ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ಪ್ರಯೋಗಗಳು ನಡೆದಿವೆ. ಈಗ ಮತ್ತೂಂದು ಹೊಸ ಪ್ರಯತ್ನ ಆಗಿದೆ. ಅದು “ಗಿರ್ಮಿಟ್’ ಎಂಬ ಚಿತ್ರದ ಮೂಲಕ. ಹೌದು ಈ ಹಿಂದೆ “ಕಟಕ’ ಚಿತ್ರ ಮಾಡಿದ್ದ ಚಿತ್ರತಂಡವೇ ಮತ್ತೂಂದು ಹೊಸ ಪ್ರಯತ್ನ ಮಾಡುವ ಮೂಲಕ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. “ಗಿರ್ಮಿಟ್’ ಇದು ಪಕ್ಕಾ ಕಮರ್ಷಿಯಲ್ ಚಿತ್ರ. ಆದರೆ, ಸ್ಟಾರ್ ಇಲ್ಲವಷ್ಟೇ. ಮಕ್ಕಳೇ ಇಲ್ಲಿ ಸ್ಟಾರ್. ಹೌದು, ನಿರ್ದೇಶಕ ರವಿಬಸ್ರೂರ್ ಮತ್ತು ತಂಡ ಪ್ರತಿಭಾವಂತ ಮಕ್ಕಳನ್ನೇ ಆಯ್ಕೆ ಮಾಡಿಕೊಂಡು “ಗಿರ್ಮಿಟ್’ ಮಾಡಿದ್ದಾರೆ.
ಇಂಥದ್ದೊಂದು ಚಿತ್ರಕ್ಕೆ ಎನ್.ಎಸ್.ರಾಜಕುಮಾರ್ ಅವರು ನಿರ್ಮಾಣ ಮಾಡುವ ಮೂಲಕ ಸಾಥ್ ನೀಡಿದ್ದಾರೆ. ಚಿತ್ರದ ವಿಶೇಷವೆಂದರೆ, ಇಲ್ಲಿ ಮಕ್ಕಳೇ ಆವರಿಸಿದ್ದಾರೆ. ಹಾಗಂತ ಇದು ಮಕ್ಕಳ ಸಿನಿಮಾವಲ್ಲ, ಕಲಾತ್ಮಕ ಚಿತ್ರವೂ ಅಲ್ಲ. ಈಗ ಕನ್ನಡದಲ್ಲಿ ಬರುತ್ತಿರುವ ಸ್ಟಾರ್ ಸಿನಿಮಾಗಳ ಸಾಲಿಗೆ ಈ ಚಿತ್ರವೂ ಸೇರಲಿದೆ ಅಂದರೆ ಅಚ್ಚರಿ ಪಡಬೇಕಿಲ್ಲ. ಕಾರಣ, ಇಲ್ಲಿ ಸ್ಟಾರ್‌ನಟರಷ್ಟೇ ವ್ಯಾಲ್ಯು ಮಕ್ಕಳಿಗೂ ಕೊಡಲಾಗಿದೆ. ಇಲ್ಲೂ ಫ್ಯಾಮಿಲಿ, ಆ್ಯಕ್ಷನ್, ಕಾಮಿಡಿ, ಡ್ರಾಮಾ ವಿಷಯ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ.
ಮಕ್ಕಳನ್ನು ಮಕ್ಕಳಾಗಿಯೇ ನೋಡದೆ, ಅವರನ್ನೂ ವಯಸ್ಸಿಗೆ ಮೀರಿದ ವ್ಯಕ್ತಿತ್ವಗಳೊಂದಿಗೆ ನೋಡಬಹುದು ಎಂಬುದಕ್ಕೆ “ಗಿರ್ಮಿಟ್’ ಸಾಕ್ಷಿಯಾಗುತ್ತೆ. ಈಗಾಗಲೇ ಚಿತ್ರದ ಟೀಸರ್, ಹಾಡಿಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ. ಹೀಗಾಗಿ ಚಿತ್ರತಂಡಕ್ಕೂ ಚಿತ್ರದ ಮೇಲೆ ಇನ್ನಿಲ್ಲದ ಭರವಸೆ ಮೂಡಿಸಿದೆ. ನಿರ್ಮಾಪಕ ಎನ್.ಎಸ್.ರಾಜಕುಮಾರ್ ಹೇಳುವಂತೆ, “ಚಿತ್ರ ಈಗಾಗಲೇ ನಿರೀಕ್ಷೆ ಹೆಚ್ಚಿಸಿದೆ. ಯಾವುದೇ ಸ್ಟಾರ್ ಸಿನಿಮಾಗೂ ಕಮ್ಮಿ ಇಲ್ಲವೆಂಬಂತೆ ಚಿತ್ರ ಮಾಡಿದ್ದೇವೆ. ಸಿನಿಮಾ ನೋಡಿದವರಿಗೆ ಪಕ್ಕಾ ಮನರಂಜನೆ ಗ್ಯಾರಂಟಿ.
ನವೆಂಬರ್ 8 ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಅಷ್ಟೇ ಅಲ್ಲ, ಈ ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದರೊಂದಿಗೆ ಇಂಗ್ಲೀಷ್ ಭಾಷೆಯಲ್ಲೂ ಸಹ ತೆರೆಗೆ ತರಲು ತಯಾರಿ ನಡೆಸುತ್ತಿದ್ದೇವೆ. ಕಾರ್ತಿಕ್ ಅವರು ವಿತರಣೆ ಹಕ್ಕು ಪಡೆದಿದ್ದು, ಸುಮಾರು 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಿದ್ದೇವೆ’ ಎಂದು ವಿವರ ಕೊಡುತ್ತಾರೆ ನಿರ್ಮಾಪಕ ಎನ್.ಎಸ್.ರಾಜಕುಮಾರ್. ನಿರ್ದೇಶಕ ರವಿಬಸ್ರೂರ್ ಅವರಿಗೆ “ಗಿರ್ಮಿಟ್’ ಚಾಲೆಂಜ್ ಚಿತ್ರವಂತೆ.
ಅವರು ಹೇಳುವ ಪ್ರಕಾರ, “ಡ್ರಾಮಾ ಜ್ಯೂನಿಯರ್ಸ್’ ಇಂಥದ್ದೊಂದು ಚಿತ್ರ ಮಾಡೋಕೆ ಸ್ಪೂರ್ತಿ. ಅಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸುವುದನ್ನ ಕಂಡ ನನಗೆ ಇಂಥದ್ದೊಂದು ಪ್ರಯತ್ನ ಯಾಕೆ ಮಾಡಬಾರದು ಎನಿಸಿದ್ದರಿಂದ ಈ ಚಿತ್ರ ಮಾಡಲು ಮುಂದಾದೆ. ನಿರ್ಮಾಪಕರ ಪ್ರೀತಿ, ಬೆಂಬಲದಿಂದ ಇದು ಸಾಧ್ಯವಾಗಿದೆ. ಚಿತ್ರವನ್ನು ನೋಡಿದ ಯಶ್ ಮತ್ತು ರಾಧಿಕಾ ಪಂಡಿತ್ ಅವರು ನಮ್ಮ ಚಿತ್ರದ ನಾಯಕ, ನಾಯಕಿ ಪಾತ್ರಕ್ಕೆ ವಾಯ್ಸ್ ನೀಡಿದ್ದಾರೆ. ಅಷ್ಟೇ ಅಲ್ಲ, ಅಚ್ಯುತ್, ತಾರಾ, ರಂಗಾಯಣ ರಘು,ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್.ಪೇಟೆ, ಸಾಧುಕೋಕಿಲ, ಜಹಾಂಗೀರ್,ಹೊನ್ನವಳ್ಳಿ ಕೃಷ್ಣ ಸೇರಿದಂತೆ ಹಲವು ಕಲಾವಿದರು ಮಕ್ಕಳ ನಟನೆಗೆ ಧ್ವನಿ ನೀಡಿದ್ದಾರೆ.
ಶನಿವಾರ ನ.26 ರಂದು ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಸದ್ಯಕ್ಕೆ ಸಾಂಗ್ ಮತ್ತು ಡಬ್ಬಿಂಗ್ ಟೀಸರ್‌ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ’ ಎನ್ನುತ್ತಾರೆ ರವಿಬಸ್ರೂರ್. ಚಿತ್ರದಲ್ಲಿ ಆಶ್ಲೇಷ್ ರಾಜ್, ಶ್ಲಾಘಾ ಸಾಲಿಗ್ರಾಮ,ನಾಗರಾಜ್ ಜಪ್ತಿ, ಶ್ರಾವ್ಯಾ, ತನಿಶಾ ಕೋಣೆ, ಆದಿತ್ಯ, ಸಹನ ಬಸ್ರೂರ್, ಪವಿತ್ರ, ಜಯೇಂದ್ರ, ಸಿಂಚನ, ಮನೀಶ್ ಶೆಟ್ಟಿ, ಸಾರ್ಥಕ್ ಶೆಣೈ, ಮಹೇಂದ್ರ ಮತ್ತು ಪವನ್ ಬಸ್ರೂರ್ ನಟಿಸಿದ್ದಾರೆ. ಸಚಿನ್ ಬಸ್ರೂರ್ ಛಾಯಾಗ್ರಹಣವಿದೆ. ರವಿಬಸ್ರೂರ್ ಸಂಗೀತವಿದೆ.