ಹೊಸದಿಲ್ಲಿ : ಗೋಮಾಂಸ ಭಕ್ಷಣೆ ವಿವಾದಕ್ಕೆ ಕೊನೆಯೇ ಇಲ್ಲವೇನೋ ಎಂಬಂತೆ ಹೊಸ ಪ್ರವಾಸೋದ್ಯಮ ಸಚಿವ ಅಲ್‌ಫೋನ್ಸ್ ಕಣ್ಣನಾಥನಮ್ ಅವರು ವಿದೇಶೀ ಪ್ರವಾಸಿಗರಿಗೆ “ನೀವು ನಿಮ್ಮ ದೇಶದಲ್ಲಿ ಗೋಮಾಂಸ ತಿಂದ ಬಳಿಕವೇ ಭಾರತಕ್ಕೆ ಬನ್ನಿ’ ಎಂಬ ವಿವಾದಾತ್ಮಕ ಸಲಹೆಯನ್ನು ನೀಡಿದ್ದಾರೆ.
ಭಾರತದ ಹಲವು ರಾಜ್ಯಗಳಲ್ಲಿ ಗೋಮಾಂಸ ಭಕ್ಷಣೆಗೆ ಇರುವ ನಿರ್ಬಂಧಗಳು ಮತ್ತು ದೇಶಾದ್ಯಂತ ಜಾಲ್ತಿಯಲ್ಲಿರುವ ತಥಾಕಥಿತ ಗೋರಕ್ಷಕರ ಗೂಂಡಾಗಿರಿಯ ದುಷ್ಪರಿಣಾಮ ದೇಶದ ಪ್ರವಾಸೋದ್ಯಮದ ಮೇಲೆ ಬಿದ್ದಿದೆಯೇ ಎಂಬ ಪ್ರಶ್ನೆಗೆ 1979ರ ಕೇರಳ ಕೇಡರ್ ಅಧಿಕಾರಿಯಾಗಿದ್ದ ಕಣ್ಣನಾಥಮ್ ಅವರು “ವಿದೇಶೀ ಪ್ರವಾಸಿಗರು ತಮ್ಮ ದೇಶದಲ್ಲಿ ಗೋಮಾಂಸ ತಿಂದ ಬಳಿಕವೇ ಭಾರತಕ್ಕೆ ಬರಲಿ’ ಎಂದು ಹೇಳಿದರು.
ಭುವನೇಶ್ವರದಲ್ಲಿ ನಡೆದಿದ್ದ ಭಾರತೀಯ ಪ್ರವಾಸ ನಿರ್ವಾಹಕರ ಸಂಘದ 33ನೇ ವಾರ್ಷಿಕ ಸಮಾವೇಶದಲ್ಲಿ ನೂತನ ಪ್ರವಾಸೋದ್ಯಮ ಸಚಿವ ಕಣ್ಣನಾಥನಮ್ ಅವರು ಭಾಷಣ ಮಾಡಿದರು.
ಕೇರಳದಲ್ಲಿ ಗೋಮಾಂಸ ಭಕ್ಷಣೆ ಮುಂದುವರಿಯಲಿದೆ ಎಂದು ಸಚಿವ ಕಣ್ಣನಾಥನಮ್ ಅವರು ತಮ್ಮ ಈ ಮೊದಲಿನ ಹೇಳಿಕೆಗೆ ವ್ಯತಿರಿಕ್ತವಾಗಿ ಹೇಳಿದರು.
ರಾಜಕಾರಣಿಯಾಗಿ ಪರಿವರ್ತಿತರಾಗಿರುವ ಸಚಿವ ಕಣ್ಣನಾಥನಮ್ ಅವರು “ಬಿಜೆಪಿ ಎಂದೂ ಗೋಮಾಂಸ ತಿನ್ನಬಾರದೆಂದು ಹೇಳಿಲ್ಲ. ಗೋವೆಯ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಅವರು ತಮ್ಮ ರಾಜ್ಯದಲ್ಲಿ ಗೋಮಾಂಸ ಭಕ್ಷಣೆಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಹೇಳಿರುವಂತೆಯೇ ಕೇರಳದಲ್ಲಿ ಕೂಡ ಗೋಮಾಂಸ ಭಕ್ಷಣೆ ಅವಕಾಶ ಮುಂದುವರಿಯಲಿದೆ’ ಎಂದು ಹೇಳಿದರು.