Advertisement

ಹಳೆ ತಿಂಡಿ ಹೊಸ ರುಚಿ

09:14 AM Mar 05, 2020 | mahesh |

ನಮ್ಮ ಹಿರಿಯರು, “ಅನ್ನ (ಆಹಾರ) ದೇವರಿಗಿಂತ ಅನ್ಯ ದೇವರಿಲ್ಲ’ ಎಂದಿದ್ದಾರೆ. ಹಾಗಾಗಿ, ಆಹಾರ ವ್ಯರ್ಥವಾಗಲು ಬಿಡುವುದಿಲ್ಲ. ಆದರೆ, ಅಡುಗೆ ಮಾಡುವಾಗ ಎಷ್ಟೇ ಲೆಕ್ಕಾಚಾರ ಹಾಕಿ ಮಾಡಿದರೂ ಕೆಲವೊಮ್ಮೆ ಮಾಡಿದ ಅಡುಗೆ ಉಳಿದುಬಿಡುತ್ತದೆ. ಅದನ್ನು ಕಸದ ಬುಟ್ಟಿಗೆ ಎಸೆಯಲು ಮನಸ್ಸಾಗುವುದಿಲ್ಲ. ಆಗ ಅಂಥ ಅಡುಗೆಯಿಂದಲೇ ಹೊಸ ಬಗೆಯ ಖಾದ್ಯ ತಯಾರಿಸಬಹುದು. ಚಪಾತಿ ಮಿಕ್ಕಿದ್ದು, ಅದನ್ನು ಮತ್ತದೇ ಪಲ್ಯದ ಜೊತೆ ತಿನ್ನಲು ಬೇಜಾರಾಗಿದ್ದರೆ, ಹೊಸ ರುಚಿ ಟ್ರೈ ಮಾಡಬಹುದು.

Advertisement

1. ಚಪಾತಿ ಉಪ್ಪಿಟ್ಟು
ಬೇಕಾಗುವ ಸಾಮಗ್ರಿ: ಉಳಿದ ಚಪಾತಿ, ಈರುಳ್ಳಿ , ಟೊಮೇಟೊ, ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು, ಸಕ್ಕರೆ, ಒಗ್ಗರಣೆಗೆ: ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಉದ್ದಿನಬೇಳೆ, ಹುರಿಗಡಲೆ, ಕಡಲೆಬೀಜ.

ಮಾಡುವ ವಿಧಾನ: ಚಪಾತಿಯನ್ನು ಸಣ್ಣಗೆ ತುಂಡರಿಸಿ, ಅದಕ್ಕೆ ಉಪ್ಪು, ಸಕ್ಕರೆ, ಕಡಲೆಬೀಜದ ಪುಡಿಯನ್ನು ಬೆರೆಸಿಟ್ಟುಕೊಳ್ಳಿ. ಎಣ್ಣೆಗೆ ಸಾಸಿವೆ, ಜೀರಿಗೆ, ಕರಿಬೇವು, ಉದ್ದಿನಬೇಳೆ, ಕಡಲೆಬೀಜ, ಹುರಿಗಡಲೆ ಹಾಕಿ ಒಗ್ಗರಣೆ ಸಿದ್ಧಪಡಿಸಿ. ನಂತರ ಹಸಿಮೆಣಸಿನಕಾಯಿ, ಹೆಚ್ಚಿದ ಈರುಳ್ಳಿ, ಟೊಮೇಟೊ ಹಾಕಿ ಚೆನ್ನಾಗಿ ಬೇಯಿಸಿ. ಸಿದ್ಧಪಡಿಸಿಟ್ಟ ಚಪಾತಿಯ ಮಿಶ್ರಣವನ್ನು ಒಗ್ಗರಣೆಗೆ ಹಾಕಿ, ಸ್ವಲ್ಪ ಹೊತ್ತು ಚೆನ್ನಾಗಿ ಬೇಯಿಸಿ ,ಕೊತ್ತಂಬರಿ ಸೊಪ್ಪನ್ನು ಬೆರೆಸಿದರೆ ಚಪಾತಿ ಉಪ್ಪಿಟ್ಟು ರೆಡಿ.

2. ಮಾಲದಿ
ಬೇಕಾಗುವ ಸಾಮಗ್ರಿ: ಚಪಾತಿ, ಒಣ ಕೊಬ್ಬರಿ ತುರಿ, ಗಸಗಸೆ, ಕಡಲೆಬೀಜದ ಪುಡಿ, ಹುರಿಗಡಲೆ ಪುಡಿ, ಏಲಕ್ಕಿ ಪುಡಿ, ಬೆಲ್ಲ.

ಮಾಡುವ ವಿಧಾನ: ಚಪಾತಿ ಮತ್ತು ಬೆಲ್ಲವನ್ನು, ಮಿಕ್ಸರ್‌ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಆ ಮಿಶ್ರಣಕ್ಕೆ ಒಣ ಕೊಬ್ಬರಿ ತುರಿ, ಗಸಗಸೆ, ಕಡಲೆಬೀಜ, ಹುರಿಗಡಲೆ ಮತ್ತು ಏಲಕ್ಕಿ ಪುಡಿಯನ್ನು ಹಾಕಿ (ತುಪ್ಪ ಸೇರಿಸಬಹುದು) ಚೆನ್ನಾಗಿ ಮಗುಚಿ. ಬೇಕಿದ್ದರೆ ಉಂಡೆ ಕಟ್ಟಬಹುದು. ಇದನ್ನು ತುಪ್ಪದೊಂದಿಗೆ ತಿಂದರೆ ಸ್ವಾದ ಹೆಚ್ಚು.

Advertisement

3. ವೆಜ್‌ರೋಲ್‌
ಬೇಕಾಗುವ ಸಾಮಗ್ರಿ: ಆಲೂಗಡ್ಡೆ, ಕ್ಯಾರೆಟ್‌, ದಪ್ಪಮೆಣಸಿನಕಾಯಿ, ಟೊಮೇಟೊ, ಪನ್ನೀರ್‌, ಈರುಳ್ಳಿ , ಬೆಳ್ಳುಳ್ಳಿ, ಗರಂ ಮಸಾಲ.

ಮಾಡುವ ವಿಧಾನ: ಚಪಾತಿಯನ್ನು ಬಾಣಲೆಯಲ್ಲಿ ಬಿಸಿ ಮಾಡಿಕೊಳ್ಳಿ. ಮೇಲೆ ತಿಳಿಸಿದ ಸಾಮಗ್ರಿಗಳಿಂದ ಅಥವಾ ಅವರವರ ಅಗತ್ಯಕ್ಕೆ ಅನುಗುಣವಾಗಿ ವಿವಿಧ ತರಕಾರಿಗಳಿಂದ ಪಲ್ಯ ಮಾಡಿಕೊಂಡು, ಗರಂ ಮಸಾಲ ಹಾಕಿ ಬೇಯಿಸಬೇಕು. ಬಿಸಿಮಾಡಿದ ಚಪಾತಿಗೆ ತುಪ್ಪ ಸವರಿ, ಚಟ್ನಿ ಪುಡಿ ಉದುರಿಸಿ, ಸಿದ್ಧಪಡಿಸಿದ ಪಲ್ಯವನ್ನು ಚಪಾತಿಯ ಎಲ್ಲ ಬದಿಗೂ ತುಂಬಿ, ಟೊಮೇಟೊ ಮತ್ತು ಮಯೋನೀಸ್‌ ಸಾಸ್‌ ಹಾಕಿ ಸುರುಳಿ ಸುತ್ತಬೇಕು. ಟೊಮೇಟೊ ಕೆಚ್‌ಅಪ್‌ನೊಂದಿಗೆ ಸವಿಯಬಹುದು.

 -ಶಿಲ್ಪಾ ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next