Advertisement

ವರ್ಷಪೂರ್ತಿ ಇರಲಿ ಇದೇ ಹರ್ಷ…

12:00 PM Jan 01, 2023 | Team Udayavani |

ಬೆಂಗಳೂರು: ಕೊರೊನಾದಿಂದ ಕಳೆದ ಎರಡು ವರ್ಷಗಳಿಂದ ಮಂಕಾಗಿದ್ದ ನ್ಯೂ ಇಯರ್‌ ಸೆಲೆಬ್ರೆಷನ್‌ ಈ ವರ್ಷ ಅದ್ಧೂರಿಯಾಗಿ ನಡೆಯಿತು. ಒಂದೆಡೆ ಕೈಯಲ್ಲಿ ಹಿಡಿದಿದ್ದ ಬಲೂನುಗಳನ್ನು ಬಾನಿನತ್ತ ಹಾರಿಬಿಟ್ಟ ಯುವಜನತೆ, ಮತ್ತೂಂದೆಡೆ ಬಾನಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸುತ್ತಿರುವ ಪಟಾಕಿಗಳ ಸದ್ದು, ಹರ್ಷೋದ್ಘಾರ, ಕುಣಿತ, ಮೋಜು-ಮಸ್ತಿಗಳೊಂದಿಗೆ 2022ಕ್ಕೆ ಬೈ ಬೈ ಹೇಳಿದ ಸಿಲಿಕಾನ್‌ ಸಿಟಿ ಜನತೆ 2023ನೇ ವರ್ಷಕ್ಕೆ ಅದ್ಧೂರಿ ಸ್ವಾಗತ ಕೋರಿದರು.

Advertisement

ಹೊಸ ವರ್ಷಾಚರಣೆಯ ಕೇಂದ್ರ ಸ್ಥಳವಾದ ಎಂ.ಜಿ ರಸ್ತೆ ಮತ್ತು ಬ್ರಿಗೇಡ್‌ ರಸ್ತೆ ಜಂಕ್ಷನ್‌ನಲ್ಲಿ ಸಾವಿರಾರು ಮಂದಿ ಸೇರಿದರು. ಮಧ್ಯರಾತ್ರಿ 11.59 ಹಿಮ್ಮುಖ ಕೌಟ್‌ ಡೌನ್‌ ಆರಂಭವಾಯಿತು. ಗಡಿಯಾರದ ಮುಳ್ಳು 12 ಗಂಟೆ ಬಾರಿಸುತ್ತಿದ್ದಂತೆ ಸಂಭ್ರಮದ ಕಟ್ಟೆ ಹೊಡೆದು ನೆರೆದಿದ್ದ ಜನರೆಲ್ಲಾ ಖುಷಿಯ ಅಲೆಯಲ್ಲಿ ಮಿಂದೆದ್ದರು. ಇದೇ ವೇಳೆ ಆಕಾಶಕ್ಕೆ ಸಿಡಿದ ಪಟಾಕಿಗಳು ಚಿತ್ತಾರ ಮೂಡಿಸಿದವು. ಹಾಡು, ನೃತೃ, ಶಿಳ್ಳೆ ಚಪ್ಪಾಳೆಯ ಮೂಲಕ “ಹ್ಯಾಪಿ ನ್ಯೂ ಇಯರ್‌’ “ಹೊಸ ವರ್ಷದ ಶುಭಾಶಯಗಳು’ ಎಂದು ಹರ್ಷೋದ್ಘಾರದ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರು.

ಹೊಸ ವರ್ಷದ ಸ್ವಾಗತ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌ ಹಾಗೂ ಕಮ ರ್ಷಿಯಲ್‌ ಸ್ಟ್ರೀಟ್‌ಗಳಲ್ಲಿ ಎರಡ್ಮೂರು ದಿನಗಳ ಮೊದಲೇ ವಿದ್ಯುತ್‌ ದೀಪಗಳಿಂದ ಕಳೆಗಟ್ಟಿತ್ತು. ಎರಡು ವರ್ಷಗಳಿಂದ ಕೊರೊನಾ ಕಾರಣಗಳಿಂದ ಈ ಜಾಗದಲ್ಲಿ ಹೊಸವರ್ಷಾಚರಣೆಗೆ ಅವಕಾಶ ನಿರಾಕರಿಸಲಾಗಿತ್ತು. ಈ ಬಾರಿ ಕೆಲ ನಿಬಂಧನೆಗಳ ಅನ್ವಯ ಅವಕಾಶ ನೀಡಲಾಯಿತು. ಹೀಗಾಗಿ ರಾತ್ರಿ 8 ಗಂಟೆ ಸುಮಾರಿಗೆ ಎಂ.ಜಿ.ರಸ್ತೆ, ಬ್ರಿಗ್ರೇಡ್‌ ರಸ್ತೆ, ಚರ್ಚ್‌ಸ್ಟ್ರೀಟ್‌ ರಸ್ತೆಗಳಲ್ಲಿ ಜನಸ್ತೋಮ ಹೆಚ್ಚಾಯಿತು. ಯುವ ಪ್ರೇಮಿಗಳು, ಸ್ನೇಹಿತರು, ರಂಗುರಂಗಿನ ಉಡುಗೆ ತೊಡುಗೆಗಳನ್ನು ಧರಿಸಿಕೊಂಡು ಬಂದಿದ್ದರು. ವಿವಿಧ ನಮೂನೆಯ ಸಂಗೀತ ವಾದ್ಯಗಳು, ಬಲೂನು, ಹೊಸ ವರ್ಷ ಶುಭಾಶಯ ಕೊರುವ ಫ‌ಲಕಗಳನ್ನು ಹಿಡಿದು ತಂಡೋಪ ತಂಡವಾಗಿ ಬಂದಿದ್ದರು. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಯುವ ಜನತೆ ವರ್ಷಪೂರ್ತಿ ಇದೇ ಹರ್ಷ ಇರಲೆಂದು ಪರಸ್ಪರ ಆತ್ಮೀಯ ಅಪ್ಪುಗೆ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.

“ಹ್ಯಾಪಿ ನ್ಯೂ ಇಯರ್‌…’ ಶುಭಾಶಯ ವಿನಿಮಯ ಎಲ್ಲೆಡೆಯಿಂದ ಕೇಳಿಬರುತ್ತಿತ್ತು. ಇನ್ನು ಮಕ್ಕಳ ಜತೆ ಕುಟುಂಬ ಸಮೇತ ಆಗಮಿಸಿದ ಸಾರ್ವಜನಿಕರು ಸಮೀಪದ ಹೋಟೆಲ್‌ಗ‌ಳಲ್ಲಿ ಹೊಸವರ್ಷವನ್ನು ಬರಮಾಡಿಕೊಂಡರು.

ಸಂಜೆಯಿಂದಲೇ ಸಂಭ್ರಮ: ನಗರದಾದ್ಯಂತ ಶನಿವಾರ ಸಂಜೆಯಿಂದಲೇ ಹೊಸ ವರ್ಷದ ಸಂಭ್ರಮ ಮನೆ ಮಾಡಿತ್ತು. ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ರೆಸಿಡೆನ್ಸಿ ರಸ್ತೆ, ಚರ್ಚ್‌ ಸ್ಟ್ರೀಟ್‌, ಕಮರ್ಷಿಯಲ್‌ ಸ್ಟ್ರೀಟ್‌, ಮಲ್ಲೇಶ್ವರ, ಜಯನಗರ, ಇಂದಿರಾನಗರ, ಕೋರಮಂಗಲ, ಮಾರತ್ತಹಳ್ಳಿ, ಹಲಸೂರು, ಕಾಡುಗೋಡಿ, ವೈಟ್‌ಫೀಲ್ಡ್‌ ಹಾಗೂ ಹೊಸೂರು ರಸ್ತೆ, ಎಲೆಕ್ಟ್ರಾನಿಕ್‌ ಸಿಟಿಯ ಪ್ರಮುಖ ಕಟ್ಟಡ, ಹೋಟೆಲ್‌, ರೆಸ್ಟೋರೆಂಟ್‌ ಪಬ್‌ ಗಳನ್ನು ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿತ್ತು.

Advertisement

ಸಂಜೆ 7 ಗಂಟೆಯಿಂದಲೇ ನಗರದ ಬಹುತೇಕ ಐಷಾರಾಮಿ ಹೋಟೆಲ್‌, ಪಬ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮೋಜು ಮಸ್ತಿ ಆರಂಭವಾಗಿತ್ತು. ಪ್ರಮುಖವಾಗಿ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌ ರಸ್ತೆಗಳಲ್ಲಿರುವ ಪಬ್‌, ರೆಸ್ಟೋರೆಂಟ್‌ಗಳಲ್ಲಿ ಜನ ಕಿಕ್ಕಿರಿದ್ದು ಸೇರಿದ್ದರು.

34 ವಾಚ್‌ ಟವರ್‌: ಅಲ್ಲದೆ, ಮಾಣಿಕ್‌ ಷಾ ಪರೇಡ್‌ ಮೈದಾನ, ಕಾವೇರಿ ಎಂಪೋರಿಯಂ ಹಾಗೂ ಇತರೆಡೆ ಸೇರಿ 34 ವಾಚ್‌ ಟವರ್‌ಗಳನ್ನು ನಿರ್ಮಿಸಲಾಗಿತ್ತು. ಇದರೊಂದಿಗೆ ಬ್ರಿಗೇಡ್‌ ರಸ್ತೆ, ಚರ್ಚ್‌ಸ್ಟ್ರೀಟ್‌, ಎಂ.ಜಿ.ರಸ್ತೆ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್‌ ಹಾಕಿ ಲೋಹಶೋಧಕ ಯಂತ್ರ, ಬಾಂಬ್‌ ನಿಷ್ಕ್ರಿಯ ದಳ ತಂಡದಿಂದ ತಪಾಸಣೆ ನಡೆಸಲಾಯಿತು. ಜತೆಗೆ ಶ್ವಾನದಳಗಳಂದ ಎಲ್ಲೆಡೆ ಶೋಧಿಸಲಾಗಿತ್ತು. ಮಹಿಳೆಯ ರಕ್ಷಣೆಗಾಗಿ ಮಹಿಳಾ ಪೊಲೀಸರ ಜತೆ ಮಹಿಳಾ ಸಿವಿಲ್‌ ಡಿಫೆನ್ಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಅಲ್ಲದೆ, ಪ್ರತಿ 100 ಮೀಟರ್‌ ಒಂದರಂತೆ ಸೇಫ್ಟಿ ಐಲ್ಯಾಂಡ್‌ಗಳನ್ನು ತೆರೆಯಲಾಗಿತ್ತು. ಅಲ್ಲಿ ಮಹಿಳಾ ಪೊಲೀಸರ ಜತೆಗೆ ವೈದ್ಯರು ಮತ್ತು ಆ್ಯಂಬುಲೆನ್ಸ್‌ ನಿಯೋಜಿಸಲಾಗಿದೆ. ಯುವಕರಿಗೂ ಪ್ರತ್ಯೇಕ ಔಟ್‌ಪೋಸ್ಟ್‌ ನಿರ್ಮಿಸಲಾಗಿತ್ತು. ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದರು.

ಪೊಲೀಸ್‌ ಸರ್ಪಗಾವಲು : ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ನಗರದ ಮಹಾತ್ಮಗಾಂಧಿ ರಸ್ತೆ, ಬ್ರಿಗೇಡ್‌ ರಸ್ತೆ ಸೇರಿ ನಗರಾದ್ಯಂತ ಪೊಲೀಸ್‌ ಸರ್ಪಗಾವಲು ಹಾಕಲಾ ಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಜ್ಜೆ ಹೆಜ್ಜೆಗೂ ಪೊಲೀಸ್‌ ಸಿಬ್ಬಂದಿ, ಸಾವಿರಾರು ಸಿಸಿ ಕ್ಯಾಮೆರಾ ಕಣ್ಗಾವಲು, ವಾಚ್‌ ಟವರ್‌ಗಳು, ಹೊಯ್ಸಳ ವಾಹನ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next