Advertisement

ಕಡೇಶ್ವಾಲ್ಯ ಗ್ರಾ.ಪಂ.ಗೆ ಹೊಸ ಸ್ಪರ್ಶ

09:38 AM Apr 21, 2022 | Team Udayavani |

ಬಂಟ್ವಾಳ: ನೀವು ಕಡೇಶ್ವಾಲ್ಯ ಗ್ರಾ.ಪಂ. ಕಚೇರಿಯನ್ನು ಪ್ರವೇಶಿಸುತ್ತಿದ್ದಂತೆ ಯಾವುದೋ ಒಂದು ದೊಡ್ಡ ಮನೆಗೆ ಪ್ರವೇಶಿಸಿದ ಅನುಭವವನ್ನು ನೀಡುತ್ತದೆ. ಇದಕ್ಕೆ ಕಾರಣ ಗ್ರಾ.ಪಂ. ಕಚೇರಿಯ ಆವರಣದಲ್ಲಿರುವ ಉದ್ಯಾ ನವನ. ಉದ್ಯೋಗ ಖಾತರಿ ಯೋಜನೆಯ ಮೂಲಕ ಸುಮಾರು 5 ಸೆಂಟ್ಸ್‌ ವಿಸ್ತೀರ್ಣದಲ್ಲಿ ಅನುಷ್ಠಾನ ಗೊಂಡಿರುವ ಉದ್ಯಾನವನ ಗ್ರಾ.ಪಂ.ಗೆ ಹೊಸ ಮೆರಗು ನೀಡುತ್ತಿದೆ.

Advertisement

ಈಗಾಗಲೇ ಅತ್ಯುತ್ತಮ ಗ್ರಂಥಾಲಯ ಅನುಷ್ಠಾನದ ಮೂಲಕ ಪಂಚಾಯತ್‌ ರಾಜ್‌ ಇಲಾಖೆಯ ಮೆಚ್ಚುಗೆ ಪಡೆದಿರುವ ಕಡೇಶ್ವಾಲ್ಯ ಗ್ರಾ.ಪಂ. ಇದೀಗ ಸುಂದರವಾದ ಉದ್ಯಾನವನದ ಮೂಲಕ ಎಲ್ಲರ ಗಮನ ಸೆಳೆಯಲಿದೆ. ಬಂಟ್ವಾಳ ತಾಲೂಕಿನ ಎಲ್ಲ 58 ಗ್ರಾ.ಪಂ. ಗಳ ಪೈಕಿ ಉದ್ಯಾನವನ ಹೊಂದಿರುವ ಏಕೈಕ ಗ್ರಾ.ಪಂ. ಎಂಬ ಹೆಗ್ಗಳಿಕೆಯನ್ನೂ ಕಡೇಶ್ವಾಲ್ಯ ಪಡೆದಿದೆ ಎಂದು ಬಂಟ್ವಾಳ ತಾ.ಪಂ. ಉದ್ಯೋಗ ಖಾತರಿ ಯೋಜನೆ ಸಿಬಂದಿ ತಿಳಿಸಿದ್ದಾರೆ.

ಅಮೃತ ಉದ್ಯಾನವನ

ಕಡೇಶ್ವಾಲ್ಯ ಗ್ರಾ.ಪಂ. 2021-22ನೇ ಸಾಲಿನ ಅಮೃತ ಯೋಜನೆಗೆ ಆಯ್ಕೆ ಯಾಗಿದ್ದು, ಈ ಯೋಜನೆಯ ಮಾರ್ಗ ಸೂಚಿಯಲ್ಲಿ ಉದ್ಯಾನವನ ನಿರ್ಮಿಸು ವುದು ಕಡ್ಡಾಯ. ಹೀಗಾಗಿ ಪ್ರಸ್ತುತ ರಚನೆಗೊಂಡಿರುವ ಉದ್ಯಾ ನವನಕ್ಕೆ ಅಮೃತ ಉದ್ಯಾನವನ ಎಂಬ ಹೆಸರನ್ನಿಡಲಾಗಿದೆ. ಉದ್ಯೋಗ ಖಾತರಿ ಯೋಜನೆಯ ಮೂಲಕ ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ ಅನುಷ್ಠಾನ ಗೊಂಡಿರುವ ಉದ್ಯಾನವನಕ್ಕೆ 1 ಲಕ್ಷ ರೂ. ವೆಚ್ಚದಲ್ಲಿ ಇಂಟರ್‌ಲಾಕ್‌ ಅಳವಡಿಸಲಾಗಿದೆ.

ಸುಮಾರು 5 ಲಕ್ಷ ರೂ. ಅನುದಾನವನ್ನು ವ್ಯಯಿಸಲಾಗಿದೆ. ಜತೆಗೆ ಸುಮಾರು 1.50 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್‌ ಹೈಮಾಸ್ಟ್‌ ದೀಪವನ್ನೂ ಅಳವಡಿಸಲಾಗಿದೆ. ಗ್ರಾ.ಪಂ. ಕಚೇರಿ ಹಾಗೂ ಗ್ರಂಥಾಲಯದ ಮಧ್ಯದಲ್ಲಿ ಈ ಉದ್ಯಾನವನ ರಚನೆಗೊಂಡಿದ್ದು, ಈ ಉದ್ಯಾನವನದಲ್ಲಿ ಕಲ್ಲು ಬೆಂಚು ಅಳವಡಿಸುವ ಕಾರ್ಯ ನಡೆಯಲಿದೆ.

Advertisement

24 ಗಂಟೆಯೂ ತೆರೆದಿರುವ ಗ್ರಂಥಾಲ ಯದಿಂದ ಪುಸ್ತಕ ತಂದು ಓದುವುದಕ್ಕೂ ಅನುಕೂಲವಾಗಲಿದೆ. ಜತೆಗೆ ಇಂಟರ್‌ ಲಾಕ್‌ ಅಳವಡಿಸಿ ವಾಕಿಂಗ್‌ ಟ್ರಾಫಿಕ್‌, ಲಾನ್‌ ಹುಲ್ಲು, ಹೂವಿನ ಗಿಡಗಳನ್ನು ನೆಡಲಾಗಿದೆ. ಈ ಉದ್ಯಾನವನವನ್ನು ಇನ್ನೂ ಹೆಚ್ಚಿನ ಅಭಿವೃದ್ಧಿ ಪಡಿಸುವ ಕುರಿತು ಗ್ರಾ.ಪಂ. ಚಿಂತನೆ ನಡೆಸಿದ್ದು, ಹಣ್ಣಿನ ಗಿಡ ನೆಡುವ ಯೋಜನೆ ಇದೆ ಎಂದು ಮೂಲಗಳು ತಿಳಿಸಿವೆ.

ಗ್ರಾ.ಪಂ.ಗಳಿಗೆ ಸೂಚನೆ

ಅಮೃತ ಯೋಜನೆಗಳಿಗೆ ಆಯ್ಕೆಯಾದ ಗ್ರಾ.ಪಂ.ಗಳ ಆವರಣದಲ್ಲಿ ಕಡ್ಡಾಯವಾಗಿ ಉದ್ಯಾವನ ನಿರ್ಮಿಸುವುದಕ್ಕಾಗಿ ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಕೆಲವು ಗ್ರಾ.ಪಂ.ಗಳು ಕಾರ್ಯಪ್ರವೃತ್ತವಾಗಿವೆ. ಕಡೇಶ್ವಾಲ್ಯ ಗ್ರಾ.ಪಂ.ನ ರೀತಿಯಲ್ಲಿ ಇತರ ಕಡೆಗಳಲ್ಲೂ ಸುಸಜ್ಜಿತ ಉದ್ಯಾನವನ ನಿರ್ಮಾಣಗೊಳ್ಳಲಿದೆ. -ರಾಜಣ್ಣ, ಕಾರ್ಯನಿರ್ವಹಣಾಧಿಕಾರಿ, ಬಂಟ್ವಾಳ ತಾ.ಪಂ.

ಇನ್ನೂ ಹೆಚ್ಚಿನ ಅಭಿವೃದ್ದಿ

ಅಮೃತ ಯೋಜನೆಗೆ ಆಯ್ಕೆ ಯಾಗಿರುವ ನಮ್ಮ ಗ್ರಾ.ಪಂ. ಆವರಣದಲ್ಲಿರುವ ಈ ಗಾರ್ಡನ್‌ ಇಲ್ಲಿನ ಗ್ರಂಥಾಲಯದ ಓದುಗರಿಗೂ ಅನುಕೂಲವಾಗಲಿದೆ. ದಿನದ 24 ಗಂಟೆಯೂ ಗ್ರಂಥಾಲಯ ಹಾಗೂ ಗಾರ್ಡನ್‌ಗೆ ಪ್ರವೇಶವಿದೆ. ನಮ್ಮ ಯುವಶಕ್ತಿ ಕಡೇಶ್ವಾಲ್ಯ ಸಂಘಟನೆ ಇಂತಹ ಕಾರ್ಯಕ್ಕೆ ಪ್ರೇರಣೆ ನೀಡಿದ್ದು, ಉದ್ಯಾನವನವನ್ನು ಇನ್ನೂ ಅಭಿವೃದ್ಧಿ ಪಡಿಸುವ ಯೋಚನೆ ಇದೆ. -ಸುರೇಶ್‌ ಬನಾರಿ, ಅಧ್ಯಕ್ಷರು, ಕಡೇಶ್ವಾಲ್ಯ ಗ್ರಾ.ಪಂ.

ಎನ್‌ಆರ್‌ಇಜಿ ಅನುದಾನ ಬಳಕೆ

ಅಮೃತ ಯೋಜನೆಯ ಮಾರ್ಗಸೂಚಿಯಲ್ಲಿ ಕಡ್ಡಾಯವಾಗಿ ಉದ್ಯಾನವನ ಇರಬೇಕು ಎಂಬ ಸೂಚನೆ ಇದ್ದು, ಅದರಂತೆ ಉದ್ಯಾನವನ ಮೂಡಿಬಂದಿದೆ. ಉದ್ಯೋಗ ಖಾತರಿ ಯೋಜನೆ ಜತೆಗೆ ಇಂಟರ್‌ ಲಾಕ್‌ಗೆ ಸ್ವಂತ ನಿಧಿಯನ್ನು ಬಳಕೆ ಮಾಡಿಕೊಂಡು ಒಟ್ಟು ಸುಮಾರು 5 ಲಕ್ಷ ರೂ.ವೆಚ್ಚದಲ್ಲಿ ಉದ್ಯಾನವನ ನಿರ್ಮಾಣಗೊಂಡಿದೆ. -ಸುನಿಲ್‌ ಕುಮಾರ್‌, ಪಿಡಿಒ, ಕಡೇಶ್ವಾಲ್ಯ ಗ್ರಾ.ಪಂ

ಕಿರಣ್ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next