Advertisement

ಜನರ ಸಹಕಾರದಿಂದ ನೂತನ ತಾಲೂಕು ಕಾರ್ಯಾರಂಭ: ಪಾಟೀಲ

02:57 PM Jan 27, 2018 | |

ಬಸವನಬಾಗೇವಾಡಿ: ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲೂಕಿನ ಜನತೆ ಸಹಕಾರದೊಂದಿಗೆ ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಇಂದು ಎರಡು ತಾಲೂಕು ಕೇಂದ್ರಗಳು ಕಾರ್ಯಾರಂಭ ಮಾಡಲು ಸಾಧ್ಯವಾಗಿದೆ ಎಂದು ಕರ್ನಾಟಕ ನಗರ ನೀರು ಸರಬುರಾಜು ಮತ್ತು ಒಳಚರಂಡಿ ನಿಗಮ ಮಂಡಳಿ ಅಧ್ಯಕ್ಷ, ಶಾಸಕ ಶಿವಾನಂದ ಪಾಟೀಲ ಹೇಳಿದರು. ಶುಕ್ರವಾರ ನಡೆದ 69 ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ನೂತನ ಕೊಲ್ಹಾರ ತಾಲೂಕು ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಯಾವುದೇ ಒಂದು ತಾಲೂಕಾಗಲಿ, ಕ್ಷೇತ್ರವಾಗಲಿ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಅಲ್ಲಿ ರಾಜಕೀಯ ಇರಬಾರದು. ರಾಜಕೀಯ ಮಾಡಿದರೆ ಅಭಿವೃದ್ಧಿಗೆ ಮಾರಕವಾಗುತ್ತದೆ. ಆದರೆ ಬಸವನಬಾಗೇವಾಡಿ ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಲು ಇಲ್ಲಿಯ ಜನತೆಯ ಸಹಕಾರವೇ ಮುಖ್ಯ ಕಾರಣವಾಗಿದೆ ಎಂದು ಹೇಳಿದರು.
 
ಕಳೆದ 3-4 ದಶಕಗಳಿಂದ ಬಸವನಬಾಗೇವಾಡಿ ತಾಲೂಕಿನ ನಿಡಗುಂದಿ ಮತ್ತು ಕೊಲ್ಹಾರ ಪಟ್ಟಣ ತಾಲೂಕು ಕೇಂದ್ರವಾಗಬೇಕು ಎಂಬುವುದು ಈ ಭಾಗದ ಜನರ ಆಸೆಯಾಗಿತ್ತು. ಅದರಂತೆ ಕಳೆದ 4 ವರ್ಷದಿಂದ ಬಸವನಬಾಗೇವಾಡಿ ತಾಲೂಕಿನ ನಿಡಗುಂದಿ ಮತ್ತು ಕೊಲ್ಹಾರ ಪಟ್ಟಣವು ತಾಲೂಕು ಕೇಂದ್ರವಾಗಬೇಕೆಂದು ಹಲವಾರು ಬಾರಿ ರಾಜ್ಯ ಸರಕಾರಕ್ಕೆ ಮನವಿ ಮಾಡಿದ ಫಲದಿಂದ ಮತ್ತು ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲೂಕಿನ ಜನತೆಯ ಸಹಕಾರ ಮತ್ತು ಹೃದಯ ಶ್ರೀಮಂತಿಕೆಯಿಂದ ಮುದ್ದೇಬಿಹಾಳ ಶಾಸಕ ನಾಡಗೌಡ, ದೇವರಹಿಪ್ಪರಗಿ ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಹಾಗೂ ಆ ಭಾಗದ ಎಲ್ಲ ಜನಪ್ರತಿನಿಧಿಗಳ ಸಹಕಾರದಿಂದ ಇಂದು ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಎರಡು ತಾಲೂಕು ಕೇಂದ್ರಗಳು ಕಾರ್ಯಾರಂಭ ಮಾಡಲು ಸಾಧ್ಯವಾಗಿದೆ ಎಂದರು.

ನೂತನ ತಾಲೂಕು ಕೇಂದ್ರವಾದ ನಿಡಗುಂದಿ ಮತ್ತು ಕೊಲ್ಹಾರ ಪಟ್ಟಣದಲ್ಲಿ ತಾಲೂಕು ಕ್ರೀಡಾಂಗಣ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಜಿಲ್ಲೆಯಲ್ಲೇ ಈ ಎರಡು ತಾಲೂಕು ಕೇಂದ್ರಗಳು ಅಭಿವೃದ್ಧಿ ವಿಷಯದಲ್ಲಿ ಮಾದರಿ ತಾಲೂಕು ಕೇಂದ್ರವಾಗಿ ಹೊರ ಹೊಮ್ಮುವುದರಲ್ಲಿ
ಎರಡು ಮಾತಿಲ್ಲ. 

ಈಗಾಗಲೇ ಕೊಲ್ಹಾರ ಗ್ರಾಮವನ್ನು ಪಪಂ ಆಗಿ ಮೇಲ್ದಜೇಗೆ ಏರಿಸಿದ ಬಳಿಕ ಈ ಪಪಂಗೆ 28 ಕೋಟಿ ರೂ. ಅನುದಾನ ನೀಡಲಾಗಿದೆ. ಇದರ ಜೊತೆಯಲ್ಲೇ ಈ ಗ್ರಾಮಕ್ಕೆ ಮಿನಿ ಮೆಘಾ ಮಾರುಕಟ್ಟೆ ನಿರ್ಮಾಣಕ್ಕಾಗಿ 2.40 ಕೋಟಿ ಹಣ ಬಿಡುಗಡೆಯಾಗಿದೆ. ಇದರ ಜೊತೆಯಲ್ಲೇ ನಿಡಗುಂದಿ ಪ.ಪಂ.ನಿಂದ 18 ಕೋಟಿ ಅನುದಾನದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿವೆ ಎಂದು ಹೇಳಿದರು.
 
ಸಾನ್ನಿಧ್ಯ ವಹಿಸಿದ್ದ ನಿಡಗುಂದಿ ಹಿರೇಮಠದ ರುದ್ರಮುನಿ ಶ್ರೀಗಳು ಮಾತನಾಡಿ, ಯಾವುದೇ ಒಂದು ಕ್ಷೇತ್ರ ಪ್ರಗತಿಯತ್ತ ಸಾಗಬೇಕಾದರೆ ಆ ಕ್ಷೇತ್ರದ ಶಾಸಕರ ಶ್ರಮ ಮತ್ತು ಶ್ರದ್ಧೆ, ಜಾಣತನದಿಂದ ಮುನ್ನಡೆದಾಗ ಮಾತ್ರ ಸಾಧ್ಯ. ಆ ಸಾಲಿಗೆ ಶಾಸಕ ಶಿವಾನಂದ ಪಾಟೀಲ ಸೇರುತ್ತಾರೆ. ಅವರು ಕೊಟ್ಟ ಮಾತು ಇಟ್ಟ ಗುರಿ ಎಂದು ತಪ್ಪಿಲ್ಲ. ಹೀಗಾಗಿಯೇ ಬಸವನಬಾಗೇವಾಡಿ ಮತಕ್ಷೇತ್ರ ಎಲ್ಲ ರಂಗದಲ್ಲಿ ಗಣನೀಯ ಅಭಿವೃದ್ಧಿ ಕಂಡಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿಡಗುಂದಿ ಪಪಂ ಅಧ್ಯಕ್ಷ ಮೌಲಾಸಾಬ ಅತ್ತಾರ, ಉಪಾಧ್ಯಕ್ಷ ಅನ್ನಪೂರ್ಣಾ ವಡವಡಗಿ, ಜಿಪಂ ಸದಸ್ಯ ಶಾಂತಾಬಾಯಿ ನಾಗರಾಳ, ಸಂಗಮೇಶ ಬಳಗಾರ, ಬಸವರಾಜ ಕುಂಬಾರ, ಸಂಗಪ್ಪ ಕೆಂಭಾವಿ, ಶಂಕರ ರೇವಡಗಿ, ಸುರೇಶ ಸಣ್ಣಮನಿ, ಮೃತ್ಯುಂಜಯ ಯರವಿನತೆಯಮಠ, ಶಂಕರ ಗೌಡರ, ನೀಲಮ್ಮ ದೊಡ್ಡಮನಿ, ಪ್ರಭು ಪತ್ತಾರ, ಸಿದ್ದಣ್ಣ ನಾಗಠಾಣ, ಡಿವೈಎಸ್‌ಪಿ ಮಹೇಶ್ವರಗೌಡ, ಪಿಎಸ್‌ಐ ರಾಜೇಶ ಲಮಾಣಿ, ನಿಡಗುಂದಿ ತಹಶೀಲ್ದಾರ್‌ ಎಂ.ಬಿ.ನಾಗಠಾಣ, ಕೊಲ್ಹಾರ ತಹಶೀಲ್ದಾರ್‌ ಜಿ.ಪಿ. ಪವಾರ, ಕೊಲ್ಹಾರ ಪಪಂ ಅಧ್ಯಕ್ಷ ಕಲ್ಲಪ್ಪ ಸೊನ್ನದ, ಜಿಪಂ ಸದಸ್ಯರಾದ ಶಾಂತಾಬಾಯಿ ನಾಗರಾಳ, ಶ್ರೀದೇವಿ ಐಹೋಳೆ, ಪಪಂ ಉಪಾಧ್ಯಕ್ಷ ಬನಪ್ಪ ಬಾಲಗೊಂಡ ಸೇರಿದಂತೆ ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next