ನವದೆಹಲಿ: ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ಜ.30ಕ್ಕೆ ಮುಕ್ತಾಯಗೊಳ್ಳಲಿದೆ. ಇದಾದ ಬಳಿಕ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಪಕ್ಷದ ಹೊಸ ತಂಡವನ್ನು ಕಟ್ಟುವುದರತ್ತ ಗಮನ ಹರಿಯುವ ಸಾಧತೆ ಅಧಿಕವಾಗಿದೆ.
ಫೆಬ್ರವರಿಯಲ್ಲಿ ಕಾಂಗ್ರೆಸ್‌ನ ಮಹಾಧಿವೇಶನ ನಡೆಯಲಿರುವಂತೆಯೇ ಈ ಪ್ರಕ್ರಿಯೆಗೂ ಚಾಲನೆ ಸಿಗುವ ಸಾಧ್ಯತೆ ಇದೆ. ಫೆ.24ರಿಂದ 26ರ ವರೆಗೆ ರಾಯ್‌ಪುರದಲ್ಲಿ ಮಹಾಧಿವೇಶನ ನಡೆಯಲಿದೆ.
ಯಾತ್ರೆಯಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಜತೆಗೆ ಸಕ್ರಿಯವಾಗಿ ಹೆಜ್ಜೆ ಹಾಕಿರುವ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೊಸ ತಂಡವನ್ನು ಕಟ್ಟುವಲ್ಲಿ ಪ್ರಧಾನ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜತೆಗೆ ಕಾಂಗ್ರೆಸ್‌ನಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂದು ರಾಜಸ್ಥಾನದ ಉದಯಪುರ್‌ನಲ್ಲಿ ಕೈಗೊಳ್ಳಲಾಗಿದ್ದ ನಿರ್ಣಯವನ್ನೇ ಅನುಸರಿಸಲಾಗುತ್ತದೆಯೋ ಇಲ್ಲವೋ ಎನ್ನುವುದು ಸದ್ಯಕ್ಕೆ ಗೊತ್ತಾಗಿಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ಪ್ರತಿಪಕ್ಷ ನಾಯಕರೂ ಆಗಿದ್ದಾರೆ.
ಹೊಸತಾಗಿ ರಚನೆಯಾಗಲಿರುವ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) 2024ರ ಲೋಕಸಭೆ ಹಾಗೂ ಪ್ರಸಕ್ತ ವರ್ಷ ನಡೆಯಲಿರುವ 9 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಧಾನ ಪಾತ್ರ ವಹಿಸಲಿದೆ.
30 ರ್‍ಯಾಲಿ ಲೋಕಸಭೆ ಚುನಾವಣೆಗೆ
ಮೈತ್ರಿಕೂಟ ಸ್ಥಾಪನೆಗೆ ಅಲ್ಲ: ಜೈರಾಮ್
ಕಾಂಗ್ರೆಸ್‌ನ ಜ.30ರಂದು ಶ್ರೀನಗರದಲ್ಲಿ ನಡೆಸಲಿರುವ ಬೃಹತ್ ರ್‍ಯಾಲಿ 2024ರ ಲೋಕಸಭೆ ಚುನಾವಣೆಗಾಗಿ ಪ್ರತಿಪಕ್ಷಗಳ ಒಗ್ಗಟ್ಟಿನ ಮೈತ್ರಿ ಕೂಟಕ್ಕಾಗಿ ಅಲ್ಲ. ಹೀಗೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಶ್ರೀನಗರದಲ್ಲಿ ಶನಿವಾರ ಮಾತನಾಡಿದ ಅವರು, ನಮ್ಮ ಕರ್ತವ್ಯ ಏನಿದ್ದರೂ ಭಾರತ್ ಜೋಡೋ ಯಾತ್ರೆ ಕೈಗೊಳ್ಳುವುದಾಗಿತ್ತು. ಅದರ ಪ್ರಭಾವ ಏನಾಗಲಿದೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಲಿದ್ದೇವೆ. ಇದರಿಂದಾಗಿ ನಮಗೆ ಎಷ್ಟು ಸ್ಥಾನಗಳು ಲಭ್ಯವಾಗಲಿವೆ ಎಂಬುದನ್ನು ಸದ್ಯ ಗಮನಿಸುತ್ತಿಲ್ಲ. ಜ.3ರಂದು ನಡೆಯಲಿರುವ ರ್‍ಯಾಲಿ 2024ರ ಲೋಕಸಭೆಗೆ ಪ್ರತಿಪಕ್ಷಗಳ ಒಕ್ಕೂಟ ನಿರ್ಮಾಣದ ವೇದಿಕೆ ಅಲ್ಲ’ ಎಂದರು. ಇದೇ ವೇಳೆ, ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರು ರಾಹುಲ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಪತ್ರ ಬರೆದಿದ್ದಾರೆ ಎಂದರು.