ಪಿಥೋರಗಢ: ಕೈಲಾಸ ಮಾನಸ ಸರೋವರಕ್ಕೆ ಇನ್ನು ಮುಂದೆ ನೇರವಾಗಿ ನಮ್ಮ ದೇಶದಿಂದಲೇ ತೆರಳಬಹುದು. ಈ ವರ್ಷದ ಸೆಪ್ಟಂಬರ್‌ನಿಂದ ಈ ಸೌಲಭ್ಯ ಆರಂಭಗೊಳ್ಳಲಿದೆ. ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಕೆಎಂವಿಎನ್ ಹಟ್ಸ್‌ನಿಂದ ಭಾರತ-ಚೀನ ಗಡಿಯ ಲಿಪುಲೇಖ್ ವರೆಗೆ ಬಾರ್ಡರ್ ರೋಡ್ ಆರ್ಗನೈಸೇಷನ್ (ಬಿಆರ್‌ಒ) ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿ ಮುಕ್ತಾಯಗೊಂಡಾಗ ಈ ಕನಸು ನನಸಾಗಲಿದೆ.
ಈ ಹೊಸ ಮಾರ್ಗದಿಂದಾಗಿ ಕೈಲಾಸ ಮಾನಸ ಸರೋವರ ಯಾತ್ರೆಯ ಅವಧಿ ಹಾಲಿ 3 ವಾರಗಳಿಂದ ಒಂದೇ ವಾರಕ್ಕೆ ಇಳಿಕೆಯಾಗಲಿದೆ. ಬಿಆರ್‌ಒದ ಡೈಮಂಡ್ ಪ್ರಾಜೆಕ್ಟ್‌ನ ಮುಖ್ಯ ಎಂಜಿನಿಯರ್ ವಿಮಲ್ ಗೋಸ್ವಾಮಿ ಮಾತನಾಡಿ, “ಕಾಮಗಾರಿ ನಿರ್ವಹಿಸಲು ಪೂರಕ ಹವಾಮಾನ ಇದ್ದರೆ ಪ್ರಸಕ್ತ ವರ್ಷದ ಸೆಪ್ಟಂಬರ್‌ಗೆ ಮುಕ್ತಾಯಗೊಳ್ಳಬಹುದು’ ಎಂದಿದ್ದಾರೆ.
ಕೊರೊನಾ ಆರಂಭವಾದ ಅವಧಿಯಲ್ಲಿ ಲಿಪುಲೇಖ್ ಪಾಸ್ ಮೂಲಕ ಕೈಲಾಸ- ಮಾನಸ ಸರೋವರ ಯಾತ್ರೆ ಕೈಗೊಳ್ಳುವುದನ್ನು ನಿಷೇಧಿಸಲಾಗಿತ್ತು. ಅನಂತರ ಆ ಮಾರ್ಗವಾಗಿ ಯಾತ್ರೆ ಕೈಗೆತ್ತಿಕೊಳ್ಳಲಾಗಿರಲಿಲ್ಲ. ಇದುವರೆಗೆ ಲಿಪುಲೇಖ್‌ವರೆಗಿನ ದುರ್ಗಮ 90 ಕಿ.ಮೀ. ದೂರವನ್ನು ನಡೆದೇ ಕ್ರಮಿಸ ಬೇಕಿತ್ತು. ಹಾಗೆಯೇ ಶೇ. 80ರಷ್ಟು ಮಾರ್ಗ ಚೀನದಲ್ಲಿ, ಭಾರತೀಯ ಭಾಗ ದಲ್ಲಿ ಶೇ. 20 ಮಾತ್ರ ಮಾರ್ಗವಿತ್ತು. ಹೊಸ ಮಾರ್ಗ ಆರಂಭವಾದ ಬಳಿಕ ಶೇ. 84ರಷ್ಟು ಯಾತ್ರೆ ಭಾರತದಲ್ಲಿ, ಕೇವಲ ಶೇ. 16 ಭಾಗ ಚೀನದಲ್ಲಿ ಇರಲಿದೆ.
ಈಗಿನ ಮಾರ್ಗಗಳು
1. ಬಾಗ್ದೋಗ್ರಾವರೆಗೆ ವಿಮಾನದಲ್ಲಿ ಪ್ರಯಾಣ. ಅನಂತರ 1,665 ಕಿ.ಮೀ. ರಸ್ತೆ ಪ್ರಯಾಣ. ಅನಂತರ 43 ಕಿ.ಮೀ. ನಡಿಗೆ. ಒಟ್ಟು 1,665 ಕಿ.ಮೀ. ದೂರದ ಪೈಕಿ 175 ಕಿ.ಮೀ. ಮಾತ್ರ ಭಾರತದಲ್ಲಿ, ಉಳಿದದ್ದು ಚೀನದಲ್ಲಿ.
2. ನೇಪಾಲದ ರಾಜಧಾನಿ ಕಾಠ್ಮಂಡುವಿಗೆ ವಿಮಾನ. ಅಲ್ಲಿಂದ ರಸ್ತೆಯ ಮೂಲಕ 1,940 ಕಿ.ಮೀ. ನೇಪಾಲದಲ್ಲಿಯೇ 840 ಕಿ.ಮೀ., ಚೀನದಲ್ಲಿ 43 ಕಿ.ಮೀ. ಮೂಲಕ ನಡಿಗೆ. ನೇಪಾಲದ ವ್ಯಾಪ್ತಿಯಲ್ಲಿ 755 ಕಿ.ಮೀ. ದೂರ ಹೆಲಿಕಾಪ್ಟರ್ ಮೂಲಕ ತೆರಳಲು ಅವಕಾಶ ಇದೆ.