Advertisement
ಬೈಂದೂರು ಹೋಬಳಿಯ ಕೆರ್ಗಾಲು, ನಾಯ್ಕನಕಟ್ಟೆ, ಬಿಜೂರು ಭಾಗದಲ್ಲಿ ಈಗ ಶೇಂಗಾ ಬಿತ್ತನೆ ಕಾರ್ಯ ನಡೆಯುತ್ತಿದ್ದು, ಬಿತ್ತನೆಗೆ ರೈತರು, ಕೂಲಿಯಾಳುಗಳ ಬದಲಾಗಿ ಯಂತ್ರದ ಮೊರೆ ಹೋಗಿದ್ದಾರೆ. ಟ್ರ್ಯಾಕ್ಟರ್ ನ ಉಳುಮೆ ಮಾಡುವ ಕೊಕ್ಕೆಗೆ ಒಂದು ಇಂಚಿನ ಪೈಪ್ ಕಟ್ಟಿ, 6 ಹಲ್ಲುಗಳ ಮೂಲಕ ಶೇಂಗಾ ಬೀಜ ಬಿತ್ತನೆ ಮಾಡಲಾಗುತ್ತಿದೆ.
ಕೆರ್ಗಾಲು ಗ್ರಾ.ಪಂ. ಮಾಜಿ ಅಧ್ಯಕ್ಷ, ನಾಯ್ಕನಕಟ್ಟೆಯ ಸುಂದರ್ ಕೊಠಾರಿ ಅವರು ಈ ಭಾಗದಲ್ಲಿ ಮೊದಲ ಬಾರಿಗೆ ಈ ಪ್ರಯೋಗಕ್ಕೆ ಮುಂದಾಗಿದ್ದು, ಅವರ ಪ್ರಕಾರ ಎರಡು ಎಕರೆಗೆ ಈ ಬಾರಿ ಈ ಯಂತ್ರದ ಮೂಲಕ ಒಟ್ಟಾರೆ 3 ಸಾವಿರ ರೂ. ಖರ್ಚಾಗಿದೆ. ಅದೇ ಕಾರ್ಮಿಕರನ್ನು ಬಳಸಿಕೊಂಡರೆ, ಬೆಳಗ್ಗೆ, ಸಂಜೆ, ಮರು ದಿನ 3 ಹೊತ್ತಿಗೆ 18 ಜನ ಕಾರ್ಮಿಕರ ಅಗತ್ಯವಿರುತ್ತದೆ. ಇವರಿಗೆ ಕೂಲಿಯೇ ದುಬಾರಿಯಾಗುತ್ತದೆ. ಆದರೆ ಇದರಲ್ಲಿ ಕೇವಲ ಇಬ್ಬರು ಕೂಲಿಯಾಳುಗಳಿದ್ದರೆ ಸಾಕು ಎನ್ನುತ್ತಾರೆ. ಕಾರ್ಮಿಕರ ಸಮಸ್ಯೆಗೆ ಪರಿಹಾರ
ನೆಲಗಡಲೆ ಕೃಷಿ ಸಹಿತ ಎಲ್ಲ ಕೃಷಿ ಕಾರ್ಯಕ್ಕೂ ಇತ್ತೀಚಿನ ದಿನಗಳಲ್ಲಿ ಕೂಲಿಯಾಳುಗಳ ಸಮಸ್ಯೆ ತಲೆದೋರಿದೆ. ಈ ಯಾಂತ್ರೀಕೃತ ಕೃಷಿ ಮೂಲಕ ಅದಕ್ಕೆ ತಕ್ಕಮಟ್ಟಿಗೆ ಪರಿಹಾರ ಸಿಕ್ಕಂತಾಗಿದೆ. ಕೂಲಿಯಾಳು ಮೂಲಕ ಎಕರೆಗೆ ಕನಿಷ್ಠ 3 ಗಂಟೆ ಬಿತ್ತನೆಗೆ ವ್ಯಯವಾದರೆ, ಇದರಲ್ಲಿ ಒಂದು, ಒಂದೂವರೆ ಗಂಟೆಯೊಳಗೆ ಎಲ್ಲ ಕಾರ್ಯ ಮುಗಿಯುತ್ತದೆ.
Related Articles
ಹಿಂಗಾರು ಹಂಗಾಮಿನಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು ಹಾಗೂ ಕೋಟ ಹೋಬಳಿಯ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 4 ಸಾವಿರಕ್ಕೂ ಅಧಿಕ ಮಂದಿ ರೈತರು ನೆಲಗಡಲೆ ಬೆಳೆಯುತ್ತಾರೆ. ನಿರಂತರ ಮಳೆಯಿಂದಾಗಿ ಬಿತ್ತನೆ ಕಾರ್ಯ ವಿಳಂಬವಾಗಿದೆ. ಮಳೆ ಕಡಿಮೆಯಾಗಿರುವುದರಿಂದ ಈಗ ಗದ್ದೆ ಒಣಗಿದ್ದು, ಚಳಿಯೂ ಇರುವುದರಿಂದ ಬಿತ್ತನೆಗೆ ಪ್ರಶಸ್ತ ವಾತಾವರಣವಿದೆ.
Advertisement