Advertisement

ಹೊಸ ತಾಲೂಕುಗಳಿಗೆ ನಯಾಪೈಸೆ ಅನುದಾನವಿಲ್ಲ!

09:31 PM Sep 24, 2019 | Lakshmi GovindaRaju |

ಮೈಸೂರು: ಹೊಸ ತಾಲೂಕುಗಳ ರಚನೆ ಸಂಬಂಧ ದಶಕಗಳ ಬೇಡಿಕೆಯಂತೆ ಹಿಂದಿನ ಕಾಂಗ್ರೆಸ್‌ ಸರ್ಕಾರ 2017ರಲ್ಲಿ ಘೋಷಿಸಿದ ರಾಜ್ಯದ 49 ಹೊಸ ತಾಲೂಕುಗಳ ಪೈಕಿ ಹಿಂದುಳಿದ ಎಚ್‌.ಡಿ.ಕೋಟೆ ತಾಲೂಕನ್ನು ವಿಭಜಿಸಿ ಸರಗೂರು ತಾಲೂಕು ಅಸ್ತಿತ್ವಕ್ಕೆ ತಂದು 21 ತಿಂಗಳಾದರೂ ತಹಶೀಲ್ದಾರ್‌ ನೇಮಕ ಹೊರತುಪಡಿಸಿ ಬೇರಾವುದೇ ಇಲಾಖೆಗಳು ಕಾರ್ಯಾರಂಭ ಮಾಡಿದಿರುವುದರಿಂದ ಅಲ್ಲಿನ ಜನರು ಇಂದಿಗೂ ಸರ್ಕಾರಿ ಕೆಲಸಗಳಿಗಾಗಿ ಎಚ್‌.ಡಿ.ಕೋಟೆ ತಾಲೂಕಿಗೆ ಬರುವುದು ತಪ್ಪಿಲ್ಲ. ಇತ್ತ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಘೋಷಣೆಯಾದ ಸಾಲಿಗ್ರಾಮ ತಾಲೂಕು ಈವರೆಗೆ ಅಸ್ತಿತ್ವಕ್ಕೆ ಬಂದಿಲ್ಲ.

Advertisement

ಹಿಂದುಳಿದ ತಾಲೂಕು: 2017-18ರ ಆಯವ್ಯಯದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರಗೂರು ಸೇರಿ 49 ಹೊಸ ತಾಲೂಕು ಘೋಷಣೆ ಮಾಡಿದ್ದರು. 2017ರ ಆಗಸ್ಟ್‌ನಲ್ಲಿ ಬಜೆಟ್‌ ಘೋಷಣೆಗೆ ಸಚಿವ ಸಂಪುಟದ ಅನುಮೋದನೆಯೂ ದೊರೆತಿತ್ತು. ಡಾ.ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ತಾಲೂಕು ಎಂದು ಗುರುತಿಸಲಾಗಿರುವ ಎಚ್‌.ಡಿ.ಕೋಟೆ ತಾಲೂಕಿನ ಸರಗೂರು ಹೋಬಳಿಯ 51 ಗ್ರಾಮ ಮತ್ತು ಕಂದಲಿಕೆ ಹೋಬಳಿಯ 51 ಗ್ರಾಮ ಹಾಗೂ ಇಟ್ನಾ ಗ್ರಾಮ ಸೇರಿದಂತೆ 102 ಗ್ರಾಮಗಳನ್ನು ಒಳಗೊಂಡ ಸರಗೂರು ಹೊಸ ತಾಲೂಕು ರಚಿಸಿ ಸರ್ಕಾರ ರಾಜ್ಯಪತ್ರ ಪ್ರಕಟಿಸಿತ್ತು.

ಮೂಲಸೌಕರ್ಯವಿಲ್ಲ: ಸರ್ಕಾರದ ಆದೇಶದಂತೆ 2018ರ ಜನವರಿ 26ರ ಗಣರಾಜ್ಯೋತ್ಸವದ ದಿನ ಹೊಸ ತಾಲೂಕು ಅಸ್ತಿತ್ವಕ್ಕೆ ಬಂದು, ಅಲ್ಲಿನ ನಾಡಕಚೇರಿಯಲ್ಲಿ ತಹಶೀಲ್ದಾರ್‌ ಕಚೇರಿ ಕಾರ್ಯಾರಂಭ ಮಾಡಿತು. ಆದರೆ, ಕಳೆದ 21 ತಿಂಗಳಲ್ಲಿ ಹೊಸ ತಾಲೂಕಿಗೆ ನಾಲ್ವರು ತಹಶೀಲ್ದಾರರು ಬಂದಿರುವುದನ್ನು ಬಿಟ್ಟರೆ, ಹೊಸ ತಾಲೂಕಿಗೆ ಅಗತ್ಯ ಮೂಲ ಸೌಕರ್ಯಗಳು, ಬೇರೆ ಇಲಾಖೆಗಳ ಕಚೇರಿ ಕಟ್ಟಡಗಳ ನಿರ್ಮಾಣಕ್ಕಾಗಿ ಸರ್ಕಾರದಿಂದ ನಯಾ ಪೈಸೆ ಅನುದಾನವು ಬಂದಿಲ್ಲ.

ಅನುದಾನ ಇಲ್ಲ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹೊಸ ತಾಲೂಕಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆ ಮಂಜೂರಾಗಿದೆಯಾದರೂ ನೂತನ ತಾಲೂಕು ಕೇಂದ್ರದಲ್ಲಿ ಕಚೇರಿಯೇ ಇಲ್ಲದಿರುವುದರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಡಿ.ಕೋಟೆಯಲ್ಲೇ ಕಾರ್ಯ ನಿರ್ವಹಿಸುವಂತಾಗಿದೆ. ಮಿನಿ ವಿಧಾನಸೌಧ ಹಾಗೂ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆಯಾದರೂ ಈವರೆಗೆ ಸರ್ಕಾರದಿಂದ ಪ್ರಸ್ತಾವನೆಗೆ ಅನುಮೋದನೆಯೂ ದೊರೆತಿಲ್ಲ. ಅನುದಾನವು ಮಂಜೂರಾಗಿಲ್ಲ.

ಸರಗೂರು ತಾಲೂಕು: ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿ ಸರಗೂರು ತಾಲೂಕು ಕೇಂದ್ರವಾಗಿತ್ತು. ಕಾಲ ಕ್ರಮೇಣ 1905ನೇ ಇಸವಿಯಲ್ಲಿ ಸರಗೂರನ್ನು ಹೋಬಳಿ ಕೇಂದ್ರವಾಗಿಸಿ ಎಚ್‌.ಡಿ.ಕೋಟೆಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಲಾಯಿತು. ಸರಗೂರು ತಾಲೂಕು ರಚನೆ ಮಾಡುವಂತೆ 1970ರಿಂದಲೂ ಹೋರಾಟ ನಡೆದಿತ್ತು. ನಾಗರಹೊಳೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತೆ ಕೇರಳದ ಗಡಿ ತಾಲೂಕಾಗಿರುವ 5 ಹೋಬಳಿಗಳೊಂದಿಗೆ ಭೌಗೋಳಿಕವಾಗಿ 1813 ಚದರ ಕಿ.ಮೀ ವಿಸ್ತೀರ್ಣದ ಅತಿ ದೊಡ್ಡ ತಾಲೂಕಾಗಿದ್ದ ಎಚ್‌.ಡಿ.ಕೋಟೆ ತಾಲೂಕಿನಿಂದ ಸರಗೂರು, ಕಂದಲಿಕೆ ಹೋಬಳಿಗಳನ್ನು ಬೇರ್ಪಡಿಸಿ ಸರಗೂರು ಹೊಸ ತಾಲೂಕು ರಚಿಸಲಾಗಿದೆ.

Advertisement

ಸಾಲಿಗ್ರಾಮ ತಾಲೂಕು: ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ 12 ಹೊಸ ತಾಲೂಕು ಘೋಷಣೆ ಮಾಡಿದಾಗ ಶಾಸಕ ಸಾ.ರಾ.ಮಹೇಶ್‌ ಅವರ ಒತ್ತಾಸೆಯಂತೆ ಸಾಲಿಗ್ರಾಮ, ಮಿರ್ಲೆ, ಚುಂಚನಕಟ್ಟೆ ಈ ಮೂರು ಹೋಬಳಿಗಳನ್ನು ಸೇರಿಸಿ ಕೆ.ಆರ್‌.ನಗರ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರ ಸಾಲಿಗ್ರಾಮವನ್ನೂ ಹೊಸ ತಾಲೂಕಾಗಿ ಘೋಷಣೆ ಮಾಡಿದ್ದು ಬಿಟ್ಟರೆ, ಹೊಸ ತಾಲೂಕಿನ ಅಸ್ತಿತ್ವದ ದೃಷ್ಟಿಯಿಂದ ಈವರೆಗೆ ಯಾವುದೇ ಕೆಲಸಗಳಾಗಿಲ್ಲ.

ಸರಗೂರು ಹೊಸ ತಾಲೂಕಾಗಿ ಘೋಷಣೆಯಾಗಿದ್ದು ಬಿಟ್ಟರೆ, ಹೊಸ ತಾಲೂಕಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಕಲ್ಪಿಸಲು ಈವರೆಗೆ ಸರ್ಕಾರದಿಂದ 1 ರೂಪಾಯಿ ಅನುದಾನ ಬಂದಿಲ್ಲ. ಮಿನಿ ವಿಧಾನಸೌಧ ನಿರ್ಮಿಸಲು ನೀರಾವರಿ ಇಲಾಖೆಯ ಜಾಗ ಗುರುತಿಸಿ ಸರ್ಕಾರಕ್ಕೆ ಹಲವಾರು ಬಾರಿ ಪ್ರಸ್ತಾವನೆ ಸಲ್ಲಿಸಿದ್ದರೂ ಕೆಲಸ ಆಗಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬಂದಾಗ ಕೂಡ ಈ ಸಂಬಂಧ ಮನವಿ ಸಲ್ಲಿಸಿದ್ದೇನೆ.
-ಅನಿಲ್‌ ಚಿಕ್ಕಮಾದು, ಶಾಸಕರು, ಎಚ್‌.ಡಿ.ಕೋಟೆ

ತಹಶೀಲ್ದಾರ್‌ ಹುದ್ದೆ ಬಿಟ್ಟರೆ ಬೇರಾವುದೇ ಅಧಿಕಾರಿಗಳನ್ನೂ ಇಲ್ಲಿಗೆ ಕೊಟ್ಟಿಲ್ಲ. ಹೀಗಾಗಿ ಎಲ್ಲಾ ಇಲಾಖೆಗಳು ಇನ್ನೂ ಎಚ್‌.ಡಿ.ಕೋಟೆಯಲ್ಲೇ ಇವೆ. ಸರಗೂರು ಪಟ್ಟಣದಲ್ಲಿ ಮಿನಿ ವಿಧಾನಸೌಧ ಮತ್ತು ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
-ಬಿ.ಎಚ್‌.ಚಿಗರಿ, ತಹಶೀಲ್ದಾರ್‌, ಸರಗೂರು

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next