ಹೊಸದಿಲ್ಲಿ: ಜಮ್ಮು – ಕಾಶ್ಮೀರದ ಶ್ರೀನಗರದಲ್ಲಿ ಭಾನುವಾರ ರಾತ್ರಿಯಿಂದೀಚೆಗೆ ಹಿಂದೆಂದೂ ಕಂಡಿರದಂಥ ಸಂಭ್ರಮ ಮನೆ ಮಾಡಿತ್ತು. ಇದೇ ಮೊದಲ ಬಾರಿಗೆ ನಾಗರಿಕರೆಲ್ಲ ಲಾಲ್‌ಚೌಕ್‌ಗೆ ಭಾರೀ ಸಂಖ್ಯೆಯಲ್ಲಿ ಆಗಮಿಸಿ, ಹೊಸ ವರ್ಷವನ್ನು ಸ್ವಾಗತಿಸಿದ್ದು ಕಂಡುಬಂತು.
2024ರ ಸ್ವಾಗತಕ್ಕೆಂದು ಪ್ರವಾಸೋದ್ಯಮ ಇಲಾಖೆಯು ಶ್ರೀನಗರದ ಕ್ಲಾಕ್ ಟವರ್‌ನಲ್ಲಿ ಸಂಗೀತೋತ್ಸವವನ್ನು ಆಯೋಜಿಸಿತ್ತು. ಲಾಲ್‌ಚೌಕ್ ಅನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗಿತ್ತು. ಪ್ರವಾಸಿಗರು ಮಾತ್ರವಲ್ಲದೇ ಸ್ಥಳೀಯರೂ ಇಲ್ಲಿಗೆ ಆಗಮಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದರು. ಇಂಥದ್ದೊಂದು ಹರ್ಷ, ಸಂಭ್ರಮವನ್ನು ಹಿಂದೆಂದೂ ನೋಡಿರಲಿಲ್ಲ ಎಂದೂ ಅವರು ಹೇಳಿದರು.
ದೇವಾಲಯಗಳು ರಶ್: ಶಬರಿಮಲೆ ಹಿಮಾಚಲ ಶಕ್ತಿ ಪೀಠಗಳು ಸೇರಿದಂತೆ ದೇಶಾದ್ಯಂತ ದೇಗುಲಗಳು ತುಂಬಿ ತುಳುಕಿವೆ.
ಈ ಬಾರಿ ಭರ್ತಿಯಾಗಲಿಲ್ಲ ಶಿಮ್ಲಾ ಹೋಟೆಲ್‌ಗಳು!
ಹೊಸ ವರ್ಷದ ಸಂದರ್ಭದಲ್ಲಿ ತುಂಬಿ ತುಳುಕುತ್ತಿದ್ದ ಶಿಮ್ಲಾದ ಹೋಟೆಲ್‌ಗಳು ಈ ಬಾರಿ ಭಣಗುಡುತ್ತಿದ್ದವು. ಕೇವಲ ಶೇ.50-60ರಷ್ಟು ಹೋಟೆಲ್‌ಗಳು ಮಾತ್ರ ಭರ್ತಿಯಾಗಿದ್ದು, ಪ್ರವಾಸಿಗರ ಇಷ್ಟೊಂದು ನೀರಸ ಪ್ರತಿಕ್ರಿಯೆ ನೋಡಿದ್ದು ಕಳೆದ 40 ವರ್ಷಗಳಲ್ಲಿ ಇದೇ ಮೊದಲು ಎಂದು ಹೋಟೆಲ್ ಅಸೋಸಿಯೇಷನ್ ತಿಳಿಸಿದೆ. ಹಿಮ ಮಳೆ, ಚಳಿ, ಟ್ರಾಫಿಕ್ ಜಾಮ್‌ಗೆ ಸಂಬಂಧಿಸಿ ಜಾಲತಾಣಗಳಲ್ಲಿ ನಕಾರಾತ್ಮಕ ಪ್ರಚಾರವೇ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಲು ಕಾರಣ ಎಂದೂ ಸಂಘ ಹೇಳಿದೆ.