Advertisement

ಹೊಸ ಟ್ರೆಂಡ್‌: ಎಲ್ಲಾದರೂ ನೋಡಿ  ಖುಷಿಪಡಿ!

09:49 AM Aug 04, 2017 | |

ಅಂತೂ ಈ ಟ್ರೆಂಡ್‌ ಕನ್ನಡಕ್ಕೆ ಕಾಲಿಟ್ಟಿರುವುದಷ್ಟೇ ಅಲ್ಲ, ದೊಡ್ಡ ಮಟ್ಟದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಕೆಲವೇ ವರ್ಷಗಳ ಹಿಂದೆ, ಸೋಷಿಯಲ್‌ ಮೀಡಿಯಾಗಾಗಿ ಕಿರುಚಿತ್ರಗಳನ್ನು ನಿರ್ಮಿಸುವುದೇ ದೊಡ್ಡ ವಿಷಯವಾಗಿತ್ತು. ಈಗ ಕಿರುಚಿತ್ರಗಳ ಹವಾ ಕಡಿಮೆಯಾಗಿದೆ. ಈಗೇನಿದ್ದರೂ ವೆಬ್‌ ಸೀರೀಸ್‌ನದ್ದೇ ಸುದ್ದಿ. ಭಾರತದ ವಿಷಯವಾಗಿ ಹೇಳುವುದಾದರೆ, ಇದುವರೆಗೂ ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ “ಪಿಚ್ಚರ್’, “ರೂಮ್‌ ಮೇಟ್ಸ್‌’, “ಬ್ಯಾಂಗ್‌ ಬಾಜಾ ಬಾರಾತ್‌’, “ಲೈಫ್ ಸಹಿ ಹೇ’, “ಐ ಡೋಂಟ್‌ ವಾಚ್‌ ಟಿವಿ’ ಮುಂತಾದ ಹಲವು ವೆಬ್‌ ಸೀರೀಸ್‌ಗಳು ಜನಪ್ರಿಯವಾಗಿದ್ದವು. ಈಗ ಕನ್ನಡಕ್ಕೂ ಆ ಟ್ರೆಂಡ್‌ ಕಾಲಿಟ್ಟಿದ್ದು, ಈಗಾಗಲೇ ಕೆಲವು ವೆಬ್‌ ಸೀರೀಸ್‌ಗಳು ಬಿಡುಗಡೆಯಾಗಿದ್ದು, ಇನ್ನೂ ಕೆಲವು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

Advertisement

ಇಷ್ಟಕ್ಕೂ ಏನಿದು ವೆಬ್‌ ಸೀರೀಸ್‌ ಎಂಬ ಪ್ರಶ್ನೆ ಬರಬಹುದು. ಹೆಸರೇ ಹೇಳುವಂತೆ ವೆಬ್‌ ಅಥವಾ ಇಂಟರ್‌ನೆಟ್‌ನಲ್ಲಿ ಬರುವಂತಹ ಸರಣಿ ಕಾರ್ಯಕ್ರಮಗಳಿಗೆ ವೆಬ್‌ ಸೀರೀಸ್‌ ಎಂದು ಹೇಳಲಾಗುತ್ತದೆ. ಉದಾಹರಣೆಗೆ ಹೇಳಬೇಕೆಂದರೆ, ಟಿವಿಯಲ್ಲಿ ಧಾರಾವಾಹಿ ಮತ್ತು ಕಾರ್ಯಕ್ರಮಗಳು ಪ್ರಸಾರವಾಗುತ್ತದೆ. ಅದೇ ತರಹದ ಧಾರಾವಾಹಿಗಳು ಪ್ರತಿ ವಾರ ಕಂತುಕಂತಾಗಿ ಪ್ರಸಾರವಾದರೆ, ಅದಕ್ಕೆ ವೆಬ್‌ ಸೀರೀಸ್‌ ಎನ್ನಬಹುದು. ಇಲ್ಲಿ ಒಂದೇ ಕಥೆಯನ್ನು ಹಲವು ಕಂತುಗಳಾಗಿಯೂ ಹೇಳಬಹುದು ಅಥವಾ ಪ್ರತಿ ಕಂತಿನಲ್ಲೂ ಒಂದೊಂದು ಹೊಸ ಕಥೆಯನ್ನೂ ತೋರಿಸಬಹುದು. ಪ್ರಮುಖವಾಗಿ ಇಲ್ಲಿ ಮಡಿವಂತಿಕೆ ಇರುವುದಿಲ್ಲ ಮತ್ತು ಯದ್ವಾತದ್ವಾ ಎಳೆದಾಡಲಾಗುವುದಿಲ್ಲ. ಕಡಿಮೆ ಅವಧಿಯಲ್ಲಿ, ವಿಭಿನ್ನವಾಗಿ ಏನನ್ನು ಹೇಳುವುದಕ್ಕೆ ಸಾಧ್ಯವೋ ಅದನ್ನು ಹೇಳುವ ಪ್ರಯತ್ನ ಮಾಡಲಾಗುತ್ತದೆ. ಒಟ್ಟಿನಲ್ಲಿ ಟಿವಿಯಲ್ಲಿ ಇದುವರೆಗೂ ಏನು ಪ್ರಸಾರವಾಗುತಿತ್ತೋ, ಅದೇ ಮತ್ತಷ್ಟು ವಿಭಿನ್ನವಾಗಿ ಯೂಟ್ಯೂಬ್‌ ಮತ್ತು ಫೇಸ್‌ಬುಕ್‌ಗಳಲ್ಲಿ ಮಾತ್ರ ವೀಕ್ಷಿಸಬಹುದು. ವಿಶೇಷವೆಂದರೆ, ಇಂಥಾ ಸಮಯದಲ್ಲೇ ನೋಡಬೇಕೆಂದೇನೂ ಇಲ್ಲ. ಇಂಟರ್‌ನೆಟ್‌ ಇದ್ದರೆ ಸಾಕು, ಯಾರು ಯಾವ ದೇಶದಲ್ಲಿ ಬೇಕಾದರೂ, ಎಷ್ಟು ಹೊತ್ತಿಗೆ ಬೇಕಾದರೂ ನೋಡಬಹುದು.

ಈಗಾಗಲೇ ಕನ್ನಡದಲ್ಲಿ ಇದೊಂದು ಟ್ರೆಂಡ್‌ ಸದ್ದಿಲ್ಲದೆ ಶುರುವಾಗಿದ್ದು, ಕೆಲವು ವೆಬ್‌ ಸೀರೀಸ್‌ಗಳನ್ನು ಯೂಟ್ಯೂಬ್‌ ಮತ್ತು ಫೇಸ್‌ಬುಕ್‌ಗಳಲ್ಲಿ ನೋಡಬಹುದು. 

 ಸಾಗರ್‌ ಪುರಾಣಿಕ್‌ ನಿರ್ದೇಶನದ “ಬೈ2ಬೆಂಗಳೂರು’, ಪ್ರತಾಪ್‌ ಕುಮಾರ್‌ ಎನ್ನುವವರು ನಿರ್ದೇಶಿಸುತ್ತಿರುವ “ಜಾಯಿಂಟ್‌ ಫ್ಯಾಮಿಲಿ’, ಅನೀಶ್‌ ತೇಜೇಶ್ವರ್‌ ನಿರ್ದೇಶನದ “ಬೆಂಗಳೂರು ಕ್ವೀನ್ಸ್‌’, ಪತ್ರಕರ್ತ ರವೀಂದ್ರ ಜೋಷಿ ನಿರ್ದೇಶಿಸುತ್ತಿರುವ “ಹಿಂಗಾದ್ರ ಹ್ಯಾಂಗ’,  “ಹತ್ತಿರದ ದಾರಿ’ ಮುಂತಾದ ಕಾರ್ಯಕ್ರಮಗಳು ಈಗಾಗಲೇ ವೆಬ್‌ನಲ್ಲಿ ಸಿಗುತ್ತದೆ. ಇನ್ನು ಆರ್‌ಜೆ ಪ್ರದೀಪ ತಮ್ಮ ಸಖತ್‌ ಸ್ಟುಡಿಯೋ ಮೂಲಕ “ಲೂಸ್‌ ಕನೆಕ್ಷನ್‌’ ಎಂಬ ಕಾರ್ಯಕ್ರಮವನ್ನು ಇತ್ತೀಚೆಗೆ ಶುರು ಮಾಡಿದ್ದಾರೆ. ವಿನಾಯಕ್‌ ಜೋಷಿ ನಿರ್ದೇಶನದ “ಜೋಶಿಲೆ’ ನವೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ಪ್ರತಿ ಸರಣಿಯಲ್ಲಿ ಕೆಲವು ನಿಮಿಷಗಳ ಒಂದು ಕಂತಿರುತ್ತದೆ ಮತ್ತು ವಾರದ ಯಾವುದೋ ಒಂದು ದಿನ ಅದನ್ನು ಇಂಟರ್‌ನೆಟ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. ಆ ನಂತರ ಯಾವಾಗ ಬೇಕಾದರೂ ಇಂಟರ್‌ನೆಟ್‌ನಲ್ಲಿ ನೋಡಬಹುದು.

ಈ ತರಹದ ಕಾರ್ಯಕ್ರಮಗಳಿಗೆ ನಿರ್ಮಾಪಕರಿರುವುದಿಲ್ಲ, ಪ್ರಾಯೋಜಕರೇ ನಿರ್ಮಾಪಕರು ಅಥವಾ ಅನ್ನದಾತರು ಎನ್ನುತ್ತಾರೆ ವಿನಾಯಕ್‌ ಜೋಷಿ. ಅವರು “ಜೋಶಿಲೇ’ ಎಂಬ ಕ್ರೀಡಾ ಸರಣಿಯನ್ನು ಸದ್ಯದಲ್ಲೇ ಶುರು ಮಾಡಲಿದ್ದಾರೆ. ಓಡುತ್ತಲೇ ಕಥೆ ಹೇಳುವ ವಿಭಿನ್ನ ಪ್ರಯತ್ನವೊಂದನ್ನು ಮಾಡುತ್ತಿದ್ದಾರೆ. “ಈ ವೆಬ್‌ ಸೀರೀಸ್‌ಗೆ ನಿರ್ಮಾಪಕರು ಎನ್ನುವುದಕ್ಕಿಂತ, ಹೆಚ್ಚು ಹೆಚ್ಚು ಜನ ನೋಡುತ್ತಿದ್ದಂತೆಯೇ, ಹಿಟ್ಸ್‌ಗಳು ಆಗುತ್ತಿದ್ದಂತೆಯೇ ಜಾಹೀರಾತುದಾರರು ಬರುತ್ತಾರೆ. ಅದರಿಂದ ಈ ಸರಣಿ ಮಾಡುವವರಿಗೆ ಒಂದಿಷ್ಟು ದುಡ್ಡು ಸಿಗುತ್ತದೆ. ಈ ಸರಣಿ ಯಾಕೆ ಮುಖ್ಯ ಎಂಬುದಕ್ಕೂ ಕಾರಣಗಳಿವೆ. ಪ್ರಮುಖವಾಗಿ ಇಲ್ಲಿ ಕಥೆ ಬಹಳ ಮುಖ್ಯ. ಜೊತೆಗೆ ಸ್ವಾತಂತ್ರ್ಯವಿದೆ. ಹಾಗಾಗಿ ಒಂದೊಳ್ಳೆಯ ಕಂಟೆಂಟ್‌ ಇದ್ದರೆ, ಅದನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಬಹುದು. ಬರೀ ಕರ್ನಾಟಕದಲ್ಲಿರುವವರಷ್ಟೇ ಅಲ್ಲ, ಜಗತ್ತಿನಾದ್ಯಂತ ಇರುವ ಕನ್ನಡಿಗರನ್ನು ತಲುಪಬಹುದು. ಇನ್ನು ನೋಡುಗರಿಗೂ ಅದು ಉಚಿತ. ಇವತ್ತು ಒಂದು ಕುಟುಂಬ ಸಿನಿಮಾಗೆ ಹೋದರೆ ಎರಡರಿಂದ ಮೂರು ಸಾವಿರ ರೂಪಾಯಿ ಬೇಕು. ಜೊತೆಗೆ ಐದು ಗಂಟೆ ಸಮಯ ಬೇಕು. ಆದರೆ, ಈ ವೆಬ್‌ ಸರಣಿಯನ್ನು ಎಲ್ಲಿ ಬೇಕಾದರೂ ನೋಡಬಹುದು. ಹಾಗಾಗಿ ಇದು ಅವರಿಗೂ ಸುಲಭ. ಇನ್ನು ಕಲಾವಿದರ ವಿಷಯವಾಗಿ ಹೇಳುವುದಾದರೆ, ನನ್ನ ತರಹ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎನ್ನುವಂತಹ ಹಲವು ಕಲಾವಿದರಿದ್ದಾರೆ. ಅವರಿಗೆ ತೊಡಗಿಸಿಕೊಳ್ಳುವುದಕ್ಕೆ ಒಂದೊಳ್ಳೆಯ ವೇದಿಕೆ ಇದೆ. ಈ ತರಹದ ನಿರ್ಮಾಣಕ್ಕೆ ಹೆಚ್ಚು ದುಡ್ಡು ಬೇಕಿಲ್ಲ. ಅದೇ ತರಹ ಇದರಿಂದ ದೊಡ್ಡ ದೊಡ್ಡ ಲಾಭವೂ ಇಲ್ಲ. ಆದರೆ, ಮುಂದೊಂದು ದಿನ ಹೆಚ್ಚು ಜನರನ್ನು ತಲುಪುವುದರ ಜೊತೆಗೆ, ದುಡ್ಡನ್ನೂ ನೋಡಬಹುದು’ ಎನ್ನುತ್ತಾರೆ ವಿನಾಯಕ್‌.ಈ ಕುರಿತು ಮಾತನಾಡುವ ಆರ್‌ಜೆ ಪ್ರದೀಪ್‌, “ಈಗ ಪ್ರತಿಯೊಬ್ಬರ ಬಳಿಯೂ ಮೊಬೈಲ್‌ ಇದೆ ಮತ್ತ ಪ್ರತಿಯೊಬ್ಬರೂ ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಅದರಲ್ಲೂ ಇಂಟರ್‌ನೆಟ್‌ನಲ್ಲಿ ಸಾಕಷ್ಟು ಸಮಯ ಇರುತ್ತಾರೆ. ಅಂತಹವರನ್ನು ತಲುಪುವುದಕ್ಕೆ ಇದೊಂದು ಒಳ್ಳೆಯ ವೇದಿಕೆ. ಜನ ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ನೋಡಬಹುದು ಎನ್ನುವುದು ಇದರ ದೊಡ್ಡ ಪ್ರಯೋಜನ’ ಎನ್ನುತ್ತಾರೆ ಪ್ರದೀಪ್‌.

Advertisement

ಭುವನ್‌

Advertisement

Udayavani is now on Telegram. Click here to join our channel and stay updated with the latest news.

Next