ನೆಲಮಂಗಲ: ಜಗತ್ತಿನಲ್ಲಿ ಅಭಿವೃದ್ಧಿ ಹೊಂದಿರುವ ದೇಶಗಳ ಜೊತೆ ಸ್ಪರ್ಧೆ ನಡೆಸಲು ಹೊಸ ತಂತ್ರಜ್ಞಾನ ಅನಿವಾರ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೊಸ ಮಾದರಿ ತಯಾರಿಸಿದ್ದಾರೆ ಎಂದು ಡಯಟ್‌ನ ಜಿಲ್ಲಾ ನೋಡಲ್ ಅಧಿಕಾರಿ ಜಿ.ಎಚ್. ಶಶಿಧರ್ ತಿಳಿಸಿದರು. ಪಟ್ಟಣದ ಸುಭಾಷ್ ನಗರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಡಯಟ್‌ನಿಂದ ಆಯೋಜಿಸಲಾಗಿದ್ದ ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ ನಡೆಸಲಾಯಿತು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ವಿದ್ಯಾರ್ಥಿಗಳಲ್ಲಿರುವ ವಿಜ್ಞಾನ ಹಾಗೂ ತಂತ್ರಜ್ಞಾನದ ಬದಲಾವಣೆಯನ್ನು ಸಮಾಜಕ್ಕೆ ಪರಿಚಯಿಸುವ ಒಂದು ವೇದಿಕೆಯನ್ನು ಶಿಕ್ಷಣ ಇಲಾಖೆ ಹಾಗೂ ಡಯಟ್ ಒದಗಿಸುತ್ತಿದೆ. ಈ ಹಿಂದೆ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ತಾಲೂಕಿನಲ್ಲಿ ನೋಡಿದ್ದೇವೆ.
ಇನ್ನೂ ಹೆಚ್ಚು ವಿದ್ಯಾರ್ಥಿಗಳು ಸಾಧಕರಾಗಲು ಸರ್ಕಾರ ಉತ್ತಮ ಅವಕಾಶ ರೂಪಿಸಿದೆ ಎಂದರು. ಡಯಟ್ ಡಿಡಿಪಿಐ ನಾಗಮಣಿ ಮಾತನಾಡಿ, ಮಕ್ಕಳ ಸೃಜನಶೀಲತೆಯಿಂದ ಕಲಿಕೆ ಜ್ಞಾನ ಹೆಚ್ಚಾಗಿ ಶಿಕ್ಷಣದ ಗುಣಮಟ್ಟ ಹೆಚ್ಚುತ್ತದೆ. ವಿದ್ಯಾರ್ಥಿಗಳು ಪಠ್ಯದ ಶಿಕ್ಷಣದ ಜೊತೆ ವಿಜ್ಞಾನ ತಂತ್ರಜ್ಞಾನ ನೂತನ ಅನ್ವೇಷಣೆ ಮಾಡಿದರೆ ಸಮಾಜದಲ್ಲಿ ಸಾಧಕರಾಗಲು ಸಾಧ್ಯವಾಗುತ್ತದೆ ಎಂದರು.
48 ಮಾದರಿಗಳು: ಜಿಲ್ಲೆಯಯಿಂದ ಒಟ್ಟು 48 ತಂಡಗಳ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು 6 ವಿಭಾಗಗಳಾದ ಸ್ವತ್ಛತೆ ಆರೋಗ್ಯ, ಕೈಗಾರಿಕೆ ಅಭಿವೃದ್ಧಿ, ಸಂಪನ್ಮೂಲ ನಿರ್ವಹಣೆ, ಭವಿಷ್ಯದಲ್ಲಿ ಸಾರಿಗೆ ಸಂಪತ್ತು, ಸುಸ್ಥಿರ ಕೃಷಿ ಪದ್ಧತಿ, ಗಣಿತ ಮಾದರಿಯಲ್ಲಿ 48 ಮಾದರಿಗಳನ್ನು ಪ್ರದರ್ಶಿಸಿದರು.
ಸರ್ಕಾರಿ ಶಾಲೆಗೆ ಬಹುಮಾನ: ಜಿಲ್ಲಾ ಮಟ್ಟದ ವಿಜ್ಞಾನ ಹಾಗೂ ತಂತ್ರಜ್ಞಾನ ಮಾದರಿ ವಸ್ತು ಪ್ರದರ್ಶನದಲ್ಲಿ ತಾಲೂಕಿನ ಸೋಲದೇವನಹಳ್ಳಿ ಸರ್ಕಾರಿ ಪ್ರೌಢಶಾಲೆ ಚೇತನ್ ಹಾಗೂ ಪ್ರಶಾಂತ್ ಸಂಪನ್ಮೂಲ ನಿರ್ವಹಣೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರವೀಣ್ ಹಾಗೂ ದರ್ಶನ ಸುಸ್ಥಿರ ಕೃಷಿ ಪದ್ಧತಿಯಲ್ಲಿ ದ್ವಿತೀಯ, ಸ್ವತ್ಛತೆ ಆರೋಗ್ಯದಲ್ಲಿ ಪುರುಷೋತ್ತಮ, ಅಭಿಷೇಕ್ ದ್ವೀತಿಯ ಸ್ಥಾನ ಪಡೆಯುವ ಮೂಲಕ ಸರ್ಕಾರಿ ಶಾಲೆ ಹಿರಿಮೆ ಹೆಚ್ಚಿಸಿದ್ದಾರೆ. ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವಿ.ಜಿ. ಮಂಜುನಾಥ್, ಉಪನ್ಯಾಸಕಿ ಮಧುಮತಿ, ಮುಖ್ಯ ಶಿಕ್ಷಕ ಗಂಗಾ ಬೈಲಪ್ಪ, ಬಿಆರ್‌ಸಿ ಕೃಷ್ಣಮೂರ್ತಿ, ಪೆದ್ದಣ್ಣ, ಶಿಕ್ಷಕ ಶ್ರೀನಿವಾಸಮೂರ್ತಿ, ಸರ್ವಮಂಗಲ, ಹೇಮಾವತಿ ಮತ್ತಿತರರಿದ್ದರು.