ವಿಜಯಪುರ: ರಾಜ್ಯದಲ್ಲಿ ನೂತನ ಪ್ರಸಾಸಿ ನೀತಿ ಜಾರಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿಯೇ ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳ ಪ್ರವಾಸ ಆರಂಭಿಸಿದ್ದು, ಬರುವ ಎರಡು ತಿಂಗಳಲ್ಲಿ ಕರ್ನಾಟಕ ನೂತನ ಪ್ರವಾಸಿ ನೀತಿ ಜಾರಿಗೊಳಿಸುವುದಾಗಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಪ್ರವಾಸಿ ನೀತಿ ಜಾರಿಯಲ್ಲಿ ಕೃಷಿ ಪ್ರವಾಸೋದ್ಯಮ, ಪಾರಂಪರಿಕ ಪ್ರವಾಸೋದ್ಯಮ, ಶೈಕ್ಷಣಿಕ ಪ್ರವಾಸೋದ್ಯಮ, ನಗರದವರ ಬೇಸರ ಕಳೆಯುವ ವೀಕ್ ಎಂಡ್ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಬಡ-ಮಧ್ಯಮ ವರ್ಗದ ಅಭ್ಯುಯಕ್ಕೆ ಪೂರಕ ಪ್ರವಾಸೋಮದ್ಯಮ ಸೇರಿದಂತೆ ಹಲವು ಆಯಾಮಗಳೊಂದಿಗೆ ನೂತನ ಪ್ರವಾಸಿ ನೀತಿ ಜಾರಿಗೆ ಬರಲಿದೆ ಎಂದರು.
ನೂತನ ಪ್ರವಾಸಿ ನೀತಿ ಜಾರಿಗೆ ಸಿದ್ಧತೆ ನಡೆದಿದ್ದರೂ, ಸಮಗ್ರ ಮಾಹಿತಿಯೊಂದಿಗೆ ತಜ್ಞರು, ಆಸಕ್ತರು, ಇತಿಹಾಸಜ್ಞರು, ಪ್ರವಾಸಿ ಅನುಭವಿಗಳು, ಉದ್ಯಮಿಗಳು, ಸ್ಥಳೀಯರ ಭಾವನೆಗಳನ್ನು ಆಲಿಸಲು ಸರ್ಕಾರ ಮುಂದಾಗಿದೆ. ರಾಜ್ಯ ಎಲ್ಲ ಜಿಲ್ಲೆಗಳಿಂದ ಮಾಹಿತಿ ಸಂಗ್ರಹಿಸಲು ನಮ್ಮ ಸ್ಮಾರಕ ದರ್ಶನ ಹಾಗೂ ಸಂರಕ್ಷಣೆಗಾಗಿ ಪ್ರವಾಸ ಎಂಬ ಯೋಜನೆಯೊಂದಿಗೆ ರಾಜ್ಯದ ಜಿಲ್ಲಾ ಮಟ್ಟದ ಪ್ರವಾಸ ಆರಂಭಿಸಿದ್ದೇನೆ ಎಂದರು.
ಪ್ರತಿ ಜಿಲ್ಲೆಗಳಲ್ಲಿ ಥಳೀಯ ತಜ್ಞರು, ಅಧಿಕಾರಿಗಳು ಸೇರಿದಂತೆ ವಿವಿಧ ಆಯಾಮಗಳೊಂದಿಗೆ ಚರ್ಚಿಸಲು ಸಭೆ ನಡೆಸಿ, ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಪ್ರಕ್ರಿಯೆ ಮುಗಿಯುತ್ತಲೇ ಇನ್ನು ಎರಡು ತಿಂಗಳಲ್ಲಿ ರಾಜ್ಯದಲ್ಲಿ ನೂತನ ಪ್ರವಾಸಿ ನೀತಿ ಜಾರಿಗೆ ಬರಲಿದೆ. ಇದರಿಂದ ಕರ್ನಾಟಕದಲ್ಲಿ ಪ್ರವಾಸೋದ್ಯಮ ಬಲವರ್ಧನೆಗೆ ಪೂರಕ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.
ಭಾರತೀಯ ಪುರಾತತ್ವ ಇಲಾಖೆ, ಕರ್ನಾಟಕ ಪ್ರಾಚ್ಯವಸ್ತು ಇಲಾಖೆ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳ ಮಧ್ಯೆ ಸಮನ್ವಯದ ಕೊರತೆ ಇದೆ. ಇದನ್ನು ಸಾಧಿಸಲು ಅಧಿಕಾರಿಗಳ ಸಭೆ ನಡೆಸಿ, ಅಗತ್ಯ ನಿರ್ದೇಶನಗಳನ್ನು ನೀಡಲಾಗುತ್ತಿದೆ ಎಂದರು.
ಇದನ್ನೂ ಓದಿ: Airport ಮುಂದುವರೆದ ಕಾಮಗಾರಿಗೆ ಅಡ್ಡಿ: ಪೊಲೀಸರು, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ