Advertisement

ನಗರದ ಸಮಗ್ರ ಅಭಿವೃದ್ಧಿಗೆ ಪೂರಕ

05:15 AM Feb 23, 2019 | |

ಮಹಾನಗರ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಚ್ಚುವರಿ ವಿಮಾನಗಳ ಹಾರಾಟಕ್ಕೆ ಅನುಕೂಲ ಕಲ್ಪಿಸುವ ಜತೆಗೆ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿ ಸುವ ಉದ್ದೇಶದಿಂದ ಅತ್ಯಾಧುನಿಕ ಸೇವಾ- ಸೌಕರ್ಯ ಒಳಗೊಂಡ ಇಂಟಿ ಗ್ರೇಟೆಡ್‌ ಮಾದರಿ ಹೊಸ ಟರ್ಮಿನಲ್‌ ನಿರ್ಮಾ ಣಕ್ಕೆ ಇದೀಗ ಚಾಲನೆ ದೊರೆತಿದೆ.

Advertisement

ನಗರಕ್ಕೆ ಆರ್ಥಿಕ ಉತ್ತೇಜನ ನೀಡುವ ಮೂಲಕ ಕಡಲನಗರಿಯ ಹಿರಿಮೆಯನ್ನು ಹೆಚ್ಚಿಸುವಲ್ಲಿ ಈ ಟರ್ಮಿನಲ್‌ ನಿರ್ಮಾಣ ಸಹಿತ ಏರ್‌ಪೋರ್ಟ್‌ ಅನ್ನು ಮೇಲ್ದರ್ಜೆಗೇರಿಸುತ್ತಿರುವುದು ಪೂರಕವಾಗಲಿದೆ. ಪ್ರಸ್ತುತ ಇರುವ ಟರ್ಮಿನಲ್‌ ಅನ್ನು 132.24 ಕೋ.ರೂ. ವೆಚ್ಚದಲ್ಲಿ ವಿಸ್ತರಿಸುವ ಮೂಲಕ ಇಂಟಿಗ್ರೇಟೆಡ್‌ ಟರ್ಮಿನಲ್‌ ಆಗಿ ಪರಿವರ್ತಿಸಲಾಗುವುದು. ಇದು 2020ರ ವೇಳೆಗೆ ಪೂರ್ಣಗೊಳ್ಳಲಿದೆ. ಪ್ರಸ್ತುತ ಈ ವಿಮಾನ ನಿಲ್ದಾಣದ ಟರ್ಮಿನಲ್‌ ಕಟ್ಟಡ ವಿಸ್ತೀರ್ಣ 19,500 ಚದರ ಮೀಟರ್‌ ಆಗಿದ್ದು ಹೆಚ್ಚುವರಿಯಾಗಿ 11,343 ಚ.ಮೀ. ಸೇರ್ಪಡೆಗೊಳ್ಳಲಿದೆ. ಇದರ ಪ್ರಾರಂಭಿಕ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, 2020ರ ವೇಳೆಗೆ ಎರಡನೇ ಟರ್ಮಿನಲ್‌ ಸಿದ್ಧವಾಗಲಿದೆ. ಯೋಜನೆ ಪೂರ್ಣಗೊಂಡಾಗ ನಿಲ್ದಾಣದ ಒಟ್ಟು ವಿಸ್ತೀರ್ಣ 30,843 ಚ.ಮೀಟರ್‌ಗೆ ಏರಿಕೆಯಾಗಲಿದೆ.

ಈಗ ಒಂದೇ ಟರ್ಮಿನಲ್‌ ಇರುವುದರಿಂದ 730 ಜನರು ಮಾತ್ರ ನಿಲ್ಲಲು ಅವಕಾಶವಿದೆ. ಆದರೆ ಹೊಸ ಟರ್ಮಿ ನಲ್‌ನಲ್ಲಿ 1,000 ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯ ಹೊಂದಲಿದ್ದು, ಈಗಿನ ಒತ್ತಡ ತುಸು ಕಡಿಮೆಯಾಗಲಿದೆ. ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ ಹೊಸ ಟರ್ಮಿನಲ್‌ ಹೆಚ್ಚು ಉಪಯೋಗವಾಗಲಿದೆ. ವಿದೇಶಿಯರು ಮಂಗಳೂರಿಗೆ ಆಗಮಿಸುವ ಸಂದರ್ಭ ವೀಸಾ ಕುರಿತ ಪರಿಶೀ ಲನೆಗೆ ಇಲ್ಲಿ ಪ್ರತ್ಯೇಕ ಕೌಂಟರ್‌ ನಿರ್ಮಾಣವಾಗಲಿದೆ. 

ಹೆಚ್ಚುವರಿಯಾಗಿ 2 ಪ್ರಯಾಣಿಕರ ಬೋರ್ಡಿಂಗ್‌ ಬ್ರಿಡ್ಜ್ ಕೂಡ ಸಿದ್ಧಗೊಳ್ಳ ಲಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಹೆಚ್ಚುವರಿಯಾಗಿ ಎರಡು ಬ್ಯಾಗೇಜ್‌ ಕನ್ವೆಯರ್ ಹಾಗೂ ದೇಶೀಯ ಆಗಮದ ವಿಮಾನ ಪ್ರಯಾಣಿಕರಿಗಾಗಿ 1 ಬ್ಯಾಗೇಜ್‌ ಕನ್ವೆಯರ್ ನಿರ್ಮಾಣವಾಗಲಿದೆ. ಎಸ್ಕಲೇಟರ್‌, ಎಲೆ ವೇಟರ್ , ಎಟಿಎಂ, ಮನಿ ಎಕ್ಸ್‌ಚೇಂಜ್‌, ಮೀಟ್‌ ಆ್ಯಂಡ್‌ ಗ್ರೀಟ್‌ ಏರಿಯಾ ಸೇರಿದಂತೆ ಸರ್ವ ಸೌಕರ್ಯವೂ ಇಲ್ಲಿರಲಿದೆ.

ಟರ್ಮಿನಲ್‌ ವಿಸ್ತರಣೆ ಕಾಮಗಾರಿ ಪೂರ್ಣಗೊಂಡ ಬಳಿಕ ಕೆಳಗಿನ ಕಾರು ಪಾರ್ಕ್‌ ಲೆವೆಲ್‌ನಲ್ಲಿ ಪ್ರಯಾಣಿಕರ ಆಗಮನ ಹಾಲ್‌ ನಿರ್ಮಾಣವಾಗಲಿದೆ. ಮೇಲಿನ ಅಂತಸ್ತು ನಿರ್ಗಮನಕ್ಕೆ ಮೀಸಲಾಗಿರುತ್ತದೆ. ಈಗ ವರ್ಷಕ್ಕೆ 2 ಮಿಲಿಯನ್‌ ಪ್ರಯಾಣಿಕರ ಸಂಖ್ಯೆ ಇದ್ದರೆ, ಮುಂದೆ ಇದು 3 ಮಿಲಿಯನ್‌ಗೆ ಏರಬೇಕು ಎಂಬುದು ನಿಲ್ದಾಣದ ಗುರಿ. 121 ಕೋಟಿ ರೂ.ವೆಚ್ಚ ದಲ್ಲಿ ರನ್‌ವೇ ಸುರಕ್ಷತಾ ಬೇಸಿಕ್‌ ಸ್ಟ್ರಿಪ್‌ ವಿಸ್ತರಣೆ, ಪರ್ಯಾಯ ಟ್ಯಾಕ್ಸಿ ಟ್ರಾಕ್‌ ಹಂತ 2 ಯೋಜನೆ ರೂಪಿಸಲಾಗಿದೆ. ಆಗಸ್ಟ್‌ನಲ್ಲಿ ಇದು ಪೂರ್ಣಗೊಳ್ಳಲಿದೆ. ಇದು ಕಾರ್ಯಗತ ಗೊಂಡರೆ ವಿಮಾನ ನಿರ್ವಹಣಾ ಸುರಕ್ಷತೆ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ವಿಸ್ತರಣೆಯಾಗಲಿದೆ. 

Advertisement

 ಪ್ರಯಾಣಿಕರ ನಿರ್ವಹಣೆ ಸುಲಭ
ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪ್ರಯಾಣಿಕರ ಸಂದಣಿಯಿಂದ ನಿರ್ವಹಣೆ ಕಷ್ಟವಾಗಿದೆ. ಜತೆಗೆ ಅಂತಾರಾಷ್ಟ್ರೀಯ ವಿಮಾನ ಯಾನ ನಿಯಮದ ಪ್ರಕಾರ ಓರ್ವ ಪ್ರಯಾಣಿಕನಿಗೆ ನಿಗದಿತ ಸ್ಥಳಾವಕಾಶ ನಿಲ್ದಾಣದಲ್ಲಿ ಇರಬೇಕು. ಹಾಗಾಗಿ ಹೊಸ ಟರ್ಮಿನಲ್‌ ನಿರ್ಮಾಣವಾಗಲಿದೆ. ಏಕಕಾಲಕ್ಕೆ 4 ವಿಮಾನಗಳು ಬಂದರೆ ಅದರ ಪ್ರಯಾಣಿಕರನ್ನು ನಿರ್ವಹಣೆ ನಡೆಸಲು ಇದು ಸಹಕಾರಿ.
– ಎಂ.ಆರ್‌. ವಾಸುದೇವ, ಮಾಜಿ ನಿರ್ದೇಶಕರು,
ಮಂಗಳೂರು ಅಂ.ವಿಮಾನ ನಿಲ್ದಾಣ

ಪ್ರಯಾಣಿಕರಿಗೆ ಅನುಕೂಲ
ಹೊಸ ಟರ್ಮಿನಲ್‌ ನಿರ್ಮಾಣವಾದ ಬಳಿಕ ಪ್ರಯಾಣಿಕರಿಗೆ ಇನ್ನಷ್ಟು ಅವಕಾಶ ದೊರೆಯಲಿದೆ. ಸದ್ಯ ವಿಮಾನ ಪ್ರಯಾಣಿಕರನ್ನು ನಿಲ್ದಾಣದ ಮುಂಭಾಗದವರೆಗೆ ವಾಹನದಲ್ಲಿ ಕರೆದುಕೊಂಡು ಹೋಗಲು ಅವಕಾಶವಿದೆ. ಆದರೆ, ವಿಮಾನದಿಂದ ಆಗಮಿಸಿದವರು ಪಾರ್ಕಿಂಗ್‌ ಜಾಗಕ್ಕೆ ಹೋಗಲು ಸ್ವಲ್ಪ ನಡೆಯಬೇಕಾಗಿದೆ. ಇದೀಗ ಹೊಸ ಟರ್ಮಿನಲ್‌ ಆದ ಬಳಿಕ ಅಲ್ಲಿವರೆಗೆ ವಾಹನ ಆಗಮಿಸಲು ಅವಕಾಶ ಸಿಗಲಿದೆ.
– ಪಿ.ಬಿ. ಅಬ್ದುಲ್‌ ಹಮೀದ್‌,
ಅಧ್ಯಕ್ಷ, ಕೆನರಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ

ಪ್ರಯಾಣಿಕರ ಸಂಖ್ಯೆ ಮೂರು ಪಟ್ಟು ಹೆಚ್ಚಳ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2012ರಲ್ಲಿ ಇದ್ದ 7.5 ಲಕ್ಷ ಪ್ರಯಾಣಿಕರ ಸಂಖ್ಯೆ 2017-18ನೇ ಸಾಲಿನಲ್ಲಿ 23.5 ಲಕ್ಷಕ್ಕೇರಿದ್ದು ಮೂರು ಪಟ್ಟು ಏರಿಕೆಯಾಗಿತ್ತು. 2016-17ರಲ್ಲಿದ್ದ 8.67 ಮೆ. ಟನ್‌ ಕಾರ್ಗೊ ನಿರ್ವಹಣೆ 2017-18ರಲ್ಲಿ 2338 ಮೆ.ಟನ್‌ ಗೇರಿದ್ದು ನೂರಕ್ಕೂ ಅಧಿಕ ಪಟ್ಟು ಹೆಚ್ಚಳವಾಗಿದೆ. ಪ್ರಸಕ್ತ ಅರ್ಥಿಕ ಸಾಲಿನಲ್ಲಿ ಇದು 4,000 ಮೆ. ಟನ್‌ ಗೇರುವ ನಿರೀಕ್ಷೆ ಇದೆ. ವಿಮಾನ ನಿಲ್ದಾಣವು ಈಗ ಗಂಟೆಗೆ 13 ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಆದರೆ, ರನ್‌ವೇ ವಿಸ್ತಿರಣೆ, ಪರ್ಯಾಯ ಟ್ಯಾಕ್ಸಿ ಟ್ರಾಕ್‌ ಮುಂತಾದ ಹೊಸ
ತಂತ್ರಜ್ಞಾನ ಅಳವಡಿಕೆಯಿಂದಾಗಿ ಭವಿಷ್ಯದಲ್ಲಿ ಗಂಟೆಗೆ 20 ವಿಮಾನಗಳು ಹಾರಾಟ ನಡೆಸಬಹುದು. ಕಣ್ಣೂರು ಏರ್‌ಪೋರ್ಟ್‌ ಆಗಿದ್ದರೂ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ ಎಂಬುದು ವಿಮಾನ ನಿಲ್ದಾಣ ಪ್ರಾಧಿಕಾರದ ಅಭಿಪ್ರಾಯ.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next