ಬಿಇ.09, ಟೊಯೋಟಾ ರಷ್‌, ಅರ್ಬನ್‌ ಕ್ರೂಸರ್‌, ಇನ್ನೋವಾ ಕ್ರಿಸ್ಟಾ ಜಿ 8, ನಿಸ್ಸಾನ್‌ ಕ್ವಾಸ್‌ಕೈ, ಜೀಪ್‌ನ ಅವೇಂಜರ್‌, ಸ್ಕೋಡಾದ ಸೂಪರ್‌º, ಟಾಟಾದ ಅವಿನ್ಯಾ ಸೇರಿದಂತೆ ಇತರ ಕಂಪೆನಿಗಳ ವಿವಿಧ ಆಯಾಮದ, ದುಬಾರಿ ಬೆಲೆಯ ಕಾರುಗಳು ಮಾರುಕಟ್ಟೆಗೆ ಬರಲಿವೆ. ಅದರಲ್ಲೂ ಎಲೆಕ್ಟ್ರಿಕ್‌ ಕಾರುಗಳು ಗಮನ ಸೆಳೆಯ ಲಿವೆ. ಮಾರುತಿ ಸುಜುಕಿ ಸಹ ಸ್ವಿಫ್ಟ್ ಹಾಗೂ ವ್ಯಾಗನಾರ್‌ನ್ನು ಸುಧಾರಿತ ಮಾದರಿಯಲ್ಲಿ ಪರಿಚಯಿಸಲಿದೆ.

ಸಾಲು ಸಾಲು ಸಿನೆಮಾಗಳು
2024ರಲ್ಲಿ ಕನ್ನಡ ಹಾಗೂ ಬಾಲಿವುಡ್‌ನಿಂದ ಹಲವು ಚಿತ್ರಗಳು ಬಿಡುಗಡೆಯಾಗ­ಲಿದ್ದು,ಅದರಲ್ಲಿ ಕೆಲವು ಚಿತ್ರಗಳು ಭರ್ಜರಿ ನಿರೀಕ್ಷೆ ಹುಟ್ಟಿಸಿವೆ. ಅದರಲ್ಲೂ ಕನ್ನಡದಲ್ಲಿ ಈ ಬಾರಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಕಾಣಲು ಹಲವು ಚಿತ್ರಗಳು ಸಜ್ಜಾಗಿವೆ. ಈ ವರ್ಷ ಬಹುತೇಕ ಸ್ಟಾರ್‌ ನಟರ ಚಿತ್ರಗಳು ಬಿಡುಗಡೆಯಾಗಲಿವೆ. ಧ್ರುವ ನಟನೆಯ “ಮಾರ್ಟಿನ್‌’, “ಕೆಡಿ’, ದರ್ಶನ್‌ ಅವರ “ಡೆವಿಲ್‌’, ಸುದೀಪ್‌ “ಮ್ಯಾಕ್ಸ್‌’, ವಿಜಯ್‌ “ಭೀಮ’, ಉಪೇಂದ್ರ “ಯು-ಐ’, “ಬುದ್ಧಿವಂತ -2′, ಶಿವರಾಜ್‌ ಕುಮಾರ್‌ “45′, “ಭೈರತಿ ರಣಗಲ್‌’, “ಕರಟಕ ದಮನಕ’ ರಿಷಭ್‌ ಶೆಟ್ಟಿ “ಕಾಂತಾರ-1′,
ಗಣೇ ಶ್‌ “ಕೃಷ್ಣಂ ಪ್ರಣಯ ಸಖೀ’ ಚಿತ್ರಗಳು ತೆರೆಕಾಣಲಿವೆ.

ನಿರೀಕ್ಷೆಯ ಕನ್ನಡದ ಪ್ಯಾನ್‌ ಇಂಡಿಯಾ ಸಿನೆಮಾಗಳು
ಮಾರ್ಟಿನ್‌
ಮ್ಯಾಕ್ಸ್‌
ಯು-ಐ,
ಕಾಂತಾರ-1,
45 ಕೆಡಿ
ಭೈರತಿ ರಣಗಲ್‌

ಬಾಲಿವುಡ್‌ನಿಂದ
ಭರ್ಜರಿ ನಿರೀಕ್ಷೆ
ಸ್ಯಾಂಡಲ್‌ವುಡ್‌ ಜತೆಗೆ ಬಾಲಿವುಡ್‌ನಿಂದಲೂ ಒಂದಷ್ಟು ಸಿನೆಮಾಗಳು ನಿರೀಕ್ಷೆ ಹುಟ್ಟಿಸಿವೆ. ಮುಖ್ಯವಾಗಿ ಹೃತಿಕ್‌ ರೋಶನ್‌ ಹಾಗೂ ದೀಪಿಕಾ ಪಡುಕೋಣೆ ನಟನೆಯ “ಫೈಟರ್‌’, ಅಕ್ಷಯ್‌ ಕುಮಾರ್‌ ನಟನೆಯ “ಸೂರರೈ ಪೋಟ್ರಾ’, “ಬಡೇ ಮಿಯಾ ಚೋಟೇ ಮಿಯಾ’, “ವೆಲ್‌ಕಂ ಟು ದಿ ಜಂಗಲ್‌’, ಅಜಯ್‌ ದೇವಗನ್‌ ಅವರ “ಸಿಂಗಂ ಎಗೈನ್‌’, ವಿದುತ್‌ ಜಮಾಲ್‌ ನಟನೆಯ “ಕ್ರ್ಯಾಕ್‌’ ಚಿತ್ರಗಳು ಬಾಲಿವುಡ್‌ ಅಂಗಳದಿಂದ ಭರ್ಜರಿ ನಿರೀಕ್ಷೆ ಹುಟ್ಟಿಸಿವೆ.
ಇದಲ್ಲದೇ ಸಲ್ಮಾನ್‌ ಖಾನ್‌ “ದಿ ಬುಲ್‌’ ಚಿತ್ರ ಕೂಡಾ ಅನೌನ್ಸ್‌ ಆಗಿದೆ. ಕರಣ್‌ ಜೋಹರ್‌ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ವಿಷ್ಣುವರ್ಧನ್‌ ನಿರ್ದೇಶಿಸುತ್ತಿದ್ದಾರೆ. ಈ 2024ರ ಕ್ರಿಸ್‌ಮಸ್‌ ವೇಳೆಗೆ ತೆರೆಗೆ ಬರಲಿದೆ. 2023ರಲ್ಲಿ 3 ಹಿಟ್‌ ಸಿನೆಮಾ­ಗಳನ್ನು ನೀಡಿ ಮತ್ತೆ ಬಾಲಿವುಡ್‌ನ‌ಲ್ಲಿ ಮೇಲುಗೈ ಸಾಧಿಸಿದ ಶಾರುಖ್‌ ಅವರ ಹೊಸ ಸಿನೆಮಾ ಕೂಡ ಫೆಬ್ರವರಿಗೆ ಶುರುವಾಗಲಿದ್ದು, ಇನ್ನಷ್ಟೇ ಟೈಟಲ್‌ ಘೋಷಣೆ­ಯಾಗಬೇಕಿದೆ. ಈ ಚಿತ್ರ ಕೂಡ 2024ರಲ್ಲೇ ಬಿಡುಗಡೆಯಾಗಲಿದೆ.

ನಿರೀಕ್ಷೆ ಮೂಡಿಸಿದೆ ಪ್ಯಾರಿಸ್‌ ಒಲಿಂಪಿಕ್ಸ್‌
ಜು.26ರಿಂದ ಆ.11ರ ವರೆಗೆ ಫ್ರಾನ್ಸ್‌ ನ ಪ್ಯಾರಿಸ್‌ನಲ್ಲಿ 33ನೇ ಒಲಿಂಪಿಕ್ಸ್‌ ನಡೆಯಲಿದೆ. 32 ಮುಖ್ಯ ಕ್ರೀಡೆಗಳು, 329 ಉಪವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಒಟ್ಟು 10,500 ಆ್ಯತ್ಲೀಟ್‌ಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಭಾರತದಿಂದಲೇ 1000 ಆ್ಯತ್ಲೀಟ್‌ಗಳ ಬೃಹತ್‌ ತಂಡ ತೆರಳಲಿದೆ. ವಿಶ್ವದ ಬಹು ಕ್ರೀಡಾಕೂಟವಾಗಿರುವ ಇದು ಭಾರೀ ನಿರೀಕ್ಷೆ ಮೂಡಿಸಿದೆ.
ಪ್ಯಾರಾಲಿಂಪಿಕ್ಸ್‌
ಪ್ಯಾರಿಸ್‌ ಒಲಿಂಪಿಕ್ಸ್‌ ಬೆನ್ನಲ್ಲೇ ಆ.28-ಸೆ.8ರವರೆಗೆ ಅದೇ ಜಾಗದಲ್ಲಿ ಅಂಗವಿಕಲರ ಪ್ಯಾರಾಲಿಂಪಿಕ್ಸ್‌ ನಡೆಯಲಿದೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯರು ಹಿಂದೆಂದಿಗಿಂತಲೂ ಶ್ರೇಷ್ಠ ಸಾಧನೆ ಮಾಡಿದ್ದರು. ಈ ಬಾರಿ ಅದಕ್ಕೂ ಮಿಗಿಲಾದ ಸಾಧನೆ ಮಾಡುವ ಬಲವಾದ ವಿಶ್ವಾಸ ವ್ಯಕ್ತವಾಗಿದೆ.
ಟಿ20 ವಿಶ್ವಕಪ್‌
2024 ಜೂ.4ರಿಂದ 30ರ ವರೆಗೆ ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ನಡೆ ಯಲಿದೆ. ಇದು 9ನೇ ಆವೃತ್ತಿ. ಇದರ ಆರಂಭಿಕ ಸುತ್ತಿನಲ್ಲಿ 20 ತಂಡಗಳು ಪಾಲ್ಗೊಳ್ಳುವುದು ಮಹತ್ವದ ಸಂಗತಿ.
ಐಪಿಎಲ್‌
2024ರ ಎಪ್ರಿಲ್‌-ಮೇ ತಿಂಗಳಲ್ಲಿ 10 ತಂಡಗಳ ಐಪಿಎಲ್‌ ನಡೆಯಲಿದೆ. ಟಿ20 ವಿಶ್ವಕಪ್‌ನಷ್ಟೇ ಮಹತ್ವ ಹೊಂದಿರುವ ಇದು ಹಲವು ಯುವ ಕ್ರಿಕೆಟಿಗರ ಭವಿಷ್ಯವನ್ನೇ ಬದಲಿಸಲಿದೆ.

ಜ.14ರಿಂದ 18
ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌
ಜ.19ರಿಂದ ಫೆ.11-19 ವಯೋಮಿತಿ ವಿಶ್ವಕಪ್‌
ಜ.19-ಫೆ.1
ಚಳಿಗಾಲದ ಯುವ ಒಲಿಂಪಿಕ್ಸ್‌
ಮಾ.1-3
ವಿಶ್ವ ಆ್ಯತ್ಲೆಟಿಕ್ಸ್‌ ಒಳಾಂಗಣ ಕೂಟ
ಮೇ 20-ಜೂ.9
ಫ್ರೆಂಚ್‌ ಓಪನ್‌ ಟೆನಿಸ್‌
ಜೂ.29-ಜು.21
ಟೂರ್‌ ಡಿ ಫ್ರಾನ್ಸ್‌ ಸೈಕ್ಲಿಂಗ್‌
ಜು.1-ಜು.14
ವಿಂಬಲ್ಡನ್‌ ಟೆನಿಸ್‌
ಆ.26-ಸೆ.8
ಯುಎಸ್‌ ಓಪನ್‌ ಟೆನಿಸ್‌
ಸೆ.17-ಸೆ.22
ಚೀನ ಓಪನ್‌ ಬ್ಯಾಡ್ಮಿಂಟನ್‌

Advertisement

Udayavani is now on Telegram. Click here to join our channel and stay updated with the latest news.

Next